ಮುಂಬೈ: ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ರಿಲಯನ್ಸ್ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (Reliance AGM 2023) ಮಹತ್ವದ ಬದಲಾವಣೆಗಳನ್ನು ಮುಕೇಶ್ ಅಂಬಾನಿ ಘೋಷಿಸಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಮಂಡಳಿಯ ಸ್ಥಾನಕ್ಕೆ ಮುಕೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ (Nita Ambani) ರಾಜೀನಾಮೆ ನೀಡಿದ್ದಾರೆ. ಹಾಗೆಯೇ, ಮುಕೇಶ್ ಅಂಬಾನಿ (Mukesh Ambani) ಅವರು ತಮ್ಮ ಮಕ್ಕಳನ್ನು ಮಂಡಳಿಗೆ ನೇಮಕ ಮಾಡಿದ್ದಾರೆ.
ರಿಲಯನ್ಸ್ ಇಂಡಸ್ಟ್ರೀಸ್ ಮಂಡಳಿಗೆ ಮುಕೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ, ಪುತ್ರರಾದ ಅನಂತ್ ಹಾಗೂ ಆಕಾಶ್ ಅಂಬಾನಿ ಅವರು ನೇಮಕಗೊಂಡಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯ ವಹಿವಾಟುಗಳನ್ನು ಮಕ್ಕಳೇ ನೋಡಿಕೊಳ್ಳಲಿದ್ದು, ಇದಕ್ಕಾಗಿ ಮಂಡಳಿಗೆ ಅವರನ್ನು ನೇಮಿಸಲಾಗಿದೆ. ಇವರು ಕಂಪನಿಯ ಆಗು-ಹೋಗುಗಳನ್ನು ಅರಿತು, ಮುಂದಿನ ದಿನಗಳಲ್ಲಿ ಕಂಪನಿಯನ್ನು ಮುನ್ನಡೆಸಲು ಹುರಿಗೊಳಿಸಲಾಗುತ್ತದೆ. ಹಾಗಾಗಿಯೇ, ನೇಮಕ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಸಭೆಯ ಪ್ರಮುಖ ಘೋಷಣೆಗಳು
ರಿಲಯನ್ಸ್ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮುಕೇಶ್ ಅಂಬಾನಿ ಅವರು ಹಲವು ಘೋಷಣೆ ಮಾಡಿದರು. “ಸೆಪ್ಟೆಂಬರ್ 19ರಂದು ಜಿಯೋ ಏರ್ ಫೈಬರ್‌ಗೆ ಚಾಲನೆ ನೀಡಲಾಗುತ್ತದೆ. 2030ರ ವೇಳೆಗೆ 100 ಗಿಗಾವ್ಯಾಟ್ ಹಸಿರು ಇಂಧನ ಉತ್ಪಾದನೆ ಗುರಿ ಹೊಂದಲಾಗಿದೆ. 5 ಜಿ ಸೇವೆ ಒದಗಿಸುವಲ್ಲಿ ರಿಲಯನ್ಸ್ ಮುಂದಿದೆ. ಡಿಸೆಂಬರ್ ವೇಳೆಗೆ ದೇಶಾದ್ಯಂತ 5 ಜಿ ಇಂಟರ್‌ನೆಟ್ ಸೇವೆ ಒದಗಿಸುವುದು ನಮ್ಮ ಗುರಿಯಾಗಿದೆ” ಎಂದು ತಿಳಿಸಿದರು.
ಇದನ್ನೂ ಓದಿ: Reliance Brands : ರಿಲಯನ್ಸ್ ತೆಕ್ಕೆಗೆ ಆಲಿಯಾ ಭಟ್ ಕಿಡ್ಸ್‌ವೇರ್ ಬ್ರಾಂಡ್
“ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಳೆದ 10 ವರ್ಷದಲ್ಲಿ 150 ಶತಕೋಟಿ ಡಾಲರ್ ಹೂಡಿಕೆ ಮಾಡಿದೆ. ಇದರಿಂದಾಗಿ ಮೂಲ ಸೌಕರ್ಯ ಅಭಿವೃದ್ಧಿ ಜತೆಗೆ ಉದ್ಯೋಗ ಕೂಡ ಲಭಿಸಿದೆ. 2023ರಲ್ಲಿ ಕಂಪನಿಯು ದೇಶದಲ್ಲಿ 2.6 ಲಕ್ಷ ಜನರಿಗೆ ಉದ್ಯೋಗ ನೀಡಿದೆ. ಜಿಯೋ ಫೈಬರ್ 1 ಕೋಟಿ ಗ್ರಾಹಕರನ್ನು ದಾಟಿದೆ. ಇದರಿಂದಾಗಿ ಕಂಪನಿಗೆ ಭಾರಿ ಪ್ರಮಾಣದಲ್ಲಿ ಲಾಭವೂ ಆಗಿದೆ. ಮುಂದಿನ ದಿನಗಳಲ್ಲಿ ಮರು ನವೀಕರಣ ಹಾಗೂ ಜೈವಿಕ ಇಂಧನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು” ಎಂದು ತಿಳಿಸಿದರು.