Site icon Vistara News

MP High Court: ಪತ್ನಿಯೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ; ಮಹತ್ವದ ತೀರ್ಪು ಪ್ರಕಟಿಸಿದ ಕೋರ್ಟ್‌

MP High Court

MP High Court

ಭೋಪಾಲ್‌: ಪತ್ನಿಯೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ (MP High Court) ತೀರ್ಪು ನೀಡಿದೆ. ವೈವಾಹಿಕ ಅತ್ಯಾಚಾರವು ಭಾರತೀಯ ದಂಡ ಸಂಹಿತೆಯಡಿ ಅಪರಾಧವಲ್ಲದ ಕಾರಣ, ಈ ಪ್ರಕರಣದಲ್ಲಿ ಹೆಂಡತಿಯ ‘ಸಮ್ಮತಿ’ ಎಂಬ ಪರಿಕಲ್ಪನೆಯು ‘ಮುಖ್ಯವಲ್ಲ’ ಎಂದು ಅದು ಹೇಳಿದೆ. ಐಪಿಸಿ ಸೆಕ್ಷನ್‌ 377 (ಅಸ್ವಾಭಾವಿಕ ಲೈಂಗಿಕತೆ) ಮತ್ತು 506 (ಕ್ರಿಮಿನಲ್‌ ಬೆದರಿಕೆ) ಅಡಿಯಲ್ಲಿ ತನ್ನ ಪತಿ ವಿರುದ್ಧ ವಿಚ್ಛೇದಿತ ಪತ್ನಿ ದಾಖಲಿಸಿದ ದೂರನ್ನು ರದ್ದುಗೊಳಿಸುವಾಗ ನ್ಯಾಯಮೂರ್ತಿ ಜಿ.ಎಸ್‌.ಅಹ್ಲುವಾಲಿಯಾ ಈ ತೀರ್ಪು ನೀಡಿದ್ದಾರೆ.

ಸುಪ್ರೀಂ ಕೋರ್ಟ್, ಹೈಕೋರ್ಟ್‌ಗಳ ಹಲವು ತೀರ್ಪುಗಳು ಮತ್ತು ಐಪಿಸಿಯ ಸೆಕ್ಷನ್ 375ರ ಅಡಿಯಲ್ಲಿನ ಅತ್ಯಾಚಾರದ ವ್ಯಾಖ್ಯಾನವನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ಜಿ.ಎಸ್.ಅಹ್ಲುವಾಲಿಯಾ ಅವರು, ಪತಿಯು ತನ್ನ ಪತ್ನಿಯೊಂದಿಗೆ ಗುದ ಸಂಭೋಗದಲ್ಲಿ ತೊಡಗುವುದು ಅತ್ಯಾಚಾರವಲ್ಲ ಎಂದು ಹೇಳಿದ್ದಾರೆ.

ಪ್ರಕರಣದ ಹಿನ್ನೆಲೆ

ದಂಪತಿಯು 2019ರ ಮೇಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಅದಾಗಿ ಒಂದು ವರ್ಷದ ಮೊದಲೇ ಅಂದರೆ 2020ರ ಫೆಬ್ರವರಿಯಿಂದ ಪತ್ನಿ ಅವರ ಪೋಷಕರ ಮನೆಯಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ಪತಿ ಹೇಳಿದ್ದಾರೆ. ಇತ್ತ ಪತ್ನಿ ಪತಿ ಮತ್ತು ಅತ್ತೆಯ ವಿರುದ್ಧ ವರದಕ್ಷಿಣೆ ಕಿರುಕುಳ ದಾಖಲಿಸಿದ್ದಾರೆ. ಸದ್ಯ ಇದು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಈ ಮಧ್ಯೆ 2022ರ ಜುಲೈಯಲ್ಲಿ ಪತ್ನಿ ಮತ್ತೆ ಅಸ್ವಾಭಾವಿಕ ಲೈಂಗಿಕತೆಯ ಆರೋಪ ಹೊರಿಸಿ ಪತಿಯ ವಿರುದ್ಧ ಮತ್ತೊಂದು ಎಫ್‌ಆರ್‌ಐ ದಾಖಲಿಸಿದ್ದರು.

“ವೈವಾಹಿಕ ಅತ್ಯಾಚಾರವನ್ನು ಇಲ್ಲಿಯವರೆಗೆ ಗುರುತಿಸಲಾಗಿಲ್ಲ” ಎಂದು ನ್ಯಾಯಮೂರ್ತಿ ಅಹ್ಲುವಾಲಿಯಾ ಹೇಳಿ ಅರ್ಜಿದಾರರ ವಿರುದ್ಧದ ಎಫ್ಐಆರ್ ಅನ್ನು ರದ್ದುಗೊಳಿಸಿದರು. ಐಪಿಸಿ ಸೆಕ್ಷನ್‌ 375ರ ಅಡಿಯಲ್ಲಿ ಅತ್ಯಾಚಾರದ ತಿದ್ದುಪಡಿ ವ್ಯಾಖ್ಯಾನವನ್ನು ಉಲ್ಲೇಖಿಸಿ, ಕೆಲವು ಸಂದರ್ಭಗಳಲ್ಲಿ ಅಸಹಜ ಕೃತ್ಯಕ್ಕೆ ಪತ್ನಿಯ ಒಪ್ಪಿಗೆ ಪಡೆಯುವುದು ಪ್ರಾಮುಖ್ಯತೆಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ ಎಂದೂ ಹೈಕೋರ್ಟ್‌ ಹೇಳಿದೆ.

ಇದನ್ನೂ ಓದಿ: Covishield Vaccine: ಭಾರತದಲ್ಲೂ ಕೋವಿಶೀಲ್ಡ್‌ ಲಸಿಕೆ ಅಡ್ಡ ಪರಿಣಾಮ ತನಿಖೆಗೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

ವಿಧಿಬದ್ಧವಾಗಿ ನಡೆಯದ ಮದುವೆಗೆ ಮಾನ್ಯತೆ ಇಲ್ಲ: ಸುಪ್ರೀಂ ಕೋರ್ಟ್‌

ಹಿಂದೂ ವಿವಾಹ ಶಾಸ್ತ್ರಬದ್ಧವಾಗಿ ಅಥವಾ ವಿಧಿಬದ್ಧವಾಗಿ ನಡೆಯದೇ ಇದ್ದಲ್ಲಿ ಅದಕ್ಕೆ ಮಾನ್ಯತೆ ಇಲ್ಲ ಎಂದು ಸುಪ್ರೀಂಕೋರ್ಟ್‌ ಇತ್ತೀಚೆಗೆ ಸ್ಪಷ್ಟಪಡಿಸಿದೆ. ಹಿಂದೂ ಸಂಪ್ರದಾಯದ ಪ್ರಕಾರ ಮದುವೆ ಅಂದರೆ ಕೇವಲ ಸಂಗೀತ, ನೃತ್ಯ ಸಂಭ್ರಮ ಅಲ್ಲ ಅಥವಾ ವ್ಯವಹಾರ ಅಲ್ಲ. ಕೆಲವು ವಿಧಿ ವಿಧಾನಗಳು, ಸಂಪ್ರದಾಯಗಳ ಮೂಲಕ ನಡೆದರೆ ಮಾತ್ರ ವಿವಾಹಕ್ಕೆ ಮಾನ್ಯತೆ ಇರುತ್ತದೆ. ಹಿಂದೂ ವಿವಾಹ ಕಾಯ್ದೆ ಪ್ರಕಾರ ಈ ವಿಧಿವಿಧಾನಗಳು, ಸಂಪ್ರದಾಯಗಳು ನಡೆದರೆ ಮಾತ್ರ ಮದುವೆಗೆ ಮಾನ್ಯತೆ ದೊರೆಯುತ್ತದೆ ಎಂದು ಕೋರ್ಟ್‌ ಹೇಳಿದೆ.

ಇತ್ತೀಚೆಗೆ ಇಬ್ಬರು ಪೈಲಟ್‌ ಆಗಿ ಕೆಲಸ ಮಾಡುತ್ತಿದ್ದ ದಂಪತಿ ಸಲ್ಲಿಸಿದ್ದ ವಿಚ್ಛೇದನಾ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗರತ್ನ ಮತ್ತು ಅಗಸ್ಟಿನ್‌ ಜಾರ್ಜ್‌ ಮಸಿಹ್‌ ಇದ್ದ ಪೀಠ, ಹಿಂದೂ ವಿವಾಹವು ಸೂಕ್ತವಾದ ಆಚರಣೆಗಳು ಇಲ್ಲದೆಯೇ ಆಗಿದ್ದಲ್ಲಿ, ಅಂತಹ ವಿವಾಹವನ್ನು ‘ಹಿಂದೂ ವಿವಾಹವೆಂದು ಪರಿಗಣಿಸಲಾಗದು’ ಎಂದು ಏಪ್ರಿಲ್‌ 19ರ ಆದೇಶದಲ್ಲಿ ಹೇಳಿತ್ತು. ‘ಹಿಂದೂ ವಿವಾಹದಲ್ಲಿ ಸಪ್ತಪದಿ ಅಂದರೆ ಋಗ್ವೇದದ ಪ್ರಕಾರ, ಏಳನೆಯ ಹೆಜ್ಜೆಯನ್ನು ಪೂರ್ಣಗೊಳಿಸಿದ ನಂತರ ವರನು ವಧುವಿಗೆ ‘ಏಳು ಹೆಜ್ಜೆಗಳ ಮೂಲಕ ನಾವು ಸಖರಾಗಿದ್ದೇವೆ. ಹೀಗಾಗಿ ವೈವಾಹಿಕ ಜೀವನಕ್ಕೆ ಕಾಲಿಡುವ ಮುನ್ನ ಚೆನ್ನಾಗಿ ಯೋಚಿಸಿ ನಿರ್ಧಾರಕ್ಕೆ ಬರಬೇಕು. ಹಿಂದೂ ವಿವಾಹ ಅಂದರೆ ಅದೊಂದು ಸಂಸ್ಕಾರ. ಭಾರತೀಯ ಸಮಾಜದಲ್ಲಿ ಮದುವೆಗೆ ಅದರದ್ದೇ ಆದ ಮೌಲ್ಯಗಳಿವೆ ಎಂದು ಹೇಳಿದೆ.

Exit mobile version