ಭೋಪಾಲ್: ಇನ್ನೇನು ಮಧ್ಯಪ್ರದೇಶದ ರಾಜ್ಯ ವಿಧಾನಸಭೆ ಚುನಾವಣೆಗೆ 5 ತಿಂಗಳು ಮಾತ್ರ ಉಳಿದಿದೆ. ಇಂಥ ಹೊತ್ತಿನಲ್ಲಿ ಆದಿವಾಸಿ ವ್ಯಕ್ತಿಯೊಬ್ಬರ ಮೇಲೆ ಬಿಜೆಪಿ ಶಾಸಕರ ನಿಕಟವರ್ತಿಯೊಬ್ಬ ಮೂತ್ರ ಮಾಡಿದ ಪ್ರಕರಣ (MP Urinating Case) ಬಿಜೆಪಿಗೆ ನುಂಗಲೂ ಆಗದ, ಉಗುಳಲೂ ಆಗದ ಬಿಸಿ ತುಪ್ಪದಂತಾಗಿದೆ.
ಈ ಪ್ರಕರಣದಿಂದ ಆಗಬಹುದಾದ ಯಾವುದೇ ಡ್ಯಾಮೇಜ್ ತಪ್ಪಿಸಿಕೊಳ್ಳಲು ಅಲ್ಲಿನ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (shivraj singh chouhan) ತಮ್ಮಿಂದಾದ ಎಲ್ಲ ಪ್ರಯತ್ನ ಮಾಡುತ್ತಿದ್ದಾರೆ. ಸಂತ್ರಸ್ತ ಆದಿವಾಸಿಯನ್ನು ಕರೆಸಿ ಅವರ ಕಾಲು ತೊಳೆದಿದ್ದಾರೆ. ಅವರ ಕ್ಷಮೆ ಕೇಳಿದ್ದಾರೆ. ಅತ್ತ ಮೂತ್ರ ಮಾಡಿದ ಆರೋಪಿ ಪ್ರವೇಶ್ ಶುಕ್ಲಾ ಎಂಬಾತನಿಗೆ ಸೇರಿದ್ದ ಅಕ್ರಮ ಮನೆಯನ್ನು ನೆಲಸಮ ಮಾಡಿದ್ದಾರೆ. ಆತನ ಮೇಲೆ ಕೇಸು ಹಾಕಿಸಿ ಜೈಲಿಗೆ ಲಾಕಪ್‌ಗೆ ತಳ್ಳಿದ್ದಾರೆ. ಆದರೂ ಈ ಪ್ರಕರಣ ಮಾತ್ರ ಬಿಜೆಪಿಯ ಬೆನ್ನು ಹತ್ತಿದೆ.
ಸದ್ಯ ಈ ಪ್ರಕರಣದಲ್ಲಿರುವ ಎರಡೂ ಸಮುದಾಯಗಳಿಂದಲೂ ಬಿಜೆಪಿ ಸಿಟ್ಟು ಎದುರಿಸುತ್ತಿದೆ. ಸಂತ್ರಸ್ತ ವ್ಯಕ್ತಿ ಆದಿವಾಸಿ. ಆರೋಪಿ ಬ್ರಾಹ್ಮಣ ಸಮುದಾಯದವನು. ಆದಿವಾಸಿಯ ಮೇಲೆ ಮೂತ್ರ ಮಾಡಿರುವುದು ತಮಗೆ ಅವಮಾನ ಎಂದೇ ಆದಿವಾಸಿಗಳು ಕೆರಳಿ ಕೆಂಡವಾಗಿದ್ದಾರೆ. ಅತ್ತ ಬ್ರಾಹ್ಮಣ ಸಮುದಾಯ ಕೂಡ, ಆರೋಪಿಯ ಮನೆಯನ್ನು ಕೆಡವಿ ಆತನ ತಂದೆ ತಾಯಿಯನ್ನು ಬೀದಿಪಾಲು ಮಾಡಿದ್ದಕ್ಕಾಗಿ ಸಿಟ್ಟಾಗಿದೆ.
ಚುನಾವಣೆ ಹತ್ತಿರದಲ್ಲಿದೆ. ಮಧ್ಯಪ್ರದೇಶದಲ್ಲಿ ಆದಿವಾಸಿಗಳಿಗೆ ಮೀಸಲಾದ 47 ವಿಧಾನಸಭೆ ಕ್ಷೇತ್ರಗಳಿವೆ. 56 ಕ್ಷೇತ್ರಗಳಲ್ಲಿ ಬ್ರಾಹ್ಮಣರ ಮತಗಳು ನಿರ್ಣಾಯಕವಾಗಿವೆ. ಪ್ರಕರಣದ ನಂತರ ಏನೇ ತೇಪೆ ಹಚ್ಚಿದರೂ, ಬ್ರಾಹ್ಮಣನೊಬ್ಬ ಆದಿವಾಸಿಯ ಮೇಲೆ ಮೂತ್ರ ಮಾಡಿದ ಚಿತ್ರವನ್ನು ತಮ್ಮ ಮನದಿಂದ ಅಳಿಸಿಹಾಕಲು ಸಾಧ್ಯವೇ ಇಲ್ಲ ಎಂದು ಆದಿವಾಸಿಗಳು ಆಕ್ರೋಶಗೊಂಡಿದ್ದಾರೆ. ಅತ್ತ ಬ್ರಾಹ್ಮಣರು, ಆರೋಪಿ ಮಾಡಿದ ತಪ್ಪಿಗೆ ಆತನನ್ನು ಶಿಕ್ಷಿಸುಬೇಕು; ಆದರೆ ಆತನ ತಂದೆ ತಾಯಿ ಯಾವ ಅಪರಾಧ ಮಾಡಿದ್ದಾರೆ ಎಂದು ಅವರ ಮನೆ ಉರುಳಿಸಬೇಕಾಗಿತ್ತು ಎಂದು ಪ್ರಶ್ನಿಸುತ್ತಿದ್ದಾರೆ.
2018ರ ಚುನಾವಣೆಯಲ್ಲಿ, ಕಾಂಗ್ರೆಸ್ ಬಹುಪಾಲು ಎಸ್‌ಟಿ ಮೀಸಲು ಸ್ಥಾನಗಳನ್ನು ಗೆದ್ದುಕೊಂಡಿತ್ತು. ಇದು ಸರ್ಕಾರ ರಚನೆಯಲ್ಲಿ ನಿರ್ಣಾಯಕವಾಗಿತ್ತು. ಬಿಜೆಪಿ ಸರ್ಕಾರ ಕೂಡ ಬುಡಕಟ್ಟುಗಳ ಓಲೈಕೆ ಮಾಡಿದೆ. PESA ಕಾಯಿದೆಯನ್ನು ಜಾರಿಗೊಳಿಳಿದೆ. ಹಬೀಬ್‌ಗಂಜ್ ರೈಲು ನಿಲ್ದಾಣಕ್ಕೆ ರಾಣಿ ಕಮಲಾಪತಿ ನಿಲ್ದಾಣ ಎಂದು ಮರುನಾಮಕರಣ ಮಾಡಿದೆ. ಬ್ರಾಹ್ಮಣರ ಓಲೈಕೆಗಾಗಿ ಇಂದೋರ್‌ನಲ್ಲಿ ʼಪರಶುರಾಮ ಲೋಕ್ʼ ಕಟ್ಟಿಸಿದೆ. ಬ್ರಾಹ್ಮಣ ಕಲ್ಯಾಣ ಮಂಡಳಿ ರಚಿಸಿದೆ; ಅರ್ಚಕರ ಸಂಬಳ 5000 ರೂ.ಗೆ ಹೆಚ್ಚಿಸಿದೆ. ಆದರೆ ಸಿಧಿ ಪ್ರಕರಣ ಇದೆಲ್ಲದನ್ನೂ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆ ಮಾಡುತ್ತಿದೆ.
“ಸ್ಮಾರ್ಟ್ ಫೋನ್ ಇಲ್ಲದ ಕಾಡುಗಳಲ್ಲಿ ವಾಸಿಸುವ ಬುಡಕಟ್ಟು ಜನಾಂಗದವರಿಗೆ ಕೂಡ ಈಗ ಈ ಘಟನೆಯ ಬಗೆಗ ಗೊತ್ತಾಗಿದೆ. ಈ ಚಿತ್ರ ಅವರನ್ನು ಆಳವಾಗಿ ಕಲಕಿದೆ. ಅದರ ನಂತರದ ಪಾದಪೂಜೆ ಎಲ್ಲ ಬರೀ ಗಿಮಿಕ್ ಅಷ್ಟೆ. ಅದು ಯಾವುದೇ ಪರಿಣಾಮ ಬೀರುವುದಿಲ್ಲ. ಇದು ಕನಿಷ್ಠ 60 ಸ್ಥಾನಗಳಲ್ಲಿ ಬಿಜೆಪಿ ಮೇಲೆ ಋಣಾತ್ಮಕ ಪರಿಣಾಮ ಬೀರಲಿದೆʼʼ ಎಂದು ಗೊಂಡ್ವಾನ ಗಣತಂತ್ರ ಪಕ್ಷ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬುಡಕಟ್ಟು ಜನಾಂಗದವರ ವಿರುದ್ಧ ಇಂತಹ ಹಲವಾರು ದೌರ್ಜನ್ಯದ ಘಟನೆಗಳು ನಡೆದಿವೆ. ರಾಜ್ಯದ ಜೈಲುಗಳಲ್ಲಿ ಅತಿ ಹೆಚ್ಚು ಬುಡಕಟ್ಟು ಜನಾಂಗದವರು ಇದ್ದಾರೆ ಎಂದು NCRB ಹೇಳಿದೆ. ಈ ಘಟನೆಯೊಂದಿಗೆ, ಆದಿವಾಸಿಗಳಿಗೆ ಘನತೆಯನ್ನು ಒದಗಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದು ಖಚಿತವಾಗಿದೆʼʼ ಎಂದು ಜೈ ಆದಿವಾಸಿ ಯುವ ಶಕ್ತಿ ಸಂಚಾಲಕರು ಹೇಳಿದ್ದಾರೆ.
ಇತ್ತ ಬ್ರಾಹ್ಮಣ ಸಮುದಾಯದ ಮುಖಂಡರೂ ಅಸಮಾಧಾನದಿಂದ ಕುದಿಯುತ್ತಿದ್ದಾರೆ. ʼʼತಪ್ಪು ಮಾಡಿದವನ ಮೇಲೆ ಕ್ರಮ ಕೈಗೊಳ್ಳಲಿ. ಇದಕ್ಕೆ ಯಾವುದೇ ಸಂಬಂಧವಿಲ್ಲದ ತಂದೆ ತಾಯಿಯ ಮನೆಯನ್ನು ಯಾಕೆ ಕೆಡವಬೇಕಿತ್ತು? ಆ ಮನೆಗೂ ಪ್ರವೇಶ್ ಶುಕ್ಲಾಗೂ ಸಂಬಂಧವಿಲ್ಲ. ಕಾನೂನು ಸುವ್ಯವಸ್ಥೆಯನ್ನು ಸರ್ಕಾರ ಕಾಪಾಡಿಕೊಂಡಿದ್ದರೆ ಈ ಘಟನೆ ನಡೆಯುತ್ತಲೇ ಇರಲಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ಬ್ರಾಹ್ಮಣ ಸಮುದಾಯದ ಕೋಪವನ್ನು ಎದುರಿಸಲಿವೆʼʼ ಎಂದು ಅಖಿಲ ಭಾರತೀಯ ಬ್ರಾಹ್ಮಣ ಸಮಾಜದ ಮುಖಂಡರು ಹೇಳಿದ್ದಾರೆ.
ಇದನ್ನೂ ಓದಿ: MP Urination Case: ‘ನನ್ನ ಮೇಲೆ ಮೂತ್ರ ವಿಸರ್ಜಿಸಿದವನ ಜೈಲಿಂದ ಬಿಟ್ಬಿಡಿ’; ಕಾರ್ಮಿಕನ ಒತ್ತಾಯ