Site icon Vistara News

ಮುಂದಿನ ದಿನಗಳಲ್ಲಿ ತೆಲುಗು ಜನರು ದೇಶವನ್ನೇ ಆಳಲಿದ್ದಾರೆ; ಚರ್ಚೆ ಹುಟ್ಟು ಹಾಕಿದ ಬಿಆರ್‌ಎಸ್‌ ನಾಯಕ

reddy

reddy

ಹೈದರಾಬಾದ್‌: ಬಾಲಿವುಡ್‌ ನಟ ರಣಬೀರ್‌ ಕಪೂರ್‌ (Ranbir Kapoor) ಅಭಿನಯದ ಪ್ಯಾನ್‌ ಇಂಡಿಯಾ ಚಿತ್ರ ಅನಿಮಲ್‌ (Animal) ಡಿಸೆಂಬರ್‌ 1ರಂದು ತೆರೆಗೆ ಬರಲಿದೆ. ಆ ಪ್ರಯುಕ್ತ ಚಿತ್ರತಂಡ ದೇಶದ ವಿವಿಧ ಭಾಗಗಳಲ್ಲಿ ಪ್ರಚಾರ ನಡೆಸುತ್ತಿದೆ. ಈ ಮಧ್ಯೆ ಹೈದರಾಬಾದ್‌ನಲ್ಲಿ ಚಿತ್ರತಂಡ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದ ಭಾರತ್‌ ರಾಷ್ಟ್ರ ಸಮಿತಿ (Bharat Rashtra Samithi-BRS) ಮುಖಂಡ, ಸಚಿವ ಚಮಕುರ ಮಲ್ಲ ರೆಡ್ಡಿ, ”ಮುಂದಿನ 5 ವರ್ಷಗಳಲ್ಲಿ ತೆಲುಗು ಮಂದಿ ಹಾಲಿವುಡ್‌, ಬಾಲಿವುಡ್‌ ಆಳಲಿದ್ದಾರೆ. ಹೀಗಾಗಿ ರಣಬೀರ್‌ ಕಪೂರ್‌ ಮುಂಬೈಯಿಂದ ಹೈದರಾಬಾದ್‌ಗೆ ಸ್ಥಳಾಂತರವಾಗಲಿದ್ದಾರೆ” ಎಂದಿದ್ದಾರೆ. ಸದ್ಯ ಅವರ ಮಾತು ವಿವಾದದ ಕಿಡಿ ಹೊತ್ತಿಸಿದ್ದು, ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಮಲ್ಲ ರೆಡ್ಡಿ ಹೇಳಿದ್ದೇನು?

“ಕೇಳಿ ರಣಬೀರ್ ಕಪೂರ್, ಐದು ವರ್ಷಗಳಲ್ಲಿ ಹಾಲಿವುಡ್, ಬಾಲಿವುಡ್ ಎಲ್ಲವನ್ನೂ ತೆಲುಗು ಜನರು ಆಳುತ್ತಾರೆ. ಒಂದು ವರ್ಷದ ನಂತರ ನೀವು ಹೈದರಾಬಾದ್‌ಗೆ ಸ್ಥಳಾಂತರಗೊಳ್ಳುತ್ತೀರಿ. ಯಾಕೆಂದರೆ ಮುಂಬೈ ಹಳೆಯದಾಗಿದೆ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಇದೆ. ಹೀಗಾಗಿ ಹಿಂದೂಸ್ಥಾನವನ್ನು ಹೈದರಾಬಾದ್ ಆಳಲಿದೆʼʼ ಎಂದು ಮಲ್ಲ ರೆಡ್ಡಿ ವೇದಿಕೆ ಮೇಲೆ ಹೇಳಿದ್ದಾರೆ.

“ನಿರ್ದೇಶಕ ಎಸ್.ಎಸ್.ರಾಜಮೌಳಿ, ನಿರ್ಮಾಪಕ ದಿಲ್ ರಾಜು ಈಗಾಗಲೇ ಛಾಪು ಮೂಡಿಸಿದ್ದಾರೆ. ಇದೀಗ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಸರದಿ. ನಮ್ಮ ಹೈದರಾಬಾದ್ ಅಗ್ರಸ್ಥಾನದಲ್ಲಿದೆ. ತೆಲುಗು ಜನರು ಸ್ಮಾರ್ಟ್. ನಮ್ಮ ನಾಯಕಿ ರಶ್ಮಿಕಾ ಮಂದಣ್ಣ ತುಂಬಾ ಸ್ಮಾರ್ಟ್. ʼಪುಷ್ಪʼ ಚಿತ್ರವು ಸಂಚಲನ ಸೃಷ್ಟಿಸಿದೆ. ಅಶ್ವಮೇಧ ಯಾಗವನ್ನು ಇಲ್ಲಿ ನಡೆಸಲಾಯಿತು. ʼಅನಿಮಲ್ʼ ಚಿತ್ರ 500 ಕೋಟಿ ರೂ. ಗಳಿಸಲಿದೆʼʼ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ರಣಬೀರ್ ಕಪೂರ್‌ ಜತೆಗೆ ನಟ ಮಹೇಶ್ ಬಾಬು ಮತ್ತು ಎಸ್.ಎಸ್.ರಾಜಮೌಳಿ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸದ್ಯ ಮಲ್ಲ ರೆಡ್ಡಿ ಅವರ ಹೇಳಿಕೆ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. “ಅವರು ಕೇವಲ ವೋಟ್ ಬ್ಯಾಂಕ್‌ಗಾಗಿ ಹೀಗೆಲ್ಲ ಮಾತನಾಡುತ್ತಿದ್ದಾರೆʼʼ, ʼʼಅವರು ರಾಜಕಾರಣಿ. ಅವರಿಗೆ ಮತಗಳು ಬೇಕು. ಹೀಗಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆʼʼ ಎಂದು ಹಲವರು ಟೀಕಿಸಿದ್ದಾರೆ.

ಇದನ್ನೂ ಓದಿ: Rashmika Mandanna: ಕನ್ನಡದಲ್ಲೇ ಮಾತನಾಡಿದ ರಶ್ಮಿಕಾ; ರಣಬೀರ್ ಮಾತಿಗೆ ಕನ್ನಡಿಗರು ಫಿದಾ!

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ʼಅನಿಮಲ್‌ʼ ಚಿತ್ರ ಈಗಾಗಲೇ ಕುತೂಹಲ ಕೆರಳಿಸಿದೆ. ರಣಬೀರ್‌ ಕಪೂರ್‌ ಮತ್ತು ರಶ್ಮಿಕಾ ಮಂದಣ್ಣ ಮೊದಲ ಬಾರಿ ತೆರೆ ಹಂಚಿಕೊಳ್ಳುತ್ತಿರುವ ಈ ಚಿತ್ರದಲ್ಲಿ ಅನಿಲ್‌ ಕಪೂರ್‌, ಬಾಬ್ಬಿ ಡಿಯೋಲ್‌ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದ್ದು, ನಿರೀಕ್ಷೆ ಹೆಚ್ಚಿಸಿದೆ. ಈ ಮೊದಲು ಬಿಡುಗಡೆಯಾದ ಹಾಡುಗಳಲ್ಲಿ ರಣಬೀರ್‌ ಮತ್ತು ರಶ್ಮಿಕಾ ಲಿಪ್‌ ಲಾಕ್‌ ಮಾಡುವ ಧಾರಾಳ ದೃಶ್ಯಗಳು ಕಂಡು ಬಂದಿದ್ದು, ಆ ಬಗ್ಗೆ ಚರ್ಚೆ ನಡೆದಿತ್ತು. ಈ ಸಿನಿಮಾ ಹಿಂದಿ ಜತೆಗೆ ಕನ್ನಡ, ತಮಿಳು, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ. ಹೀಗಾಗಿ ಚಿತ್ರತಂಡ ಕೆಲವು ದಿನಗಳಿಂದ ದೇಶದ ವಿವಿಧ ನಗರಗಳಲ್ಲಿ ಪ್ರಚಾರ ನಡೆಸುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version