ಗುವಾಹಟಿ: ಶಿವ ಸೇನೆಯು ಎನ್‌ಸಿಪಿ ಹಾಗೂ ಕಾಂಗ್ರೆಸ್ ಜತೆ ಮಾಡಿಕೊಂಡಿರುವ ಮೈತ್ರಿ ಅಸಹಜವಾದುದು. ಇದರಿಂದ ಶಿವ ಸೇನೆ ಹೊರಬರಬೇಕು ಎಂದು ಬಂಡಾಯ ನೇತಾರ ಏಕನಾಥ್ ಶಿಂಧೆ ಹೇಳಿದ್ದಾರೆ.
ಅಸ್ಸಾಂನ ಗುವಾಹಟಿಯ ರೆಸಾರ್ಟ್‌ನಲ್ಲಿ ಬಂಡಾಯ ಶಾಸಕರ ಜತೆಗಿರುವ ಶಿಂಧೆ, ಬಿಕಟ್ಟಿನ ಕುರಿತು ಟ್ವೀಟ್ ಮಾಡಿದ್ದಾರೆ.
ಕಳೆದ ಎರಡೂವರೆ ವರ್ಷಗಳ ಮೈತ್ರಿಕೂಟದ ಆಡಳಿತದಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಹಾಗೂ ಕಾಂಗ್ರೆಸ್ ಮಾತ್ರ ಲಾಭ ಮಾಡಿಕೊಂಡಿವೆ. ಶಿವ ಸೇನೆಗೆ ಏನೂ ಲಾಭವಾಗಿಲ್ಲ. ಬದಲಾಗಿ ಪಕ್ಷ ದುರ್ಬಲವಾಗಿದೆ. ಪಕ್ಷದ ಹಾಗೂ ಪಕ್ಷದ ಶಾಸಕರ ಉಳಿವಿಗಾಗಿ ಈ ಮೈತ್ರಿಯಿಂದ ಹೊರಬರಬೇಕಿದೆ. ಮಹಾರಾಷ್ಟ್ರದ ಹಿತದೃಷ್ಟಿಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಶಿಂಧೆ ಟ್ವೀಟ್ ಮಾಡಿದ್ದಾರೆ.
ಬುಧವಾರ ನಡೆದ ಬೆಳವಣಿಗೆಗಳಲ್ಲಿ, ಪತ್ರಿಕಾಗೋಷ್ಠಿ ನಡೆಸಿದ್ದ ಮುಖ್ಯಮಂತ್ರಿ ಉದ್ಧವ ಠಾಕ್ರೆ ಅವರು, ಶಿವ ಸೇನೆ ಶಾಸಕರು ಕೇಳಿದರೆ ಯಾವುದೇ ಕ್ಷಣದಲ್ಲಿ ರಾಜೀನಾಮೆ ಕೊಡಲು ನಾನು ಸಿದ್ಧ ಎಂದಿದ್ದರು. ಕೋವಿಡ್ ಕಾರಣದಿಂದಾಗಿ ನನಗೆ ರಾಜ್ಯಪಾಲರ ಬಳಿಗೆ ಹೋಗಲು ಆಗುತ್ತಿಲ್ಲ. ರಾಜೀನಾಮೆ ಪತ್ರ ಸಿದ್ಧವಿದ್ದು, ಯಾರು ಬೇಕಿದ್ದರೂ ಅದನ್ನು ರಾಜ್ಯಪಾಲರಿಗೆ ತಲುಪಿಸಬಹುದು ಎಂದಿದ್ದರು.
ಇದರ ಬಳಿಕ ಉದ್ಧವ್ ಠಾಕ್ರೆ ಹಾಗೂ ಎನ್‌ಸಿಪಿ ನಾಯಕ ಶರದ್ ಪವಾರ್ ಅವರು ಭೇಟಿಯಾಗಿ ಪ್ರಸ್ತುತ ಬಿಕ್ಕಟ್ಟಿನ ಕುರಿತು ಮಾತುಕತೆ ನಡೆಸಿದ್ದಾರೆ.
ಇದನ್ನೂ ಓದಿ: ಈ ಸಲ ಶಿವ ಸೇನೆ ಹೋಳಾಗುವುದು ಖಚಿತ? ಹಿಂದೆಯೂ ಮೂರು ಬಾರಿ ಪ್ರಯತ್ನ