ಮುಂಬೈ: ಸಾಮಾಜಿಕ ಜಾಲತಾಣಗಳಲ್ಲಿ (Social Media) ಅಪರಿಚಿತರು ಗೆಳೆಯರಾಗುತ್ತಾರೆ. ನಮ್ಮ ಹವ್ಯಾಸ, ಹಿತಾಸಕ್ತಿಗಳಿಗೆ ಅನುಗುಣವಾಗಿ ಗೆಳೆಯರು ಸಿಗುತ್ತಾರೆ. ನಮ್ಮ ಪ್ರತಿಭೆ, ಅಭಿಪ್ರಾಯ ವ್ಯಕ್ತಪಡಿಸಲು ಕೂಡ ಸಾಮಾಜಿಕ ಜಾಲತಾಣಗಳು ವೇದಿಕೆಯಾಗಿವೆ. ಆದರೆ, ಮುಂಬೈನಲ್ಲಿ ಇನ್‌ಸ್ಟಾಗ್ರಾಂ ಮೂಲಕ ಸಿಕ್ಕ ಗೆಳೆಯನೊಬ್ಬನನ್ನು (Instagram Friend) ನಂಬಿದ 21 ವರ್ಷದ ಯುವತಿಯು ಅತ್ಯಾಚಾರಕ್ಕೀಡಾಗಿದ್ದಾಳೆ. ದಕ್ಷಿಣ ಮುಂಬೈನ (South Mumbai ವೊರ್ಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜನವರಿ 13ರಂದು ಯುವತಿ ಅತ್ಯಾಚಾರಕ್ಕೀಡಾಗಿದ್ದು, ಈ ಕುರಿತು ಆಕೆಯೇ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾಳೆ.
“ನಾನು ಅನುಭವಿಸಿದ ಕೆಟ್ಟ ಅನುಭವದ ಬಗ್ಗೆ ಹೇಳಬೇಕು. ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾದ ವ್ಯಕ್ತಿಯ ಜತೆ ನಾನು ರಾತ್ರಿ ಸುತ್ತಾಡಲು ಹೋಗಿದ್ದೆ. ಇಬ್ಬರೂ ಒಂದು ಕಡೆ ಪಾರ್ಟಿ ಮುಗಿಸಿ, ಬೇರೊಂದು ರೆಸ್ಟೋರೆಂಟ್‌ಗೆ ಹೋದೆವು. ಆಗ ಆತನು ನನಗೆ ಹೆಚ್ಚಿನ ಮದ್ಯ ಸೇವಿಸುವಂತೆ ಒತ್ತಾಯಿಸಿದ. ಅನಿವಾರ್ಯವಾಗಿ ನಾನು ಮದ್ಯ ಸೇವಿಸಿದೆ. ನನಗೆ ಮತ್ತು ಬರುವ ಔಷಧಿ ನೀಡಿದ್ದ ಎಂಬುದು ಆಮೇಲೆ ಗೊತ್ತಾಯಿತು. ಅಷ್ಟೊತ್ತಿಗಾಗಲೇ ಆತನು ನನ್ನ ಮೇಲೆ ಅತ್ಯಾಚಾರ ಎಸಗಲು ಶುರು ಮಾಡಿದ್ದ. ನಾನು ತಡೆದಾಗ ನನ್ನ ಮೇಲೆ ಹಲ್ಲೆ ನಡೆಸಿದ” ಎಂದು ಯುವತಿಯು ಪೋಸ್ಟ್ ಮಾಡಿದ್ದಾಳೆ.
ಅತ್ಯಾಚಾರ ಎಸಗಿದ ಆರೋಪಿಯ ಮನೆಯಲ್ಲಿ ಕೃತ್ಯ ನಡೆದಿದೆ ಎಂದು ಯುವತಿ ಹೇಳಿದ್ದಾಳೆ. “ಹೀತಿಕ್ ಶಾ ಎಂಬಾತ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ನನ್ನನ್ನು ಒಂಟಿಯಾಗಿ ಬಿಟ್ಟು ಹೋದ ಬಳಿಕ ನನ್ನ ಸಂಬಂಧಿಯೊಬ್ಬರು ಮನೆಗೆ ಡ್ರಾಪ್ ಮಾಡಿದರು. ನನ್ನ ಮೇಲೆ ನಡೆದಿರುವ ದೌರ್ಜನ್ಯದ ಕುರಿತು ಕುಟುಂಬಸ್ಥರಿಗೆ ತಿಳಿಸಿದೆ. ಇದಾದ ಬಳಿಕ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದೇವೆ. ನನ್ನ ಮೇಲೆ ದೌರ್ಜನ್ಯ ಎಸಗಿದವನಿಗೆ ಶಿಕ್ಷೆಯಾಗಬೇಕು” ಎಂದು ಯುವತಿ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ದೆಹಲಿಯಲ್ಲಿ ಕೆಲ ವಾರಗಳ ಹಿಂದಷ್ಟೇ ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಚೆಲುವೆಯೊಬ್ಬಳಿಗಾಗಿ 18 ವರ್ಷದ ಯುವಕನೊಬ್ಬ 20 ವರ್ಷದ ಯುವಕನನ್ನು ಕೊಲೆ ಮಾಡಿದ ಪ್ರಕರಣ ಭಾರಿ ಸುದ್ದಿಯಾಗಿತ್ತು. ಸುಮಾರು 50 ಬಾರಿ ಚಾಕು ಇರಿದು ಯುವಕನನ್ನು ಕೊಲೆ ಮಾಡಲಾಗಿದ್ದು, ಇಡೀ ಪ್ರಕರಣವೀಗ ದೆಹಲಿ ಜನರನ್ನು ಆತಂಕಕ್ಕೀಡು ಮಾಡಿತ್ತು.
ಇದನ್ನೂ ಓದಿ: Physical Abuse : ಕಾಮುಕ ಅಣ್ಣನಿಂದಲೇ ಅತ್ಯಾಚಾರ; ಮಗುವಿಗೆ ಜನ್ಮ ನೀಡಿದ 15ರ ಬಾಲಕಿ
ದೆಹಲಿಯ ಭಗೀರಥಿ ವಿಹಾರದಲ್ಲಿ ಬುಧವಾರ (ಡಿಸೆಂಬರ್ 27) ರಾತ್ರಿ ಮಹೀರ್ (ಇಮ್ರಾನ್) ಎಂಬ ಯುವಕನು ಹತ್ಯೆಗೀಡಾಗಿದ್ದಾನೆ. ಪ್ರೀತಿಗಾಗಿ ಅರ್ಮಾನ್ ಎಂಬಾತನೇ ಮಹೀರ್‌ನನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪೈಸಲ್ ಹಾಗೂ ಸಮೀರ್ ಎಂಬ ಗೆಳೆಯರ ಜತೆ ಭಗೀರಥಿ ವಿಹಾರಕ್ಕೆ ಬಂದ ಅರ್ಮಾನ್, ಮಹೀರ್‌ಗೆ ಸುಮಾರು 50 ಬಾರಿ ಚಾಕು ಇರಿದಿದ್ದಾನೆ. ಮೂವರು ಕೂಡಿ ಸತತವಾಗಿ ಚಾಕು ಇರಿದ ಪರಿಣಾಮ ಮಹೀರ್ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ