Site icon Vistara News

MSP hike : ಅನ್ನದಾತನಿಗೆ ಸಿಹಿ ಸುದ್ದಿ, ಭತ್ತ ಸೇರಿದಂತೆ ಮುಂಗಾರಿನ ಬೆಳೆಗಳಿಗೆ ಎಂಎಸ್‌ಪಿ ಹೆಚ್ಚಳ

Paddy crop

#image_title

ನವ ದೆಹಲಿ: ಕೇಂದ್ರ ಸರ್ಕಾರ ಭತ್ತ ಸೇರಿದಂತೆ 2023-24 ಸಾಲಿನ ಮುಂಗಾರಿನ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (Minimum Support Price ) ಏರಿಸಿದೆ. ಬೆಳೆಯ ವೈವಿಧ್ಯತೆಯನ್ನು ಹೆಚ್ಚಿಸಲು ಹಾಗೂ ರೈತರ ಆದಾಯ ವೃದ್ಧಿಯ ನಿಟ್ಟಿನಲ್ಲಿ ಕೇಂದ್ರ ಸಚಿವ ಸಂಪುಟ ಸಭೆಯು ಮುಂಗಾರಿನ ಬೆಳೆಗಳಿಗೆ ಎಂಎಸ್‌ಪಿಯನ್ನು ಹೆಚ್ಚಿಸಿದೆ ಎಂದು ಕೇಂದ್ರ ಸಚಿವ ಪಿಯೂಷ್‌ ಗೋಯೆಲ್‌ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕುರಿತ ಸಚಿವ ಸಂಪುಟ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. 2023-24 ಸಾಲಿನ ಮುಂಗಾರು ಬೆಳೆಗಳಿಗೆ ಈ ಏರಿಕೆ ಅನ್ವಯವಾಗಲಿದೆ. ಕೃಷಿ ವೆಚ್ಚ ಮತ್ತು ದರ ಆಯೋಗದ ಶಿಫಾರಸಿನ ಮೇರೆಗೆ ಆಯಾ ಕಾಲಕ್ಕೆ ಅನುಗುಣವಾಗಿ ಎಂಎಸ್‌ಪಿಯನ್ನು ನಿಗದಿಪಡಿಸಲಾಗುತ್ತದೆ ಎಂದು ಕೇಂದ್ರ ಸಚಿವ ಪಿಯೂಷ್‌ ಗೋಯೆಲ್‌ ತಿಳಿಸಿದ್ದಾರೆ.

ಯಾವ ಬೆಳೆಗೆ ಎಷ್ಟು? ರಿಟೇಲ್‌ ಹಣದುಬ್ಬರ ಇಳಿಯುತ್ತಿರುವ ಈ ಸಂದರ್ಭದಲ್ಲಿ ಎಂಎಸ್‌ಪಿ ಹೆಚ್ಚಳದ ಪರಿಣಾಮ ರೈತರಿಗೆ ಅನುಕೂಲವಾಗಲಿದೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ. ಸಾಮಾನ್ಯ ದರ್ಜೆಯ ಭತ್ತದ ಎಂಎಸ್‌ಪಿಯನ್ನು ಕ್ವಿಂಟಾಲ್‌ಗೆ 2,183 ರೂ.ಗೆ ಏರಿಸಲಾಗಿದೆ. ಅಂದರೆ 143 ರೂ. ಹೆಚ್ಚಿಸಲಾಗಿದೆ. ಹೆಸರು ಕಾಳಿನ ಎಂಎಸ್‌ಪಿಯನ್ನು ಪ್ರತಿ ಕ್ವಿಂಟಾಲ್‌ಗೆ 8,558 ರೂ.ಗೆ ಏರಿಸಲಾಗಿದೆ. ಸೋಯಾಬೀನ್‌ನ ಎಂಎಸ್‌ಪಿಯನ್ನು ಪ್ರತಿ ಕ್ವಿಂಟಾಲ್‌ಗೆ 4,600 ರೂ.ಗೆ ಏರಿಸಲಾಗಿದೆ. ಎಳ್ಳಿನ ಎಂಎಸ್‌ಪಿಯನ್ನು 8,635 ರೂ.ಗೆ ವೃದ್ಧಿಸಲಾಗಿದೆ. ಹತ್ತಿಯ ಎಂಎಸ್‌ಪಿಯನ್ನು 6,620 ರೂ.ಗೆ ಹೆಚ್ಚಿಸಲಾಗಿದೆ.

ಭಾರತದಲ್ಲಿ ಭತ್ತ ಪ್ರಮುಖ ಮುಂಗಾರು ಬೆಳೆಯಾಗಿದ್ದು, ನೈಋತ್ಯ ಮುಂಗಾರುವಿನ ಪ್ರವೇಶದೊಂದಿಗೆ ಬಿತ್ತನೆ ಮಾಡಲಾಗುತ್ತದೆ. ಎಲ್‌ ನಿನೊ ಪರಿಸ್ಥಿತಿಯ ಹೊರತಾಗಿಯೂ ಜೂನ್-ಸೆಪ್ಟೆಂಬರ್‌ ವೇಳೆಗೆ ವಾಡಿಕೆಯ ಮುಂಗಾರನ್ನು ಹವಾಮಾನ ಇಲಾಖೆ ನಿರೀಕ್ಷಿಸಿದೆ. ಜೂನ್‌ 1ಕ್ಕೆ ಕೇರಳಕ್ಕೆ ಬರಬೇಕಿದ್ದ ಮುಂಗಾರು ಇನ್ನೂ ಬಂದಿಲ್ಲ.

ಕೇಂದ್ರ ಸಚಿವ ಸಂಪುಟ ಸಭೆಯು ಕಳೆದ ವಾರ ಸಹಕಾರ ಕ್ಷೇತ್ರದಲ್ಲಿ ವಿಶ್ವದ ಅತಿ ದೊಡ್ಡ ಆಹಾರ ಧಾನ್ಯ ದಾಸ್ತಾನು ಕೇಂದ್ರ ಸ್ಥಾಪಿಸಲು 1 ಲಕ್ಷ ಕೋಟಿ ರೂ.ಗಳ ಯೋಜನೆಗೆ ಅನುಮೋದನೆ ನೀಡಿದೆ. ಬೆಳೆ ಹಾನಿ ತಪ್ಪಿಸಲು ಹಾಗೂ ಬೆಲೆ ಕುಸಿತದಿಂದ ರೈತರಿಗೆ ಆಗಬಹುದಾದ ನಷ್ಟ ತಪ್ಪಿಸಲು ಈ ದಾಸ್ತಾನು ಕೇಂದ್ರ ಸಹಕಾರಿಯಾಗುವ ನಿರೀಕ್ಷೆ ಇದೆ.

ಕಳೆದ 28 ತಿಂಗಳಲ್ಲಿ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PM Garib Kalyan Yojana) ಅಡಿಯಲ್ಲಿ ಬಡವರಿಗೆ ಉಚಿತ ಪಡಿತರ ವಿತರಣೆಗೆ 1.80 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಹಾಗೆಯೇ ಪಿಎಂಜಿಕೆಎವೈ ಅಡಿಯಲ್ಲಿ ಸಾಕಷ್ಟು ಆಹಾರ ಧಾನ್ಯಗಳ ದಾಸ್ತಾನು ಕೂಡ ಇದೆ ಎಂದು ಕೇಂದ್ರ ಕೃಷಿ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಇತ್ತೀಚೆಗೆ ಹೇಳಿದ್ದಾರೆ.

ಇದನ್ನೂ ಓದಿ:PM Garib Kalyan Yojana | ಪಿಎಂಜಿಕೆಎವೈ ಅಡಿಯಲ್ಲಿ ಆಹಾರಧಾನ್ಯ ದಾಸ್ತಾನು ಸಾಕಷ್ಟಿದೆ: ಶೋಭಾ ಕರಂದ್ಲಾಜೆ

Exit mobile version