Site icon Vistara News

Myanmar Aircraft: ಮಿಜೋರಾಂನಲ್ಲಿ ಮ್ಯಾನ್ಮಾರ್‌ ಸೇನೆ ವಿಮಾನ ಪತನ; 8 ಜನಕ್ಕೆ ಗಾಯ

Myanmar Aircraft Crash

Myanmar Military Aircraft crashes in Mizoram's Lengpui airport, six people injured

ಐಜ್ವಾಲ್:‌ ಮಿಜೋರಾಂನ ಲೆಂಗ್‌ಪೊಯಿ ವಿಮಾನ ನಿಲ್ದಾಣದ ಬಳಿ ಮ್ಯಾನ್ಮಾರ್‌ ಸೇನೆಯ ವಿಮಾನವೊಂದು (Myanmar Aircraft) ಪತನಗೊಂಡಿದ್ದು, 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಲೆಂಗ್‌ಪುಯಿ ವಿಮಾನದ ರನ್‌ವೇನಲ್ಲಿ ಮಂಗಳವಾರ (ಜನವರಿ 23) ಬೆಳಗ್ಗೆ 10.19ರ ಸುಮಾರಿಗೆ ಮ್ಯಾನ್ಮಾರ್‌ ಸೇನೆಯ ವಿಮಾನವು ಜಾರಿ, ಪತನಗೊಂಡಿದೆ ಎಂದು ಮೂಲಗಳು ತಿಳಿಸಿವೆ. ವಿಮಾನದಲ್ಲಿ 14 ಜನ ಇದ್ದರು. ಗಾಯಗೊಂಡಿರುವ ಎಂಟು ಮಂದಿಯನ್ನು ಲೆಂಗ್‌ಪುಯಿ ಆಸ್ಪತ್ರೆಗೆ ರವಾನಿಸಲಾಗಿದೆ.

ಮ್ಯಾನ್ಮಾರ್‌ ಹಾಗೂ ನಾಗರಿಕ ಸೇನೆಯ ಮಧ್ಯೆ ಸಂಘರ್ಷ ಏರ್ಪಟ್ಟ ಕಾರಣ ಮಿಜೋರಾಂನ ಲಾಂಗ್‌ಟ್ಲಾಯಿ ಜಿಲ್ಲೆಯ ಗಡಿಗೆ ಮ್ಯಾನ್ಮಾರ್‌ ಸೈನಿಕರು ತೆರಳಿದ್ದರು. ಈ ಸೈನಿಕರನ್ನು ಕರೆದುಕೊಂಡು ಹೋಗಲು ಮ್ಯಾನ್ಮಾರ್‌ ಸೇನೆಯು ವಿಮಾನವನ್ನು ಕಳುಹಿಸಿತ್ತು. ಆದರೆ, ಸೈನಿಕರನ್ನು ಕರೆದುಕೊಂಡು ಹೋಗುವ ಮೊದಲೇ ವಿಮಾನ ಪತನವಾಗಿದೆ. ಕೂಡಲೇ ರಕ್ಷಣಾ ಸಿಬ್ಬಂದಿಯು ವಿಮಾನದಲ್ಲಿದ್ದವರನ್ನು ರಕ್ಷಿಸುವ ಜತೆಗೆ ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಮಾಡಿತು ಎಂದು ತಿಳಿದುಬಂದಿದೆ. ಮ್ಯಾನ್ಮಾರ್‌ನ 270ಕ್ಕೂ ಹೆಚ್ಚು ಸೈನಿಕರು ಮಿಜೋರಾಂನಲ್ಲಿ ಆಶ್ರಯ ಪಡೆದಿದ್ದಾರೆ. ಸಂಘರ್ಷದ ಹಿನ್ನೆಲೆಯಲ್ಲಿ ಇವರು ಆಶ್ರಯ ಪಡೆದಿದ್ದಾರೆ ಎನ್ನಲಾಗಿದೆ.

2023ರ ಡಿಸೆಂಬರ್‌ನಲ್ಲಿ ತೆಲಂಗಾಣದ ಮೇಡಕ್‌ ಜಿಲ್ಲೆಯಲ್ಲಿ ಭಾರತೀಯ ವಾಯುಪಡೆಯ ತರಬೇತಿ ವಿಮಾನವೊಂದು ಪತನಗೊಂಡು ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದರು. ಟೂಪ್ರಾನ್‌ ಪಟ್ಟಣದ ರಾವೆಳ್ಳಿ ಗ್ರಾಮದ ಬಳಿ ಗುಡ್ಡಗಾಡು ಪ್ರದೇಶದಲ್ಲಿ ಡಿಸೆಂಬರ್‌ 4ರಂದು ವಿಮಾನ ಪತನಗೊಂಡಿತ್ತು. ದುಂಡಿಗಲ್‌ ಏರ್‌ಫೋರ್ಸ್‌ ಅಕಾಡೆಮಿಯಿಂದ ಹಾರಾಟ ಆರಂಭಿಸಿದ್ದ ಪೈಲಟಸ್‌ ಪಿಸಿ 7 ಎಂಕೆ-II ವಿಮಾನವು ರಾವೆಳ್ಳಿ ಗ್ರಾಮದಲ್ಲಿ ಪತನಗೊಂಡಿತ್ತು. ವಿಮಾನದಲ್ಲಿದ್ದ ಒಬ್ಬ ಇನ್‌ಸ್ಟ್ರಕ್ಟರ್‌ ಪೈಲಟ್‌ ಹಾಗೂ ಒಬ್ಬ ಕೆಡೆಟ್‌ ಮೃತಪಟ್ಟಿದ್ದಾರೆ.

ಇದನ್ನೂ ಓದಿ: Plane Crash: ಅಫಘಾನಿಸ್ತಾನದಲ್ಲಿ ಪತನಗೊಂಡ ವಿಮಾನ ಭಾರತದಲ್ಲ; ಕೇಂದ್ರ ಸ್ಪಷ್ಟನೆ

ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ ವರ್ಷದ ಆಗಸ್ಟ್‌ನಲ್ಲಿ ಡಿಆರ್‌ಡಿಒ ವಿಮಾನವೊಂದು ಪತನಗೊಂಡಿತ್ತು. ಜಿಲ್ಲೆಯ ಹಿರಿಯೂರು ತಾಲೂಕಿನ ವದ್ದಿಕೆರೆ ಗ್ರಾಮದ ಬಳಿ ಭಾನುವಾರ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮಾನವರಹಿತ ಲಘುವಿಮಾನ ಪತನಗೊಂಡಿತ್ತು. ಪ್ರಾಯೋಗಿಕ ಹಾರಾಟದ ವೇಳೆ ತಪಸ್‌ 07A-14 ವಿಮಾನವು ಜಮೀನಿನಲ್ಲಿ ಪತನಗೊಂಡಿತ್ತು. ಗ್ರಾಮದ ಸಿದ್ದಪ್ಪ ಎಂಬುವರ ಜಮೀನಿನಲ್ಲಿ ಲಘು ವಿಮಾನ ಬಿದ್ದಿತ್ತು. 2019ರ ಸೆಪ್ಟೆಂಬರ್‌ನಲ್ಲಿ ಕೂಡ ಡಿಆರ್‌ಡಿಒದ ರುಸ್ತುಂ 2 ಎಂಬ ಮಾನವರಹಿತ ಲಘು ವಿಮಾನ ಕೂಡ ಚಿತ್ರದುರ್ಗ ಜಿಲ್ಲೆದಲ್ಲಿ ಪತನವಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version