ನವದೆಹಲಿ: ಶಿಕ್ಷಕಿಯೊಬ್ಬರು, ಮುಸ್ಲಿಮ್ ಎಂಬ ಕಾರಣಕ್ಕೆ ಹುಡುಗನಿಗೆ ಕ್ಲಾಸ್‌ನಲ್ಲಿದ್ದ ಎಲ್ಲ ಮಕ್ಕಳಿಂದ ಕಪಾಳಮೋಕ್ಷ ಮಾಡಿದ (Muslim Boy Slapped At UP School) ಘಟನೆ ನೈಜವೇ ಆಗಿದ್ದರೆ, ಅದು ದೇಶದ ಆತ್ಮಸಾಕ್ಷಿಯನ್ನು ಅಲುಗಾಡಿಸಬೇಕು (Should Shock Conscience) ಎಂದು ಸುಪ್ರೀಂ ಕೋರ್ಟ್ (Supreme Court) ಹೇಳಿದೆ. ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದ ಮುಜಾಫ್ಫರ್‍ನಗರದಲ್ಲಿ ನಡೆದ ಈ ಘಟನೆಯ ತನಿಖೆಗೆ ಐಪಿಎಸ್ ಅಧಿಕಾರಿಯನ್ನು ನೇಮಕಕ್ಕೆ ಆದೇಶಿಸಿರುವ ಸುಪ್ರೀಂ ಕೋರ್ಟ್, ಇದೊಂದು ಗಂಭೀರ ಮತ್ತು ಕಳವಳಕಾರಿ ಘಟನೆಯಾಗಿದೆ. ಇದ ಬದುಕಿಗೆ ಸಂಬಂಧಿಸಿದ ಹಕ್ಕು ಎಂದು ಅಭಿಪ್ರಾಯಪಟ್ಟಿದೆ. ಈ ಘಟನೆಯ ಸಂತ್ರಸ್ತ ಬಾಲಕ ಹಾಗೂ ಈ ಘಟನೆಯಲ್ಲಿ ಭಾಗಿಯಾದ ಇತರ ಮಕ್ಕಳಿಗೂ ಕೌನ್ಸಿಲಿಂಗ್ ನೀಡುವಂತೆ ಉತ್ತರ ಪ್ರದೇಶದ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಹೇಳಿದೆ.
ಈ ಪ್ರಕರಣದ ಕುರಿತು ವಿಚಾರಣೆ ನಡೆಸುತ್ತಿದ್ದ ಸುಪ್ರೀಂ ಕೋರ್ಟ್, ಸಂತ್ರಸ್ತ ಬಾಲಕನ ಶೈಕ್ಷಣಿಕ ಜಜಾಬ್ದಾರಿಯನ್ನು ಉತ್ತರ ಪ್ರದೇಶದ ಹೊರಬೇಕು ಮತ್ತು ಈ ಕೃತ್ಯದಲ್ಲಿ ಭಾಗಿಯಾದ ವಿದ್ಯಾರ್ಥಿಗಳಿಗೆ ನಡೆಸಿದ ಕೌನ್ಸೆಲಿಂಗ್ ವರದಿಯನ್ನು ಅಕ್ಟೋಬರ್ 30ರೊಳಗೆ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಕೋರ್ಟ್ ತಿಳಿಸಿದೆ.
ಇದೇ ವೇಳೆ, ಎಫ್ಐಆರ್‌ನಲ್ಲಿ ಆರೋಪಿಸಲಾದ ಗಂಭೀರ ಆರೋಪಗಳ ಕುರಿತಾಗಿಯೂ ಸುಪ್ರೀಂ ಕೋರ್ಟ್ ಆಲಿಸಿತು. ಸಂತ್ರಸ್ತ ಬಾಲಕನ ತಂದೆಯು, ಮುಸ್ಲಿಮ್ ಧಾರ್ಮಿಕ ಎಂಬ ಕಾರಣಕ್ಕೆ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಿದ್ದರು. ಆದರೆ ಆ ಆರೋಪವನ್ನು ಎಫ್ಐಆರ್‌ನಲ್ಲಿ ನಮೂದಿಸಿಲ್ಲ ಈ ಕುರಿತು ಸುಪ್ರೀಂ ಕೋರ್ಟ್ ಗಂಭೀರವಾಗಿ ಪ್ರಶ್ನಿಸಿತು. ಇದು ಗುಣಾತ್ಮಕ ಶಿಕ್ಷಣಕ್ಕೆ ಸಂಬಂಧಿಸಿದ ವಿಷಯವೂ ಆಗಿದ್ದು, ಜತೆಗೆ ಸೂಕ್ಷ್ಮತೆಯನ್ನೂ ಹೊಂದಿದೆ. ಜಾತಿ, ಧರ್ಮ ಅಥವಾ ಲಿಂಗ ಯಾವುದೇ ತಾರತಮ್ಯವಿಲ್ಲದೆ 14 ವರ್ಷಗಳವರೆಗೆ ಮಕ್ಕಳಿಗೆ ಗುಣಮಟ್ಟದ, ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಒದಗಿಸುವ ಶಿಕ್ಷಣ ಹಕ್ಕು ಕಾಯಿದೆಯ ನಿಬಂಧನೆಗಳನ್ನು ಅನುಸರಿಸಲು ಉತ್ತರ ಪ್ರದೇಶದ ಸರ್ಕಾರದ ಕಡೆಯಿಂದ ವಿಫಲವಾದ ಪ್ರಕರಣವಾಗಿದೆ ಎಂದು ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ.
ಈ ಸುದ್ದಿಯನ್ನೂ ಓದಿ: Muslim Boy: ಮುಸ್ಲಿಮ್ ಹುಡುಗನಿಗೆ ಕಪಾಳಮೋಕ್ಷ, ನಾನೇನೂ ತಲೆ ತಗ್ಗಿಸುವ ಕೆಲಸ ಮಾಡಿಲ್ಲ! ಶಿಕ್ಷಕಿಯ ಸಮರ್ಥನೆ
ಈ ಪ್ರಕರಣದ ಕುರಿತು ತನಿಖೆಯನ್ನು ವೇಗವಾಗಿ ನಡೆಸುವಂತೆ ನಿರ್ದೇಶನ ಕೋರಿ ಮಹಾತ್ಮ ಗಾಂಧಿ ಅವರು ಮರಿಮೊಮ್ಮಗ ತುಷಾರ್ ಗಾಂಧಿ ಅವರು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಡಲಾಗಿರುವ ಕೋಮವಾದ ಆರೋಪಗಳು ಉತ್ಪ್ರೇಕ್ಷೆಯಾಗಿವೆ ಎಂದು ಉತ್ತರ ಪ್ರದೇಶ ಸರ್ಕಾರವು ಹೇಳಿದೆ.
ಸೆಪ್ಟೆಂಬರ್ 6 ರಂದು, ಸುಪ್ರೀಂ ಕೋರ್ಟ್ ಉತ್ತರ ಪ್ರದೇಶದ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಿಂದ ವರದಿ ಕೇಳಿತ್ತು. ಆರೋಪಿಗಳ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ ಮತ್ತು ಮಗುವಿನ ಕುಟುಂಬವನ್ನು ರಕ್ಷಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿ ನೀಡುವಂತೆ ಸೂಚಿಸಿತ್ತು.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.