Site icon Vistara News

MS Swaminathan: ಭಾರತದ `ಹಸಿರು ಕ್ರಾಂತಿ’ಯ ಪಿತಾಮಹ ಎಂಎಸ್ ಸ್ವಾಮಿನಾಥನ್ ಇನ್ನಿಲ್ಲ

MS Swaminathan

ಹೊಸದಿಲ್ಲಿ: ಭಾರತದ `ಹಸಿರು ಕ್ರಾಂತಿಯ ಪಿತಾಮಹʼ (Green revolution), ಕೃಷಿ ವಿಜ್ಞಾನಿ (Agriculture Scientist) ಎಂಎಸ್ ಸ್ವಾಮಿನಾಥನ್ (MS Swaminathan) ನಿಧನರಾಗಿದ್ದಾರೆ. ಅವರಿಗೆ 98 ವರ್ಷ ವಯಸ್ಸಾಗಿತ್ತು.

ಎಂಎಸ್ ಸ್ವಾಮಿನಾಥನ್ ಅವರು ಹೆಚ್ಚು ಇಳುವರಿ ನೀಡುವ ಭತ್ತದ ತಳಿಗಳನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದು ಭಾರತದ ಕಡಿಮೆ ಆದಾಯದ ರೈತರು ಹೆಚ್ಚಿನ ಇಳುವರಿಯನ್ನು ಉತ್ಪಾದಿಸಲು ಸಹಾಯ ಮಾಡಿದ್ದಲ್ಲದೆ, ಆ ದಿನಗಳ ಭಾರತದ ಜನಸಂಖ್ಯೆಯ ಬೆಳವಣಿಗೆಗೆ ತಕ್ಕಂತೆ ಸಾಕಷ್ಟು ಆಹಾರ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

ಸ್ವಾಮಿನಾಥನ್ ಅವರು ವಿವಿಧ ಇಲಾಖೆಗಳಲ್ಲಿ ಹಲವು ಕಾಲ ಸೇವೆ ಸಲ್ಲಿಸಿದ್ದಾರೆ. ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ನಿರ್ದೇಶಕ (1961-72), ICARನ ಡೈರೆಕ್ಟರ್ ಜನರಲ್, ಭಾರತ ಸರ್ಕಾರದ ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆ ಕಾರ್ಯದರ್ಶಿ (1972-79), ಕೃಷಿ ಸಚಿವಾಲಯದ ಪ್ರಧಾನ ಕಾರ್ಯದರ್ಶಿ (1979-80), ವಿಜ್ಞಾನ ಮತ್ತು ಕೃಷಿ ಇಲಾಖೆ ಆಕ್ಟಿಂಗ್ ಡೆಪ್ಯುಟಿ ಚೇರ್ಮನ್ ಮತ್ತು ನಂತರ ಸದಸ್ಯ, ಯೋಜನಾ ಆಯೋಗ (1980-82), ಫಿಲಿಪೈನ್ಸ್‌ನ ಇಂಟರ್ನ್ಯಾಷನಲ್ ರೈಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಡೈರೆಕ್ಟರ್ ಜನರಲ್ (1982-88) ಆಗಿ ಸೇವೆ ಸಲ್ಲಿಸಿದ್ದರು.

2004ರಲ್ಲಿ, ಸ್ವಾಮಿನಾಥನ್ ಅವರನ್ನು ರೈತರ ಕುರಿತ ರಾಷ್ಟ್ರೀಯ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ರೈತರ ಆತ್ಮಹತ್ಯೆ ಪ್ರಕರಣಗಳ ಹಿನ್ನೆಲೆಯಲ್ಲಿ ಅವರ ಸಂಕಷ್ಟಗಳನ್ನು ಪರಿಶೀಲಿಸಲು ಆಯೋಗವನ್ನು ಸ್ಥಾಪಿಸಲಾಗಿತ್ತು. ಆಯೋಗವು 2006ರಲ್ಲಿ ವರದಿಯನ್ನು ಸಲ್ಲಿಸಿತು. ಕನಿಷ್ಠ ಬೆಂಬಲ ಬೆಲೆ (MSP) ಸರಾಸರಿ ಉತ್ಪಾದನಾ ವೆಚ್ಚಕ್ಕಿಂತ ಕನಿಷ್ಠ 50 ಪ್ರತಿಶತದಷ್ಟು ಹೆಚ್ಚಿರಬೇಕು ಎಂದು ವರದಿ ಸೂಚಿಸಿತು.

ಅವರು ಚೆನ್ನೈನಲ್ಲಿ ಎಂಎಸ್ ಸ್ವಾಮಿನಾಥನ್ ರಿಸರ್ಚ್ ಫೌಂಡೇಶನ್ ಅನ್ನು ಸ್ಥಾಪಿಸಿದ್ದರು. ಸ್ವಾಮಿನಾಥನ್ ಅವರಿಗೆ 1971ರಲ್ಲಿ ಪ್ರತಿಷ್ಠಿತ ರೇಮನ್ ಮ್ಯಾಗ್ಸೆಸೆ ಪ್ರಶಸ್ತಿ, 1986ರಲ್ಲಿ ಆಲ್ಬರ್ಟ್ ಐನ್‌ಸ್ಟೈನ್ ವರ್ಲ್ಡ್ ಸೈನ್ಸ್ ಪ್ರಶಸ್ತಿ, 1987ರಲ್ಲಿ ಮೊದಲ ʼವಿಶ್ವ ಆಹಾರ ಪ್ರಶಸ್ತಿʼ, ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿಗಳು ದೊರೆತಿದ್ದವು.

ಸ್ವಾಮಿನಾಥನ್‌ ಅವರು ಮೂವರು ಪುತ್ರಿಯರಾದ ಸೌಮ್ಯ, ಮಧುರಾ ಮತ್ತು ನಿತ್ಯ ಅವರನ್ನು ಅಗಲಿದ್ದಾರೆ. ಅವರ ಪತ್ನಿ ಮೀನಾ 2022ರಲ್ಲಿ ವಿಧಿವಶರಾಗಿದ್ದರು.

Exit mobile version