Site icon Vistara News

Muslim population: ಭಾರತದಲ್ಲಿ ಮುಸ್ಲಿಮರು ಎಷ್ಟಿದ್ದಾರೆ? ಉತ್ತರ ನೀಡಿದ್ದಾರೆ ಕೇಂದ್ರ ಸಚಿವೆ

Muslims In India

Muslims In India

ಹೊಸದಿಲ್ಲಿ: 2023ರಲ್ಲಿ ದೇಶದಲ್ಲಿ ಮುಸ್ಲಿಮರ ಜನಸಂಖ್ಯೆ (Muslim population in India) ಸುಮಾರು 19.7 ಕೋಟಿಯಷ್ಟಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ತಿಳಿಸಿದೆ. ತೃಣಮೂಲ ಕಾಂಗ್ರೆಸ್‌ನ ಸಂಸದೆ ಮಾಲಾ ರಾಯ್ ಅವರು ಕೇಳಿದ ಪ್ರಶ್ನೆಗೆ ಗುರುವಾರ ನೀಡಿದ ಲಿಖಿತ ಉತ್ತರದಲ್ಲಿ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಸ್ಮೃತಿ ಇರಾನಿ (Smriti Irani) ಇದನ್ನು ತಿಳಿಸಿದ್ದಾರೆ.

2011ರ ಜನಗಣತಿಯ (census) ಪ್ರಕಾರ ಅನುಪಾತವನ್ನು ಅಂದಾಜಿಸಿದರೆ ಮುಸ್ಲಿಮರು ದೇಶದ ಜನಸಂಖ್ಯೆಯ ಒಟ್ಟು 14.2%ರಷ್ಟಿದ್ದಾರೆ. 2011ರ ಜನಗಣತಿಯ ಪ್ರಕಾರ ಮುಸ್ಲಿಂ ಜನಸಂಖ್ಯೆ 17.2 ಕೋಟಿ ಇತ್ತು. ಜುಲೈ 2020ರಲ್ಲಿ ನೀಡಲಾದ ತಾಂತ್ರಿಕ ವರದಿಯ ಪ್ರಕಾರ ದೇಶದ ಅಂದಾಜು ಜನಸಂಖ್ಯೆ (population) 2023ರಲ್ಲಿ 138.8 ಕೋಟಿ. ಅದರಂತೆ 14.2%ರ ಅದೇ ಅನುಪಾತವನ್ನು ಅನ್ವಯಿಸಿ ಮುಸ್ಲಿಮರ ಜನಸಂಖ್ಯೆಯನ್ನು ಅಂದಾಜು ಮಾಡಲಾಗಿದ್ದು, 2023ರಲ್ಲಿ 19.7 ಕೋಟಿ ಇರಬಹುದು ಎಂದು ಇರಾನಿ ಹೇಳಿದ್ದಾರೆ.

ಮುಸ್ಲಿಮರ ಜನಸಂಖ್ಯೆಯ ಬಗ್ಗೆ ಯಾವುದಾದರೂ ಅಧಿಕೃತ ದಾಖಲೆ ಇದೆಯೇ ಎಂಬ ಪ್ರಶ್ನೆಯನ್ನು ಸಂಸದೆ ಕೇಳಿದ್ದರು. ಪಸ್ಮಾಂಡ ಮುಸ್ಲಿಮರ (pasmanda muslims) ಜನಸಂಖ್ಯೆ ಮತ್ತಿತರ ದಾಖಲೆಗಳನ್ನೂ ಸಂಸದೆ ಕೇಳಿದ್ದರು. ಮುಸ್ಲಿಮರ ಸಾಕ್ಷರತಾ ಪ್ರಮಾಣ ಮತ್ತಿತರ ವಿವರಗಳನ್ನೂ ಸಚಿವರು ನೀಡಿದ್ದಾರೆ. ಅಂಕಿಸಂಖ್ಯೆ ಇಲಾಖೆಯ ನಿಯತಕಾಲಿಕ ಕಾರ್ಮಿಕ ಸಮೀಕ್ಷೆ ವರದಿ 2021-22ರ ಪ್ರಕಾರ ಮುಸ್ಲಿಮರ ಸಾಕ್ಷರತಾ ಪ್ರಮಾಣ ಶೇ.77.7ರಷ್ಟಿದೆ. ಕಾರ್ಮಿಕ ಶಕ್ತಿಯಲ್ಲಿ ಮುಸ್ಲಿಮರ ಪಾಲ್ಗೊಳ್ಳುವಿಕೆ ಶೇ.35.1ರಷ್ಟಿದೆ ಎಂದು ಸಚಿವೆ ತಿಳಿಸಿದ್ದಾರೆ.

ಅಂಕಿಸಂಖ್ಯೆ ಇಲಾಖೆಯ ಬಹು ಸೂಚ್ಯಂಕಗಳ ಸಮೀಕ್ಷೆಯ ಪ್ರಕಾರ ಮುಸ್ಲಿಮರಲ್ಲಿ ಉತ್ತಮ ಕುಡಿಯುವ ನೀರಿನ ಲಭ್ಯತೆ ಹೊಂದಿದವರು ಶೇ.94.9, ಉತ್ತಮ ಶೌಚ ವ್ಯವಸ್ಥೆ ಹೊಂದಿದವರು 97.2%, 2014ರ ಮಾರ್ಚ್‌ 31ರ ಬಳಿಕ ಹೊಸ ಮನೆ ಕಟ್ಟಿಸಿದ ಅಥವಾ ಫ್ಲ್ಯಾಟ್‌ ಖರೀದಿಸಿದವರ ಪ್ರಮಾಣ 50.2%ದಷ್ಟಿದೆ ಎಂದು ಕೂಡ ಇರಾನಿ ಮಾಹಿತಿ ನೀಡಿದ್ದಾರೆ. ಆದರೆ ಪಸ್ಮಾಂಡ ಮುಸ್ಲಿಮರ ಬಗೆಗೆ ಯಾವುದೇ ವಿವರ ದೊರೆತಿಲ್ಲ.

ಇದನ್ನೂ ಓದಿ: Hajj 2023: ಇತಿಹಾಸ ಬರೆದ ಭಾರತದ ಮುಸ್ಲಿಂ ಮಹಿಳೆಯರು; ಪುರುಷರ ನೆರವಿಲ್ಲದೆ ಹಜ್‌ ಯಾತ್ರೆ ಮಾಡಿ ವಾಪಸ್

Exit mobile version