ಚಂಡೀಗಢ: ದೇಶದಲ್ಲಿ ಹೆಣ್ಮಕ್ಕಳಿಗೆ ಮದುವೆ ಮಾಡಬೇಕಾದರೆ ೧೮ ವರ್ಷ ತುಂಬಿರಬೇಕು. ಮುಂದಿನ ದಿನಗಳಲ್ಲಿ ಇದನ್ನು ೨೧ ವರ್ಷಕ್ಕೆ ಏರಿಸುವ ಪ್ರಸ್ತಾಪವನ್ನು ಕೇಂದ್ರ ಸರಕಾರ ಹೊಂದಿದೆ. ಅದರ ನಡುವೆಯೇ ಹುಡುಗಿಯೊಬ್ಬಳಿಗೆ ೧೬ ವರ್ಷಕ್ಕೇ ಮದುವೆ ಮಾಡಬಹುದು ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
೧೬ ವರ್ಷದ ಮುಸ್ಲಿಂ ಹುಡುಗಿಯೊಬ್ಬಳ ಮದುವೆಗೆ ಸಂಬಂಧಿಸಿ ಪ್ರಕರಣ ಇದಾಗಿದ್ದು, ಆಕೆ ಈ ವಯಸ್ಸಿಗೇ ತನ್ನ ಆಯ್ಕೆಯ ಹುಡುಗನೊಂದಿಗೆ ಮದುವೆ ಸಂಬಂಧ ಹೊಂದಲು ಅರ್ಹಳಿದ್ದಾಳೆ ಎಂದು ಕೋರ್ಟ್ ಹೇಳಿದೆ. ಪಠಾಣ್ ಕೋಟ್ ಮೂಲದ ಈ ೧೬ ವರ್ಷದ ಹುಡುಗಿ ಮತ್ತು ೨೧ ವರ್ಷದ ಹುಡುಗ ತಮಗೆ ಕುಟುಂಬಿಕರಿಂದ ರಕ್ಷಣೆ ನೀಡಬೇಕು ಎಂದು ಕೋರಿ ಕೋರ್ಟ್ ಮೊರೆ ಹೊಕ್ಕ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಜಸ್ ಜಿತ್ ಸಿಂಗ್ ಬೇಡಿ ಅವರು ಈ ತೀರ್ಪು ನೀಡಿದ್ದಾರೆ. 16 ವರ್ಷಕ್ಕಿಂತ ಮೇಲ್ಪಟ್ಟ ಮುಸ್ಲಿಂ ಹುಡುಗಿ ತನ್ನ ಆಯ್ಕೆಯ ವ್ಯಕ್ತಿಯೊಂದಿಗೆ ವಿವಾಹವಾಗಲು ಸಮರ್ಥಳು ಎನ್ನುವುದು ಕೋರ್ಟ್‌ನ ಅಭಿಪ್ರಾಯ.
ಇದನ್ನು ಓದಿ|ತನ್ನೊಂದಿಗೇ ತಾನು ಸಪ್ತಪದಿ ತುಳಿದ ಗುಜರಾತ್ ಯುವತಿ; ಭರ್ಜರಿಯಾಗೇ ನಡೀತು ವರನಿಲ್ಲದ ಮದುವೆ!
ʻಅರ್ಜಿದಾರರು ತಮ್ಮ ಕುಟುಂಬಸ್ಥರ ಇಚ್ಛೆಗೆ ವಿರುದ್ದವಾಗಿ ಮದುವೆಯಾದರು ಎಂಬ ಒಂದೇ ಕಾರಣಕ್ಕಾಗಿ ಅವರು ಭಾರತ ಸಂವಿಧಾನದಲ್ಲಿ ಕಲ್ಪಿಸಿರುವ ಮೂಲಭೂತ ಹಕ್ಕುಗಳಿಂದ ವಂಚಿತರಾಗಲು ಸಾಧ್ಯವಿಲ್ಲʼ ಎಂದು ಪೀಠ ಹೇಳಿದೆ. ಇಸ್ಲಾಮಿನ ಶರಿಯಾ ಕಾನೂನನ್ನು ಪ್ರಸ್ತಾಪಿಸಿದ ನ್ಯಾಯಮೂರ್ತಿ ಬೇಡಿ, ಮುಸ್ಲಿಂ ಹುಡುಗಿಯ ವಿವಾಹ ಮುಸ್ಲಿಂ ವೈಯಕ್ತಿಕ ಕಾನೂನಿನಡಿ ನಡೆಯುತ್ತದೆ ಎಂದಿದ್ದಾರೆ.
ಸರ್ ದಿನ್ಯಾ ಫರ್ದುಂಜಿ ಮುಲ್ಲಾ ಅವರು ಬರೆದಿರುವ ʻಪ್ರಿನ್ಸಿಪಲ್ಸ್ ಆಫ್ ಮೊಹಮ್ಮದನ್ ಲಾʼ ಪುಸ್ತಕದ ವಿಧಿ 195ರ ಪ್ರಕಾರ 16 ವರ್ಷ ಮೇಲ್ಪಟ್ಟ ಮುಸ್ಲಿಂ ಹುಡುಗಿ ಆಕೆಯ ಇಚ್ಛೆಯ ವ್ಯಕ್ತಿಯೊಂದಿಗೆ ಮದುವೆಯಾಗಬಹುದಾಗಿದೆ. ಯುವಕ ಕೂಡ 21 ವರ್ಷ ಮೇಲ್ಪಟ್ಟವರಾಗಿದ್ದರೆ ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ಮದುವೆಯ ವಯಸ್ಸಿನವರಾಗಿರುತ್ತಾರೆʼʼ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಅರ್ಜಿದಾರ ಯುವಕ ಮತ್ತು ಯುವತಿಯ ಮದುವೆ ಜೂನ್ ೮ರಂದು ನಡೆದಿತ್ತು. ಮುಸ್ಲಿಂ ಸಂಪ್ರದಾಯದ ಪ್ರಕಾರವೇ ಕಾರ್ಯಕ್ರಮ ಜರುಗಿತ್ತು. ಆದರೆ, ತಮ್ಮ ಅನುಮತಿ ಪಡೆಯದೆ ನಡೆದಿರುವ ಈ ಮದುವೆಯನ್ನು ಒಪ್ಪಲಾಗದು ಎಂದು ಎರಡೂ ಕುಟುಂಬಗಳು ಆಕ್ಷೇಪಿಸಿದ್ದವು.
ಮುಸ್ಲಿಂ ಕಾನೂನಿನ ಪ್ರಕಾರ ಹೆಣ್ಣೊಬ್ಬಳು ಋತುಮತಿಯಾಗುವುದು ಮತ್ತು ಪ್ರೌಢ ಹಂತಕ್ಕೆ ಬರುವುದು ಎರಡೂ ಒಂದೇ. ಸಾಮಾನ್ಯವಾಗಿ ಪ್ರತಿಯೊಬ್ಬ ಹೆಣ್ಮಗಳೂ ಗರಿಷ್ಠ ೧೫ನೇ ವಯಸ್ಸಿಗೆ ಋತುಮತಿಯಾಗುತ್ತಾರೆ ಎಂದು ಭಾವಿಸಬಹುದು ಎಂದು ಅರ್ಜಿದಾರರು ವಾದಿಸಿದ್ದರು.