Site icon Vistara News

ಐಎಎಸ್‌ ಆಫೀಸರ್‌ ಆಗಿರುವ ಮಾಜಿ ಪತ್ನಿಯಿಂದ ನನ್ನ ಮನೆಗೆ ವಿದ್ಯುತ್‌ ಕಟ್; ಇದು ಐಪಿಎಸ್‌ ಆಫೀಸರ್‌ ಅಳಲು!

Tamil Nadu Officers

My IAS Officer Ex Wife Cut Power Supply To My Home: Says IPS Officer In Tamil Nadu

ಚೆನ್ನೈ: ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಮಾತಿದೆ. ಇನ್ನು, ಮದುವೆಯಾದ ಬಳಿಕ, ಹೊಂದಾಣಿಕೆಯಾಗದೆ, ಉಂಡು ಮಲಗಿದ ಮೇಲೂ ಜಗಳ ಮುಂದುವರಿಯು ಕಾರಣದಿಂದ ವಿಚ್ಛೇದನ ಪಡೆದವರು ತಮ್ಮ ಮಾಡಿಗೆ ತಾವು ಇರುತ್ತಾರೆ. ಆದರೆ, ತಮಿಳುನಾಡಿನಲ್ಲಿ (Tamil Nadu) ಐಎಎಸ್‌ ಅಧಿಕಾರಿಯಾಗಿರುವ ಬೀಲಾ ವೆಂಕಟೇಶನ್‌ (Beela Venkatesan) ಹಾಗೂ ಐಪಿಎಸ್‌ ಅಧಿಕಾರಿ ರಾಜೇಶ್‌ ದಾಸ್‌ (Rajesh Das) ಅವರು ಮಾಜಿ ಪತಿ-ಪತ್ನಿಯಾಗಿದ್ದು, ಇವರು ವಿಚ್ಛೇದನದ ಬಳಿಕವೂ ಜಗಳ ಮುಂದುವರಿಸಿದ್ದಾರೆ. “ಐಎಎಸ್‌ ಅಧಿಕಾರಿಯಾಗಿರುವ ಮಾಜಿ ಪತ್ನಿಯು ನನ್ನ ಮನೆಯ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದಾಳೆ” ಎಂಬುದಾಗಿ ರಾಜೇಶ್‌ ದಾಸ್‌ ಆರೋಪಿಸಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

“ನಾನು ಮನೆಯಲ್ಲಿ ಇದ್ದಾಗಲೇ ಮೇ 20ರಂದು ಮನೆಯ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿದೆ. ತಮಿಳುನಾಡು ಉತ್ಪಾದನೆ ಮತ್ತು ವಿತರಣೆ ನಿಗಮದ (TANGEDCO) ಅಧಿಕಾರಿಗಳು ನನ್ನ ಅಭಿಪ್ರಾಯವನ್ನೂ ಪಡೆಯದೆ ವಿದ್ಯುತ್‌ ಕಡಿತಗೊಳಿಸಲಾಗಿದೆ. ನನ್ನ ಮನೆಯ ವಿದ್ಯುತ್‌ ಶುಲ್ಕವನ್ನು ಸರಿಯಾದ ಸಮಯಕ್ಕೆ ಪಾವತಿ ಮಾಡಲಾಗಿದೆ. ವಿದ್ಯುತ್‌ ಕಡಿತಗೊಳಿಸುವ ಕುರಿತು ಕೋರ್ಟ್‌ ಆದೇಶವೂ ಇಲ್ಲ. ಹೀಗಿದ್ದರೂ, ಇಂಧನ ಇಲಾಖೆ ಕಾರ್ಯದರ್ಶಿ ಆಗಿರುವ, ನನ್ನ ಮಾಜಿ ಪತ್ನಿ ಬೀಲಾ ವೆಂಕಟೇಶನ್‌ ಅವರೇ ವಿದ್ಯುತ್‌ ಕಡಿತಗೊಳಿಸಿದ್ದಾರೆ” ಎಂಬುದಾಗಿ ರಾಜೇಶ್‌ ದಾಸ್‌ ಅವರು ಆರೋಪಿಸಿದ್ದಾರೆ.

ವಿಚ್ಛೇದನಕ್ಕೂ ಮೊದಲು ರಾಜೇಶ್‌ ದಾಸ್ ಹಾಗೂ ಬೀಲಾ ವೆಂಕಟೇಶನ್.‌

ಬೀಲಾ ವೆಂಕಟೇಶನ್‌ ಪ್ರತಿಕ್ರಿಯೆ ಏನು?

ರಾಜೇಶ್‌ ದಾಸ್‌ ಅವರ ಆರೋಪಗಳಿಗೆ ಬೀಲಾ ವೆಂಕಟೇಶನ್‌ ಅವರು ಪ್ರತಿಕ್ರಿಯಿಸಿದ್ದು, ಅವರ ಆರೋಪಗಳನ್ನು ನಿರಾಕರಿಸಿದ್ದಾರೆ. “ಕಳೆದ ಮೂರು ತಿಂಗಳಿಂದ ಮನೆಯಲ್ಲಿ ಯಾರೂ ಇಲ್ಲ. ಆದರೆ, ನನ್ನ ಹೆಸರಿನಲ್ಲಿ ವಿದ್ಯುತ್‌ ಬಿಲ್‌ ಬರುತ್ತದೆ, ಆ ಜಾಗವೂ ನನ್ನ ಹೆಸರಲ್ಲೇ ಇದೆ. ಹಾಗಾಗಿ, ನಾನು ಅನವಶ್ಯಕವಾಗಿ ದುಡ್ಡು ವ್ಯಯಿಸಲು ಇಚ್ಛಿಸುವುದಿಲ್ಲ. ರಾಜೇಶ್‌ ದಾಸ್‌ ಅವರೇ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂಬ ಕುರಿತು ದಾಖಲೆ ಕೊಡಿ, ನೋಂದಣಿ ಬದಲಾಯಿಸಿಕೊಳ್ಳಿ ಎಂಬುದಾಗಿ ಮನವಿ ಮಾಡಿದರೂ ದಾಖಲೆ ಸಲ್ಲಿಸಿಲ್ಲ. ಅವರು ದಾಖಲೆ ನೀಡದ ಕಾರಣ ಅಧಿಕಾರಿಗಳು ತಮ್ಮ ಕರ್ತವ್ಯ ಮಾಡಿದ್ದಾರೆ” ಎಂದಿದ್ದಾರೆ.

ತಮಿಳುನಾಡು ಮಾಜಿ ಡಿಜಿಪಿ ಆಗಿರುವ ರಾಜೇಶ್‌ ದಾಸ್‌ ಅವರು ತಮ್ಮ ಅಧೀನದಲ್ಲಿ ಕೆಲಸ ಮಾಡುವ ಮಹಿಳಾ ಐಪಿಎಸ್‌ ಅಧಿಕಾರಿಗೆ ಲೈಂಗಿಕ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಅಪರಾಧಿ ಎಂದು ಅಧೀನ ನ್ಯಾಯಾಲಯವು ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಪ್ರಸಕ್ತ ವರ್ಷದ ಏಪ್ರಿಲ್‌ನಲ್ಲಿ ಅವರು ಮದ್ರಾಸ್‌ ಹೈಕೋರ್ಟ್‌ ಮೊರೆ ಹೋಗಿದ್ದರು. ಇವರ ಅರ್ಜಿಯನ್ನು ಮದ್ರಾಸ್‌ ಹೈಕೋರ್ಟ್‌ ನಿರಾಕರಿಸಿತ್ತು. ಆದರೆ, ಇವರ ಬಂಧನಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿ ಮೇ 17ರಂದು ಸುಪ್ರೀಂ ಕೋರ್ಟ್‌ ಆದೇಶಿಸಿದೆ.

ಇದನ್ನೂ ಓದಿ: Viral Video: ಅಬ್ಬಾ…ಇವರೆಂಥಾ ರಾಕ್ಷಸರು! ಸೊಸೆ ಮೇಲೆ ಅತ್ತೆ, ನಾದಿನಿಯಿಂದ ಅಟ್ಯಾಕ್‌; ವಿಡಿಯೋ ವೈರಲ್‌

Exit mobile version