Site icon Vistara News

Telangana Bypoll | ಆಪರೇಷನ್‌ ಕಮಲ, ಹಣ, ಹೆಂಡ, ಆಮಿಷಗಳ ಸುರಿಮಳೆ, ಇದು ಬೈಪೋಲ್ಸ್‌ ಸಮರ ಶೈಲಿ

TRS BJP

ಹೈದರಾಬಾದ್:‌ ದೇಶದ ಯಾವುದೇ ಮೂಲೆಯಲ್ಲಿ, ಯಾವುದೇ ಕ್ಷೇತ್ರಕ್ಕೆ ಚುನಾವಣೆ ನಡೆಯಲಿ, ಆ ಚುನಾವಣೆ ತೀವ್ರ ಜಟಾಪಟಿ, ರಾಜಕೀಯ ಮೇಲಾಟ, ವಾಗ್ವಾದ, ಹಲವು ತಂತ್ರ, ಕುತಂತ್ರಗಳಿಂದಲೇ ಕೂಡಿರುತ್ತದೆ. ಇದಕ್ಕೆ, ತೆಲಂಗಾಣದ ಮುನುಗೋಡೆ (Telangana Bypoll) ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯೇ ಸಾಕ್ಷಿಯಾಗಿದೆ. ನವೆಂಬರ್‌ 3ರಂದು ಉಪ ಚುನಾವಣೆ ನಡೆಯಲಿದ್ದು, ತೀವ್ರ ಜಿದ್ದಾಜಿದ್ದಿ ಏರ್ಪಟ್ಟಿದೆ.

ಆಡಳಿತ ಪಕ್ಷವಾದ ಟಿಆರ್‌ಎಸ್‌ನ ನಾಲ್ವರು ಶಾಸಕರು ಬಿಜೆಪಿ ವಿರುದ್ಧ “ಆಪರೇಷನ್‌ ಕಮಲ”ದ ಆರೋಪ ಮಾಡಿದ್ದಾರೆ. ಉಪ ಚುನಾವಣೆ ಕಣವು ದಿನೇದಿನೆ ರಂಗೇರುತ್ತಿದ್ದು, ಹಣ, ಹೆಂಡದ ಹೊಳೆಯೇ ಹರಿಯುತ್ತಿದೆ. ಜನರಿಗೆ ಹತ್ತಾರು ಆಮಿಷಗಳನ್ನು ಒಡ್ಡಲಾಗುತ್ತಿದೆ. ಪರಸ್ಪರ ಆರೋಪ-ಪ್ರತ್ಯಾರೋಪಗಳ ಸುರಿಮಳೆಗೈಯಲಾಗುತ್ತಿದೆ.

ಆಪರೇಷನ್‌ ಕಮಲದ ಆರೋಪ

ಉಪ ಚುನಾವಣೆ ಹಿನ್ನೆಲೆಯಲ್ಲಿ ಟಿಆರ್‌ಎಸ್‌ ಹಾಗೂ ಬಿಜೆಪಿ ಮಧ್ಯೆ ಆರೋಪ-ಪ್ರತ್ಯಾರೋಪಗಳು ಹೆಚ್ಚಾಗಿವೆ. ಬಿಜೆಪಿಯು ಆಪರೇಷನ್‌ ಕಮಲಕ್ಕೆ ಯತ್ನಿಸುತ್ತಿದೆ. ಟಿಆರ್‌ಎಸ್‌ನ ನಾಲ್ವರು ಶಾಸಕರಿಗೆ ನೂರಾರು ಕೋಟಿ ರೂ. ಆಮಿಷ ಒಡ್ಡಿದೆ ಎಂದು ಟಿಆರ್‌ಎಸ್‌ ಆರೋಪಿಸಿದೆ. ಇದರ ಬೆನ್ನಲ್ಲೇ ಪೊಲೀಸರು ಶಾಸಕರ ಖರೀದಿಗೆ ಯತ್ನಿಸಿದ ಮೂವರು ಆರೋಪಿಗಳನ್ನು ಬಂಧಿಸಿದ್ದು, ಬಿಜೆಪಿ ವಿರುದ್ಧ ಟಿಆರ್‌ಎಸ್‌ ಆರೋಪಗಳ ಅಸ್ತ್ರ ಬಳಸುತ್ತಿದೆ. ಅತ್ತ, ಬಿಜೆಪಿಯು ಇದು ಟಿಆರ್‌ಎಸ್‌ನ ಡ್ರಾಮಾ ಎಂದು ಜರಿದಿದೆ.

ಹಣ ಹೆಂಡದ ಹೊಳೆ

ಸಾಮಾನ್ಯವಾಗಿ ಪ್ರತಿಯೊಂದು ಚುನಾವಣೆಯಲ್ಲೂ ಹಣ, ಹೆಂಡದ ಹೊಳೆ ಹರಿಯುತ್ತದೆ. ಇದಕ್ಕೆ ಮುನುಗೋಡೆ ಕ್ಷೇತ್ರವೂ ಹೊರತಾಗಿಲ್ಲ. ಮುನುಗೋಡೆ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣೆ ಆಯೋಗದ ಅಧಿಕಾರಿಗಳು ಈಗಾಗಲೇ ದಾಖಲೆ ಇಲ್ಲದ 2.7 ಕೋಟಿ ರೂ. ವಶಪಡಿಸಿಕೊಂಡಿದ್ದಾರೆ. ಅಬಕಾರಿ ಇಲಾಖೆ ಅಧಿಕಾರಿಗಳು ಇದುವರೆಗೆ 94 ಪ್ರಕರಣ ದಾಖಲಿಸುವ ಜತೆಗೆ 44 ಮಂದಿಯನ್ನು ಬಂಧಿಸಿದ್ದಾರೆ. 19 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಆಡಳಿತ ಪಕ್ಷವು ಮತದಾರರಿಗೆ ಹಣ, ಹೆಂಡ ಹಾಗೂ ಮಾಂಸ ನೀಡುವ ಮೂಲಕ ಮತಗಳನ್ನು ಖರೀದಿಸುತ್ತಿದೆ ಎಂದು ಬಿಜೆಪಿ ಪದೇಪದೆ ಆರೋಪಿಸುತ್ತಿದೆ.

ಪಕ್ಷಾಂತರ ಪರ್ವ

ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಪಕ್ಷಾಂತರ ಸಾಮಾನ್ಯ. ಆದರೆ, ಮುನುಗೋಡೆ ಕ್ಷೇತ್ರದ ಉಪ ಚುನಾವಣೆಯಲ್ಲೂ ಪಕ್ಷಾಂತರ ಪರ್ವ ನಡೆಯುತ್ತಿದೆ. ಟಿಆರ್‌ಎಸ್‌ ಹಾಗೂ ಬಿಜೆಪಿಯು ಮಂಡಲ ಮಟ್ಟದ ನಾಯಕರನ್ನು ತಮ್ಮ ಪಕ್ಷಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿವೆ. ಕೆಲ ಪ್ರಮುಖ ನಾಯಕರೂ ಪಕ್ಷಾಂತರ ಮಾಡಿದ್ದಾರೆ. ವಿಧಾನ ಪರಿಷತ್‌ ಮಾಜಿ ಸದಸ್ಯ, ಗೌಡ್‌ ಸಮುದಾಯದ ಮುಖಂಡ ಬುಡಿದ ಬಿಕ್ಷಾಮಯ್ಯ ಅವರು ಬಿಜೆಪಿ ತೊರೆದು ಟಿಆರ್‌ಎಸ್‌ ಸೇರ್ಪಡೆಯಾಗಿದ್ದಾರೆ. ಇದೇ ರೀತಿ ಹಲವು ಸ್ಥಳೀಯ ಮುಖಂಡರು ಪಕ್ಷಾಂತರ ಮಾಡಿದ್ದಾರೆ.

ಒಟ್ಟಿನಲ್ಲಿ ತೆಲಂಗಾಣದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ಇದಕ್ಕೂ ಮೊದಲೇ ಒಂದು ಕ್ಷೇತ್ರಕ್ಕಾಗಿ ಟಿಆರ್‌ಎಸ್‌ ಹಾಗೂ ಬಿಜೆಪಿ ಮಧ್ಯೆ ತೀವ್ರ ಪೈಪೋಟಿ ನಡೆಯುತ್ತಿದೆ. ಮುಂದಿನ ವಿಧಾನಸಭೆ ಚುನಾವಣೆಯ ಕದನ ಹೇಗಿರಲಿದೆ ಎಂಬುದರ ಅಂದಾಜು ಈಗಲೇ ಸಿಕ್ಕಂತಾಗಿದೆ.

ಇದನ್ನೂ ಓದಿ | Operation TRS MLAs | ಕಮಲದಿಂದ ಶಾಸಕರ ಖರೀದಿ- ಟಿಆರ್‌ಎಸ್ ಆರೋಪ, ಇದೊಂದು ಡ್ರಾಮಾ ಎಂದ ಬಿಜೆಪಿ

Exit mobile version