Site icon Vistara News

NIA New DG: ಎನ್‌ಐಎ ಮಹಾನಿರ್ದೇಶಕರಾಗಿ ಮುಂಬಯಿ ದಾಳಿಯ ಹೀರೋ ಅಧಿಕಾರ ಸ್ವೀಕಾರ

sadanand vasanth date NIA new DG

ಹೊಸದಿಲ್ಲಿ: ಈ ಹಿಂದೆ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಮುಖ್ಯಸ್ಥರಾಗಿದ್ದ ಸದಾನಂದ ವಸಂತ ದಾತೆ (Sadanand Vasant Date) ಅವರು ರಾಷ್ಟ್ರೀಯ ತನಿಖಾ ಸಂಸ್ಥೆ (NIA- ಎನ್‌ಐಎ) ಹೊಸ ಮಹಾನಿರ್ದೇಶಕರಾಗಿ (NIA new DG) ಆಯ್ಕೆಯಾಗಿದ್ದಾರೆ. ಇಂದು ಅವರು ಅಧಿಕಾರ ಸ್ವೀಕರಿಸಿದರು.

ತನಿಖಾ ಸಂಸ್ಥೆಯ ಮಹಾನಿರ್ದೇಶಕರಾಗಿ ಸದಾನಂದ ವಸಂತ್ ದಾತೆ ಅವರನ್ನು ಸ್ವಾಗತಿಸುವ ಸಂದರ್ಭದಲ್ಲಿ NIA ಮೈಕ್ರೋಬ್ಲಾಗಿಂಗ್ ಸೈಟ್ Xನ ಅಧಿಕೃತ ಹ್ಯಾಂಡಲ್‌ನಲ್ಲಿ ಚಿತ್ರವನ್ನು ಅಪ್‌ಲೋಡ್ ಮಾಡಿದೆ. “ರಾಷ್ಟ್ರೀಯ ತನಿಖಾ ಸಂಸ್ಥೆಯ ಹೊಸ ಮಹಾನಿರ್ದೇಶಕರಾಗಿ ಸದಾನಂದ ವಸಂತ ದಾತೆ ಅವರು ಅಧಿಕಾರ ವಹಿಸಿಕೊಂಡರು” ಎಂದು ಪೋಸ್ಟ್‌ನಲ್ಲಿ ಚಿತ್ರದೊಂದಿಗೆ ಬರೆದಿದ್ದಾರೆ.

ಮಹಾನಿರ್ದೇಶಕರಾಗಿ ಸೇವೆಯಿಂದ ನಿವೃತ್ತರಾದ ದಿನಕರ್ ಗುಪ್ತಾ ಅವರಿಂದ ದಾತೆ ಅವರು ಅಧಿಕಾರ ಪಡೆದರು. 2008ರ ನವೆಂಬರ್‌ 26ರಂದು ಮುಂಬೈ ಮೇಲೆ ನಡೆದ ಉಗ್ರರ ಸರಣಿ ದಾಳಿ ವೇಳೆ ಮಹಾರಾಷ್ಟ್ರ ATS ಮುಖ್ಯಸ್ಥರಾಗಿದ್ದ ಸದಾನಂದ ವಸಂತ್, ದಾಳಿಕೋರರನ್ನು ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಶೌರ್ಯಕ್ಕಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕವನ್ನು ನೀಡಿ ಗೌರವಿಸಲಾಗಿತ್ತು.

ಮಹಾರಾಷ್ಟ್ರ ಕೇಡರ್‌ನ 1990ರ ಬ್ಯಾಚ್‌ನ IPS ಅಧಿಕಾರಿಯಾದ ಸದಾನಂದ ವಸಂತ ದಾತೆ, NIAಗೆ ಸೇರುವ ಮೊದಲು ಮಹಾರಾಷ್ಟ್ರದಲ್ಲಿ ATSನ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. 2014ರಲ್ಲಿ ಪ್ರತಿಭಾನ್ವಿತ ಸೇವೆ ಮತ್ತು ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕವನ್ನು ಸಹ ಪಡೆದಿದ್ದಾರೆ.

ಭಯಂದರ್ ವಸಾಯಿ ವಿರಾರ್‌ನ ಪೊಲೀಸ್ ಕಮಿಷನರ್, ಕಾನೂನು ಮತ್ತು ಸುವ್ಯವಸ್ಥೆಯ ಜಂಟಿ ಕಮಿಷನರ್ ಮತ್ತು ಮುಂಬೈ ಅಪರಾಧ ವಿಭಾಗದ ಜಂಟಿ ಕಮಿಷನರ್ ಆಗಿಯೂ ದಾತೆ ಕಾರ್ಯ ನಿರ್ವಹಿಸಿದ್ದರು. ಭಾರತ ಸರ್ಕಾರದಲ್ಲಿ ಸಿಬಿಐನಲ್ಲಿ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಆಗಿ ಮತ್ತು ಸಿಆರ್‌ಪಿಎಫ್ ಇನ್ಸ್‌ಪೆಕ್ಟರ್ ಜನರಲ್ ಆಗಿ ಎರಡು ಅವಧಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: Money Guide: ಎನ್‌ಪಿಎಸ್‌ನಿಂದ ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌ವರೆಗೆ; ನಾಳೆಯಿಂದಲೇ ಬದಲಾಗುತ್ತವೆ ಈ ಎಲ್ಲ ನಿಯಮಗಳು

Exit mobile version