ಮುಂಬೈ: ಮಾರ್ಚ್ 1ರಿಂದ ಪೇಟಿಎಂ ಬಳಕೆದಾರರ ಪ್ರಿಪೇಯ್ಡ್ ಪೇಮೆಂಟ್, ಫಾಸ್ಟ್‌ಟ್ಯಾಗ್‌ಗಳಿಗೆ ಠೇವಣಿ ಸ್ವೀಕರಿಸದಂತೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್‌ಗೆ (Paytm Payments Bank Ltd) ಭಾರತೀಯ ರಿಸರ್ವ್ ಬ್ಯಾಂಕ್ (Reserve Bank Of India) ನಿರ್ಬಂಧ (Paytm Crisis) ವಿಧಿಸಿದೆ. ಇದರಿಂದಾಗಿ ಪೇಟಿಎಂ ಸಂಕಷ್ಟಕ್ಕೆ ಸಿಲುಕಿದ್ದು, ಷೇರುಗಳ ಮೌಲ್ಯವೂ ಪಾತಾಳಕ್ಕೆ ಕುಸಿದಿದೆ. ಇದರ ಬೆನ್ನಲ್ಲೇ, ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ (Mukesh Ambani) ಅವರು ಪೇಟಿಎಂ ಖರೀದಿಗೆ ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಮಾಧ್ಯಮಗಳಲ್ಲಿ ಈ ಕುರಿತು ವರದಿಯಾದ ಬೆನ್ನಲ್ಲೇ ಜಿಯೋ ಫೈನಾನ್ಶಿಯಲ್ ಸರ್ವಿಸಸ್ (Jio Financial Services) ಷೇರುಗಳ ಮೌಲ್ಯವು ಶೇ.14ರಷ್ಟು ಏರಿಕೆಯಾಗಿದೆ.
“ಪೇಟಿಎಂ ಮಾತೃಸಂಸ್ಥೆ ಒನ್ 97 ಕಮ್ಯುನಿಕೇಷನ್ಸ್ ಜತೆ ರಿಲಯನ್ಸ್ ಗ್ರೂಪ್‌ನ ಜಿಯೋ ಫೈನಾನ್ಶಿಯಲ್ ಸರ್ವಿಸಸ್ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್ ಮಾತುಕತೆ ನಡೆಸುತ್ತಿವೆ. ಆರ್‌ಬಿಐ ನಿರ್ಬಂಧಕ್ಕೀಡಾಗಿರುವ ಪೇಟಿಎಂ ವ್ಯಾಲೆಟ್ ಖರೀದಿಗೆ ಚಿಂತನೆ ನಡೆದಿದೆ” ಎಂದು ದಿ ಹಿಂದು ಬ್ಯುಸಿನೆಸ್ ಲೈನ್ ವರದಿ ಮಾಡಿದೆ. ಹಾಗಾಗಿ, ಜಿಯೋ ಫೈನಾನ್ಶಿಯಲ್ ಸರ್ವಿಸಸ್‌ನ ಒಂದು ಷೇರಿನ ಮೌಲ್ಯ ಬಿಎಸ್‌ಇನಲ್ಲಿ 288.75 ರೂಪಾಯಿಗೆ ಏರಿಕೆಯಾಗಿದೆ. ಆದಾಗ್ಯೂ, ಪೇಟಿಎಂ ರಿಲಯನ್ಸ್ ತೆಕ್ಕೆಗೆ ಸೇರುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.
ಕಳೆದ ನವೆಂಬರ್‌ನಿಂದಲೇ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ಖರೀದಿಗೆ ರಿಲಯನ್ಸ್ ಮಾತಕತೆ ನಡೆಸಲಾಗುತ್ತಿತ್ತು. ಆದರೆ, ಆರ್‌ಬಿಐ ನಿಷೇಧ ಹೇರಿದ ಬಳಿಕ ಎಚ್‌ಡಿಎಫ್‌ಸಿಯು ಮಾತುಕತೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನ ಮಾತೃಸಂಸ್ಥೆಯಾದ ಒನ್97 ಕಮ್ಯುನಿಕೇಷನ್ಸ್ ಲಿ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿ.ಗಳ ನೋಡೆಲ್ ಖ್ಯಾತೆಗಳನ್ನು ರಿಸರ್ವ್ ಬ್ಯಾಂಕ್ ರದ್ದು ಮಾಡಿದೆ. ಬ್ಯಾಂಕಿನಲ್ಲಿನ ನಿಯಮಗಳ ನಿರಂತರ ಉಲ್ಲಂಘನೆ ಮತ್ತು ನಿರಂತರ ಮೇಲ್ವಿಚಾರಣೆಯ ಕೊರತೆಯ ಬಗ್ಗೆ ಹೊರಗಿನ ಆಡಿಟ್‌ಗಳ ನಂತರ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ರಿಸರ್ವ್ ಬ್ಯಾಂಕ್ ತನ್ನ ಆದೇಶದಲ್ಲಿ ತಿಳಿಸಿದೆ. ಹಾಗೆಯೇ, ಈಗ ಆರ್‌ಬಿಐ ಆದೇಶವು ಪೇಟಿಎಂನ ಏಕೀಕೃತ ಪಾವತಿ ವ್ಯವಸ್ಥೆ ಅಥವಾ ಯುಪಿಐ ವಿಭಾಗಕ್ಕೆ ಯಾವುದೇ ತೊಂದರೆಯುಂಟು ಮಾಡುವುದಿಲ್ಲ. ಯುಪಿಐ ವ್ಯವಹಾರವು ಮುಂದುವರಿಯಲಿದೆ.
ಇದನ್ನೂ ಓದಿ: Paytm payments Bank: ಕುಸಿತದ ನಡುವೆಯೇ ₹244 ಕೋಟಿ ಬೆಲೆಯ ಪೇಟಿಎಂ ಷೇರು ಖರೀದಿಸಿದ ಮಾರ್ಗನ್ ಸ್ಟಾನ್ಲಿ
ಪೇಟಿಎಂ ಉದ್ಯೋಗಿಗಳ ವಜಾ ಇಲ್ಲ ಎಂದ ಪೇಟಿಎಂ
ಪೇಟಿಎಂ ಸಂಕಷ್ಟದಲ್ಲಿದ್ದರೂ ಉದ್ಯೋಗಿಗಳನ್ನು ವಜಾಗೊಳಿಸುವುದಿಲ್ಲ ಎಂದು ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಎಂದು ಹೇಳಿದ್ದಾರೆ. “ಪೇಟಿಎಂ ಉದ್ಯೋಗಿಗಳು ಒಂದೇ ಕುಟುಂಬಸ್ಥರು ಇದ್ದಹಾಗೆ. ಹಾಗಾಗಿ, ಯಾವುದೇ ಉದ್ಯೋಗಿಗಳು ಭಯಪಡಬೇಕಿಲ್ಲ. ನಮಗೆ ತುಂಬ ಬ್ಯಾಂಕ್‌ಗಳು ಸಹಾಯ ಮಾಡುತ್ತಿವೆ. ಕಂಪನಿಯ ಉದ್ಯೋಗಿಗಳನ್ನು ನಾವು ವಜಾಗೊಳಿಸುವುದಿಲ್ಲ. ಯಾರು ಕೂಡ ಯೋಚಿಸಬೇಕಿಲ್ಲ” ಎಂದು ತಿಳಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ