Site icon Vistara News

ಭೂಗರ್ಭದಿಂದ ಕೇಳಿಬರುತ್ತಿದೆ ಅದೇನೋ ನಿಗೂಢ ಶಬ್ದ; ಕಂಗಾಲಾಗಿರುವ ಸ್ಥಳೀಯರಿಗೆ ಧೈರ್ಯ ತುಂಬಿದ ಡಿಸಿ

Maharashtra

ಲಾತೂರ್​: ಕಳೆದ ವರ್ಷ ಕಲಬುರಗಿಯ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದ ಜನರು ಒಂದು ವಿಚಿತ್ರ ಕಾರಣಕ್ಕೆ ಸಿಕ್ಕಾಪಟೆ ಭಯ ಪಟ್ಟಿದ್ದರು. ಆ ಗ್ರಾಮದಲ್ಲಿ ಭೂಮಿಯೊಳಗಿಂದ ಸದಾ ಢಂ ಢಂ ಎಂಬ ಶಬ್ದ ಕೇಳುತ್ತದೆ. ಇದು ಆತಂಕ ಹುಟ್ಟಿಸುತ್ತದೆ ಎಂಬುದು ಅವರ ಅಳಲಾಗಿತ್ತು. ಇದೀಗ ಅಂಥದ್ದೇ ಅನುಭವವನ್ನು ಮಹಾರಾಷ್ಟ್ರದ ಲಾತೂರ್​ ಜಿಲ್ಲೆಯ ಹಾಸೋರಿ ಎಂಬ ಗ್ರಾಮದ ಜನರು ಪಡೆಯುತ್ತಿದ್ದಾರೆ. ‘ಕಳೆದ ಒಂದು ವಾರದಿಂದ ಭೂಮಿಯೊಳಗಿನಿಂದ ವಿಚಿತ್ರ ಶಬ್ದ ಕೇಳುತ್ತಿದೆ (Hasori village Of Maharashtra). ಅದ್ಯಾಕೆ ಎಂದು ಅರ್ಥವಾಗುತ್ತಿಲ್ಲ, ಭಾರತೀಯ ಭೂಕಾಂತೀಯ ಸಂಸ್ಥೆ (Indian Institute of Geomagnetism)ಯಿಂದ ಯಾರಾದರೂ ಭೂತಜ್ಞರು ಇಲ್ಲಿಗೆ ಆಗಮಿಸಿ, ಶಬ್ದದ ಕಾರಣ ಕಂಡುಹಿಡಿಯಬೇಕು’ ಎಂದು ಆಗ್ರಹಿಸುತ್ತಿದ್ದಾರೆ.

ಹಾಸೋರಿ ಗ್ರಾಮದಲ್ಲಿ ಯಾವುದೇ ಗಣಿಗಾರಿಕೆಯೂ ನಡೆಯುತ್ತಿಲ್ಲ. ಇದು ಕಿಲ್ಲಾರಿ ಎಂಬ ಪ್ರದೇಶದಿಂದ 28 ಕಿಲೋ ಮೀಟರ್​ ದೂರದಲ್ಲಿದೆ. ಈ ಕಿಲ್ಲಾರಿಯಲ್ಲಿ 1993ರಲ್ಲಿ ಬಹುದೊಡ್ಡ ಮಟ್ಟದ ಭೂಕಂಪ ಆಗಿತ್ತು. ಸುಮಾರು 9700 ಮಂದಿ ಮೃತಪಟ್ಟಿದ್ದರು. ಹಾಗಂತ ಹಾಸೋರಿ ಗ್ರಾಮದಲ್ಲಿ ಇವತ್ತಿನವರೆಗೆ ಭೂಕಂಪನ ಆಗಿಲ್ಲ. ಆದರೆ ಅಲ್ಲಿನ ಜನರಂತೂ ಕಂಗಾಲಾಗಿದ್ದಾರೆ. ಸೆಪ್ಟೆಂಬರ್ 6ರಿಂದಲೂ ಈ ಶಬ್ದ ಕೇಳುತ್ತಿದೆ. ಆದಷ್ಟು ಬೇಗ ಅದೇನೆಂದು ಕಂಡು ಹಿಡಿಯಿರಿ ಎಂದು ಸ್ಥಳೀಯ ಆಡಳಿತದ ಎದುರು ಬೇಡಿಕೆ ಇಟ್ಟಿದ್ದಾರೆ.

ಗ್ರಾಮಸ್ಥರ ಆಗ್ರಹ, ಆತಂಕದ ಬೆನ್ನಲ್ಲೇ ಲಾತೂರ್​ ಜಿಲ್ಲಾಧಿಕಾರಿ ಪ್ರಥ್ವಿರಾಜ್​ ಬಿಪಿ ಅಲ್ಲಿಗೆ ಭೇಟಿ ಕೊಟ್ಟು ಸ್ಥಳೀಯ ನಿವಾಸಿಗಳಿಗೆ ಧೈರ್ಯ ತುಂಬಿದ್ದಾರೆ. ಹಾಗೇ ಮಹಾರಾಷ್ಟ್ರದ ನಂದೇಡ್​​ನಲ್ಲಿರುವ ಸ್ವಾಮಿ ರಾಮಾನಂದ ತೀರ್ಥ ಮರಾಠಾವಾಡಾ ಯೂನಿರ್ವಸಿಟಿಯ ಭೂವಿಜ್ಞಾನ ತಜ್ಞರು ಗ್ರಾಮಕ್ಕೆ ಭೇಟಿಕೊಡಲಿದ್ದಾರೆ.

ಲಾತೂರ್​​ನಲ್ಲಿ 1993ರ ಸೆಪ್ಟೆಂಬರ್​ 30ರಂದು ಪ್ರಬಲ ಭೂಕಂಪ ಆಗಿತ್ತು. ಈ ಭೂಕಂಪನದ ಕೇಂದ್ರ ಕಿಲ್ಲಾರಿ ಪ್ರದೇಶವಾಗಿದ್ದು, ಭೂಮೇಲ್ಮೈನಿಂದ 10 ಕಿಮೀ ಆಳದಲ್ಲಿ ಭೂಮಿ ನಡುಗಿತ್ತು. ರಿಕ್ಟರ್​ ಮಾಪಕದಲ್ಲಿ 6.2 ತೀವ್ರತೆ ದಾಖಲಾಗಿತ್ತು. ಮಹಾರಾಷ್ಟ್ರದ ಅತ್ಯಂತ ಡೆಡ್ಲಿ ಭೂಕಂಪನ ಸುಮಾರು 10 ಗ್ರಾಮಗಳಿಗೆ ತೀವ್ರತರ ಹೊಡೆತ ಕೊಟ್ಟಿತ್ತು. 9700 ಮಂದಿ ಪ್ರಾಣ ಕಳೆದುಕೊಂಡು, 30 ಸಾವಿರಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಈಗ ಭೂಗರ್ಭದಿಂದ ಬರುತ್ತಿರುವ ಶಬ್ದ ಅಲ್ಲಿನ ಜನರಿಗೆ ಹಳೇ ಭೂಕಂಪವನ್ನು ನೆನಪಿಸಿ ಆತಂಕ ಹುಟ್ಟಿಸುತ್ತಿದೆ.

ಇದನ್ನೂ ಓದಿ: ಚಿಂಚೋಳಿ ತಾಲೂಕಿನಲ್ಲಿ ಭೂಕಂಪನ, ಭಾರಿ ಶಬ್ದ

Exit mobile version