Site icon Vistara News

BJP Executive : ವಂಶಪಾರಂಪರ್ಯ ರಾಜಕೀಯದ ಅಧಃಪತನ ಗಮನಿಸಲು ಮುಖಂಡರಿಗೆ ಮೋದಿ ಕರೆ

BJP executive

ಹೈದರಾಬಾದ್‌: ದೇಶವನ್ನು ದಶಕಗಳಷ್ಟು ಕಾಲ ಆಳಿರುವ ಪಕ್ಷಗಳು ತಮ್ಮ ವಂಶ ಪಾರಂಪರ್ಯ ನೀತಿ ಹಾಗೂ ಅಧಿಕಾರದ ಆಸೆಯಿಂದಾಗಿ ಅಧಃಪತನ ಕಾಣುತ್ತಿವೆ. ಆ ಪಕ್ಷಗಳು ಮಾಡಿರುವ ತಪ್ಪುಗಳನ್ನು ನೋಡಿ ಕಲಿಯಬೇಕಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಪಕ್ಷದ ಹಿರಿಯ ಮುಖಂಡರಿಗೆ (BJP executive) ಕಿವಿ ಮಾತು ಹೇಳಿದ್ದಾರೆ.

ಹೈದಾರಾಬಾದ್‌ನಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಉದ್ದೇಶಿಸಿ ಮಾತನಾಡಿ, ಅಧಿಕಾರದ ಆಸೆಗಾಗಿ ವಂಶಪಾರಂಪರ್ಯವನ್ನೇ ನೆಚ್ಚಿಕೊಂಡಿದ್ದ ಪಕ್ಷಗಳು ನಿರ್ನಾಮದ ಹಾದಿಯಲ್ಲಿವೆ. ಅವರನ್ನು ನೋಡಿ ಬಿಜೆಪಿ ನಾಯಕರು ಪಾಠ ಕಲಿಯಬೇಕು,ʼʼ ಎಂದು ಯಾವುದೇ ಪಕ್ಷದ ಹೆಸರು ಸೂಚಿಸದೇ ಅವರು ಭಾಷಣದ ಪ್ರಮುಖಾಂಶವನ್ನು ವ್ಯಕ್ತಪಡಿಸಿದರು.

“ದೇಶದಲ್ಲಿ ಸಾಕಷ್ಟು ಪಕ್ಷಗಳು ಈಗ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿವೆ. ಅಂಥ ಪಕ್ಷಗಳನ್ನು ನೋಡಿ ನಗುವುದು ಅಥವಾ ಲೇವಡಿ ಮಾಡುವುದರ ಬದಲಾಗಿ ಅವರು ಮಾಡುತ್ತಿರುವ ಪ್ರಮಾದಗಳನ್ನು ಗಮನಿಸಬೇಕು ಹಾಗೂ ಅವುಗಳನ್ನು ನಾವು ಮಾಡಬಾರದು,ʼʼ ಎಂದು ಮೋದಿಯವರು ಕರೆ ಕೊಟ್ಟರು.

“ಭಾರತೀಯ ಜನತಾ ಪಾರ್ಟಿ ವರ್ಷದಿಂದ ವರ್ಷಕ್ಕೆ ತನ್ನ ಸಾಮರ್ಥ್ಯ ವೃದ್ಧಿಸಿಕೊಂಡು ಸಾಗುತ್ತಿದೆ. ಇದಕ್ಕೆ ಕಾರ್ಯಕರ್ತರ ಶ್ರಮವೇ ಕಾರಣ,ʼʼ ಎಂದು ಹೇಳಿದ ಪ್ರಧಾನಿ ಮೋದಿ ಅವರು, ತೆಲಂಗಾಣ ಹಾಗೂ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಯತ್ನಿಸುತ್ತಿರುವ ಪಕ್ಷದ ಕಾರ್ಯಕರ್ತರ ಶ್ರಮಕ್ಕೆ ಶಹಬ್ಬಾಸ್‌ಗಿರಿ ಕೊಟ್ಟರು.

ಹೈದರಾಬಾದ್‌ ಅಲ್ಲ, ಭಾಗ್ಯನಗರ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರುʼʼಮುತ್ತುಗಳ ನಗರʼ ಎಂದೇ ಖ್ಯಾತಿ ಪಡೆದಿರುವ ಹೈದರಾಬಾದ್‌ನ ಹೆಸರು ಬದಲಾವಣೆಯ ಪ್ರಸ್ತಾಪವೊಂದನ್ನು ಕಾರ್ಯಕಾರಿಣಿಯಲ್ಲಿ ಪರೋಕ್ಷವಾಗಿ ಮುಂದಿಟ್ಟರು.

“ಸರ್ದಾರ್‌ ವಲ್ಲಭ್‌ಭಾಯ್‌ ಪಟೇಲ್‌ ಅವರು “ಒಂದೇ ಭಾರತ” ಎಂಬ ಪರಿಕಲ್ಪನೆಯನ್ನು ಹುಟ್ಟು ಹಾಕಿರುವ ಭಾಗ್ಯ ನಗರದಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ನಡೆಯುತ್ತಿದೆ. ಹೀಗಾಗಿ ಬಿಜೆಪಿ ನಾಯಕರೆಲ್ಲರೂ ಸೇರಿ ಶ್ರೇಷ್ಠ ಭಾರತವನ್ನು ಮಾಡಲು ಶ್ರಮಿಸಬೇಕು,ʼʼ ಎಂದು ಹೇಳಿದರು.

ʼಏಕ ಭಾರತʼ ಎಂಬಪರಿಕಲ್ಪನೆ ಹುಟ್ಟುಹಾಕಿದ ಸರ್ದಾರ್‌ ವಲ್ಲಭ್‌ಭಾಯ್‌ ಪಟೇಲ್‌ ಅವರು ಸೂಚಿಸಿದ ʼಭಾಗ್ಯನಗರʼ ಹೆಸರು ನಾಮಕರಣ ಮಾಡುವ ನಿಟ್ಟಿನಲ್ಲಿ ಬಿಜೆಪಿ ಮುಂದುವರಿಯಬೇಕಾಗಿದೆ,ʼʼ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು. ಈ ಮೂಲಕ ಅವರು ನಾನಾ ಕಾರಣಗಳಿಗೋಸ್ಕರ ಭಾರತೀಯತೆ ಕಳೆದುಕೊಂಡಿದ್ದ ರಾಷ್ಟ್ರದ ಪ್ರಮುಖ ನಗರಗಳಿಗೆ ಮರು ನಾಮಕರಣ ಮಾಡುವ ಕೇಂದ್ರ ಸರಕಾರದ ಮಹತ್ವದ ಯೋಜನೆಯನ್ನು ಬಿಜೆಪಿಯ ಹಿರಿಯ ನಾಯಕರನ್ನೊಳಗೊಂಡ ಸಭೆಯಲ್ಲಿ ಪುನರುಚ್ಚರಿಸಿದರು.

ಸ್ನೇಹ ಭಾರತ್‌ ಆಯೋಜಿಸಿ

ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ ಅವರು ʼಸ್ನೇಹ ಯಾತ್ರೆ ʼ ಆರಂಭಿಸುವಂತೆ ಬಿಜೆಪಿ ಮುಖಂಡರಿಗೆ ಕರೆ ಕೊಟ್ಟರು. ಈ ಯಾತ್ರೆಯ ಮೂಲಕ ದೇಶದ ಎಲ್ಲ ವರ್ಗದ ಜನರನ್ನು ತಲುಪುವಂತೆ ಅವರು ಕರೆಕೊಟ್ಟರು.

ತೆಲಂಗಾಣ, ಕೇರಳ ಹಾಗೂ ಪಶ್ಚಿಮ ಬಂಗಾಳ ಸೇರಿದಂತೆ ಕೆಲವೊಂದು ರಾಜ್ಯಗಳಲ್ಲಿ ಆಡಳಿತದಲ್ಲಿರುವ ಪಕ್ಷಗಳು ಸೈದ್ಧಾಂತಿಕ ಅಸಹಿಷ್ಣುತೆ ಪ್ರದರ್ಶಿಸುತ್ತಿವೆ. ಅಲ್ಲಿ ಬಿಜೆಪಿ ಕಾರ್ಯಕರ್ತರು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸಲು ಹೋರಾಡುತ್ತಿದ್ದಾರೆ,ʼʼ ಎಂದು ಇದೇ ವೇಳೆ ಅವರು ನುಡಿದರು.

ಇದನ್ನೂ ಓದಿ: BJP Executive | ದೇಶ ಬಲಿಷ್ಠವಾಗಲು ಬಿಜೆಪಿ ಇನ್ನೂ 30 ವರ್ಷ ಅಧಿಕಾರದಲ್ಲಿರಬೇಕೆಂದ ಅಮಿತ್‌ ಶಾ

Exit mobile version