Site icon Vistara News

ಹಿಂದು ಧರ್ಮದ ನಂಬಿಕೆಯೇ ಅಮೆರಿಕ ಚುನಾವಣೆ ಸ್ಪರ್ಧೆಗೆ ಸ್ಫೂರ್ತಿ ಎಂದ ವಿವೇಕ್‌ ರಾಮಸ್ವಾಮಿ

Vivek Ramaswamy

My Hindu faith led me to presidential campaign: Says Indian American Republican candidate Vivek Ramaswamy

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಕೆಲವು ತಿಂಗಳು ಬಾಕಿ ಇವೆ. ಹಾಗಾಗಿ, ಈ ಬಾರಿಯ ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್‌ ಸೇರಿ ಭಾರತ ಮೂಲದ ನಿಕ್ಕಿ ಹ್ಯಾಲೆ, ವಿವೇಕ್‌ ರಾಮಸ್ವಾಮಿ ಸೇರಿ ಹಲವರು ಚುನಾವಣೆ ಕಣದಲ್ಲಿದ್ದಾರೆ. ಅದರಲ್ಲೂ, ಭಾರತ ಮೂಲದ ವಿವೇಕ್‌ ರಾಮಸ್ವಾಮಿ ಅವರು ಚುನಾವಣೆ ಪ್ರಚಾರದಲ್ಲಿ ತೊಡಗಿದ್ದಾರೆ. ಇದರ ಬೆನ್ನಲ್ಲೇ ಅವರು ಹಿಂದು ಧರ್ಮದ ಕುರಿತು ಮಾತನಾಡಿದ್ದು, “ಹಿಂದು ಧರ್ಮದ ಮೇಲೆ ನಾನು ಇಟ್ಟ ನಂಬಿಕೆಯಿಂದಾಗಿಯೇ ಇಂದು ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮಾಡಿದೆ” ಎಂದು ಹೇಳಿದ್ದಾರೆ.

ಉದ್ಯಮಿ, ಲೇಖಕರೂ ಆಗಿರುವ ರಿಪಬ್ಲಿಕನ್‌ ಪಕ್ಷದ ವಿವೇಕ್‌ ರಾಮಸ್ವಾಮಿ, ಡೈಲಿ ಸಿಗ್ನಲ್‌ ಸಂಸ್ಥೆ ಆಯೋಜಿಸಿದ್ದ ದಿ ಫ್ಯಾಮಿಲಿ ಲೀಡರ್‌ ಎಂಬ ಕಾರ್ಯಕ್ರಮದಲ್ಲಿ ಹಿಂದು ಧರ್ಮದ ಕುರಿತು ಮಾತನಾಡಿದರು. “ನಾನು ಹಿಂದು ಧರ್ಮದಲ್ಲಿ ಅಪಾರ ನಂಬಿಕೆ ಇಟ್ಟಿದ್ದೇನೆ. ಈ ನಂಬಿಕೆಯೇ ನನ್ನನ್ನು ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಸ್ಫೂರ್ತಿಯಾಗಿದೆ. ನಾನೊಬ್ಬ ಹಿಂದು ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ. ನಾನು ದೇವರಲ್ಲಿ ನಂಬಿಕೆ ಇಟ್ಟಿದ್ದು, ಒಬ್ಬನೇ ನಿಜವಾದ ದೇವರಿದ್ದಾನೆ ಎಂಬುದಾಗಿ ಭಾವಿಸಿದ್ದೇನೆ” ಎಂದು ಹೇಳಿದರು.

ವಿವೇಕ್‌ ರಾಮಸ್ವಾಮಿ ಹೇಳಿದ್ದಿಷ್ಟು…

“ನಾನು ನಂಬಿಕೆ ಇಟ್ಟಿರುವ ಹಿಂದು ಧರ್ಮವು ನನ್ನಲ್ಲಿ ನೈತಿಕ ಮೌಲ್ಯಗಳನ್ನು ತುಂಬಿದೆ. ನಮ್ಮೆಲ್ಲರ ಮೇಲೆ ದೇವರ ಆಶೀರ್ವಾದ ಇದೆ ಎಂಬ ಕಾರಣಕ್ಕಾಗಿಯೇ ಎಲ್ಲರೂ ಸಮಾನರು ಎಂದು ನನ್ನ ನಂಬಿಕೆ ತಿಳಿಸುತ್ತದೆ. ನಾನು ಇನ್ನೊಬ್ಬರಿಗೆ ಒಳಿತು ಮಾಡಬೇಕು, ಬೇರೆಯವರಿಗೆ ಸಂಬಂಧಿಸಿದ ಯಾವುದೇ ವಸ್ತುವನ್ನು ಕದಿಯಬಾರದು, ಮದುವೆ ಎಂಬುದು ಪವಿತ್ರ ಬಂಧ, ವಿಚ್ಛೇದನ ಮಾಡಿಕೊಳ್ಳಬಾರದು, ಬೇರೆಯವರಿಗೆ ಕೇಡು ಬಯಸಬಾರದು, ಕಾಯಕದಲ್ಲಿ ನಿರತನಾಗಿರಬೇಕು ಎಂಬುದು ಸೇರಿ ಹಲವು ಮೌಲ್ಯಗಳನ್ನು ಧರ್ಮವು ತುಂಬಿದೆ” ಎಂದು ಹೇಳಿದರು. ಹಾಗೆಯೇ, ಅಮೆರಿಕ ಅಧ್ಯಕ್ಷನಾಗಿ ಆಯ್ಕೆಯಾದರೆ ಮೌಲ್ಯಗಳನ್ನು ಒಳಗೊಂಡ ಅಮೆರಿಕ ನಿರ್ಮಾಣ ಮಾಡುತ್ತೇನೆ ಎಂದು ತಿಳಿಸಿದರು.

ಇದನ್ನೂ ಓದಿ: Vivek Ramaswamy: ಅಮೆರಿಕ ಚುನಾವಣೆ ಮೊದಲೇ ಭಾರತ ಮೂಲದ ವಿವೇಕ್‌ ರಾಮಸ್ವಾಮಿಯನ್ನು ಹೊಗಳಿದ ಎಲಾನ್‌ ಮಸ್ಕ್

ಯಾರಿವರು ವಿವೇಕ್‌ ರಾಮಸ್ವಾಮಿ?

ವಿವೇಕ್​ ರಾಮಸ್ವಾಮಿಯವರು ಚಿಕ್ಕವಯಸ್ಸಿನಲ್ಲಿಯೇ ಪ್ರಭಾವಿ ಎನ್ನಿಸಿಕೊಂಡವರು. ಅವರ ತಂದೆ-ತಾಯಿ ಮೂಲತಃ ಕೇರಳದವರಾಗಿದ್ದು, ಇಲ್ಲಿಂದ ಯುಎಸ್​ಗೆ ವಲಸೆ ಹೋಗಿದ್ದರು. ವಿವೇಕ್​ ರಾಮಸ್ವಾಮಿ ಹುಟ್ಟಿದ್ದು-ಬೆಳೆದಿದ್ದೆಲ್ಲ ಇದೇ ದೇಶದಲ್ಲಿ. ಅವರಿಗೆ ಮದುವೆಯಾಗಿ, ಇಬ್ಬರು ಮಕ್ಕಳಿದ್ದಾರೆ. ಇನ್ನು ರಿಪಬ್ಲಿಕನ್ ಪಕ್ಷದಿಂದ ಡೊನಾಲ್ಡ್​ ಟ್ರಂಪ್​ ಅವರು ಈಗಾಗಲೇ 2024ರಲ್ಲಿ ಮತ್ತೆ ಅಭ್ಯರ್ಥಿ ಎಂದು ಹೇಳಿದ್ದಾರೆ. ಅದರೊಂದಿಗೆ, ಆ ಪಕ್ಷದ ನಿಕ್ಕಿ ಹ್ಯಾಲೆ ಕೂಡ ತಾವೂ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ಇವರೂ ಕೂಡ ಭಾರತ ಮೂಲದವರೇ ಆಗಿದ್ದಾರೆ. ಒಟ್ಟಿನಲ್ಲಿ 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಭರ್ಜರಿ ಸ್ಪರ್ಧೆಯೇ ಏರ್ಪಡುವಂತೆ ಕಾಣುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version