ಮುಂಬೈ: ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಕೇಶ್ ಅಂಬಾನಿ (Mukesh Ambani) ಅವರಿಗೆ ಶುಕ್ರವಾರ (ಅಕ್ಟೋಬರ್ 27) ರಾತ್ರಿ ಮತ್ತೊಂದು ಜೀವ ಬೆದರಿಕೆ (Death Threat) ಇ-ಮೇಲ್ ಮೂಲಕ ಬಂದಿದೆ. ಈ ಬಾರಿ ಮುಕೇಶ್ ಅಂಬಾನಿಗೆ ಇ-ಮೇಲ್ ಕಳುಹಿಸಿದ ವ್ಯಕ್ತಿ 20 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದಾನೆ ಮತ್ತು ದುಡ್ಡು ನೀಡದಿದ್ದರೆ ಭಾರತದ ಅತ್ಯುತ್ತಮ ಶೂಟರ್ ಮೂಲಕ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಅಂಬಾನಿ ನಿವಾಸ ʼಆಂಟಿಲಿಯಾʼದಲ್ಲಿನ ಭದ್ರತಾ ಅಧಿಕಾರಿಗಳು ಈ ಕುರಿತು ಗಾಮ್ದೇವಿ ಪೊಲೀಸರಿಗೆ ದೂರು ನೀಡಿದ್ದು, ಅದರ ಆಧಾರದ ಮೇಲೆ ಶುಕ್ರವಾರ ಎಫ್ಐಆರ್ ದಾಖಲಿಸಲಾಗಿದೆ.
ಅಕ್ಟೋಬರ್ 27ರಂದು ರಾತ್ರಿ 8.51ಕ್ಕೆ ಮುಖೇಶ್ ಅಂಬಾನಿ ಅವರ ಭದ್ರತಾ ಮುಖ್ಯಸ್ಥರಿಗೆ ಇಮೇಲ್ ಬಂದಿದೆ ಎಂದು ಮೂಲಗಳು ತಿಳಿಸಿವೆ. ಶದಾಬ್ ಖಾನ್ ಎನ್ನುವ ವ್ಯಕ್ತಿ ಇ-ಮೇಲ್ ಮಾಡಿದ್ದು, ಅದರಲ್ಲಿ ʼನೀವು ನಮಗೆ 20 ಕೋಟಿ ರೂ. ನೀಡದಿದ್ದರೆ ನಾವು ನಿಮ್ಮನ್ನು ಕೊಲ್ಲುತ್ತೇವೆ’ ಎಂಬ ಸಂದೇಶವಿತ್ತು. ನಾವು ಭಾರತದ ಅತ್ಯುತ್ತಮ ಶೂಟರ್‌ಗಳನ್ನು ಹೊಂದಿದ್ದೇವೆ ಎಂದೂ ಇಮೇಲ್‌ನಲ್ಲಿ ಉಲ್ಲೇಖಿಸಲಾಗಿತ್ತು.
ಈ ವಿಷಯ ಬೆಳಕಿಗೆ ಬಂದ ಕೂಡಲೇ, ಮುಂಬೈನ ಗಾಮ್ದೇವಿ ಪಿಎಸ್‌ನಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 387 ಮತ್ತು 506 (2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಿಂದೆಯೂ ಬಂದಿತ್ತು
ಮುಕೇಶ್ ಅಂಬಾನಿಗೆ ಈ ಹಿಂದೆಯೂ ಫೋನ್ ಮತ್ತು ಇಮೇಲ್ ಮೂಲಕ ಹಲವು ಕೊಲೆ ಬೆದರಿಕೆಗಳು ಬಂದಿವೆ. ಅಂಬಾನಿ ಮತ್ತು ಅವರ ಕುಟುಂಬ ಸದಸ್ಯರನ್ನು ಗುರಿಯಾಗಿಸುವುದಾಗಿ ಬೆದರಿಕೆ ಹಾಕಿ ಅನಾಮಧೇಯ ಕರೆ ಮಾಡಿದ ಬಿಹಾರ ಮೂಲದ ವ್ಯಕ್ತಿಯನ್ನು ಮುಂಬೈ ಪೊಲೀಸರು ಕಳೆದ ವರ್ಷ ಬಂಧಿಸಿದ್ದರು. ಕರೆ ಮಾಡಿದ ವ್ಯಕ್ತಿ ಎಚ್ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆ ಮತ್ತು ದಕ್ಷಿಣ ಮುಂಬೈಯಲ್ಲಿರುವ ಅಂಬಾನಿ ಕುಟುಂಬದ ನಿವಾಸ ‘ಆಂಟಿಲಿಯಾ’ವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ.
ಇದನ್ನೂ ಓದಿ: Mahua Moitra: ಉದ್ಯಮಿಗೆ ಸಂಸತ್ ಐಡಿ, ಪಾಸ್‌ವರ್ಡ್ ಕೊಟ್ಟಿದ್ದು ನಿಜ ಎಂದ ಮಹುವಾ ಮೊಯಿತ್ರಾ!
2021ರಲ್ಲಿ ದಕ್ಷಿಣ ಮುಂಬೈಯ ಅಂಬಾನಿ ನಿವಾಸದ ಬಳಿ 20 ಜಿಲೆಟಿನ್ ಕಡ್ಡಿಗಳು ಮತ್ತು ಬೆದರಿಕೆ ಪತ್ರವನ್ನು ಹೊಂದಿರುವ ಕಾರು ಪತ್ತೆಯಾಗಿತ್ತು. ‘ಇದು ಕೇವಲ ಟ್ರೇಲರ್ ಮಾತ್ರ’ ಎಂದು ಪತ್ರದಲ್ಲಿ ಬರೆಯಲಾಗಿತ್ತು. ಬಳಿಕ ಕಾರಿನ ಮಾಲಕ, ಉದ್ಯಮಿ ಹಿರಾನ್ ಕಳೆದ ವರ್ಷ ಮಾರ್ಚ್ 5ರಂದು ನೆರೆಯ ಥಾಣೆಯ ಕೊಲ್ಲಿಯಲ್ಲಿ ಶವವಾಗಿ ಪತ್ತೆಯಾಗಿದ್ದ.