Site icon Vistara News

Nafe Singh Rathi: ಐಎನ್‌ಎಲ್‌ಡಿ ನಾಯಕ ರಾಠಿ ಹತ್ಯೆ; ಶೂಟರ್‌ಗಳ ಬಂಧನ

Nafe Singh Rathi

Nafe Singh Rathi

ನವದೆಹಲಿ: ಪ್ರಮುಖ ಬೆಳವಣಿಗೆಯೊಂದರಲ್ಲಿ ಹರ್ಯಾಣ ಇಂಡಿಯನ್ ನ್ಯಾಷನಲ್ ಲೋಕದಳ (INLD) ಮುಖ್ಯಸ್ಥ, ಮಾಜಿ ಶಾಸಕ ನಫೆ ಸಿಂಗ್ ರಾಠಿ (Nafe Singh Rathi) ಅವರ ಹತ್ಯೆಗೆ ಸಂಬಂಧಿಸಿದಂತೆ ಝಜ್ಜರ್ ಪೊಲೀಸ್‌, ದೆಹಲಿ ಪೊಲೀಸ್ ವಿಶೇಷ ಸೆಲ್ ಮತ್ತು ಹರ್ಯಾಣ ಎಸ್‌ಟಿಎಫ್ ಜಂಟಿ ಕಾರ್ಯಾಚರಣೆ ನಡೆಸಿ ಗೋವಾದಲ್ಲಿ ಇಬ್ಬರು ಶೂಟರ್‌ಗಳನ್ನು ಬಂಧಿಸಿದೆ. ಶಂಕಿತರನ್ನು ಸೌರವ್ ಮತ್ತು ಆಶಿಶ್ ಎಂದು ಗುರುತಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಇನ್ನೂ ಇಬ್ಬರು ಶೂಟರ್‌ಗಳನ್ನು ಬಂಧಿಸಲು ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಝಜ್ಜರ್ ಪೊಲೀಸರು ತಿಳಿಸಿದ್ದಾರೆ. ಇಬ್ಬರು ಶೂಟರ್‌ಗಳು ಕಪಿಲ್ ಸಾಂಗ್ವಾನ್ ಗ್ಯಾಂಗ್‌ನೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಶಂಕಿಸಲಾಗಿದೆ. ಐಎನ್ಎಲ್‌ಡಿ ನಾಯಕ ನಫೆ ಸಿಂಗ್ ರಾಠಿ ಮತ್ತು ಪಕ್ಷದ ಕಾರ್ಯಕರ್ತ ಜೈ ಕಿಶನ್ ಅವರನ್ನು ಫೆಬ್ರವರಿ 25ರಂದು ಹರ್ಯಾಣದ ಜಜ್ಜರ್‌ನ ಬಹದ್ದೂರ್‌ಗಢ ಪಟ್ಟಣದಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿ ಪರಾರಿಯಾಗಿದ್ದರು.

ಇಂಗ್ಲೆಂಡ್‌ ಮೂಲದ ಗ್ಯಾಂಗ್‌ಸ್ಟರ್‌ ಕಪಿಲ್ ಸಂಗ್ವಾನ್ ಅಲಿಯಾಸ್ ನಂದು ಈ ಹತ್ಯೆಯ ಜವಾಬ್ದಾರಿ ಹೊತ್ತುಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂಗ್ವಾನ್‌ನ ಪ್ರತಿಸ್ಪರ್ಧಿ ಗ್ಯಾಂಗ್‌ಸ್ಟರ್‌ ಮಂಜೀತ್ ಮಹಲ್‌ನೊಂದಿಗೆ ರಾಠಿ ನಿಕಟ ಸ್ನೇಹ ಹೊಂದಿದ್ದು, ಇದೇ ಕಾರಣಕ್ಕೆ ಹತ್ಯೆ ಮಾಡಲಾಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಸಂಗ್ವಾನ್ ಇನ್‌ಸ್ಟಾಗ್ರಾಮ್‌ನಲ್ಲಿ ಘೋಷಿಸಿದ್ದ. ಈ ಪೋಸ್ಟ್‌ನಲ್ಲಿ ರಾಠಿ ಅವರು ಮಹಲ್‌ನ ಕೈ ಕುಲುಕುತ್ತಿರುವ ಚಿತ್ರವಿದೆ.

ದೆಹಲಿ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಸಂಗ್ವಾನ್ ಮತ್ತು ಮಹಲ್ ಇಬ್ಬರೂ ನಜಾಫ್‌ಗಡ್‌ ನಿವಾಸಿಗಳು. ಮಹಲ್ ಮತ್ತು ಅವರ ಸಹಚರರು 2015ರಲ್ಲಿ ಸಂಗ್ವಾನ್ ಅವರ ಸೋದರ ಮಾವ ಸುನಿಲ್ ಅಲಿಯಾಸ್ ‘ಡಾಕ್ಟರ್’ ಅವರನ್ನು ಕೊಂದಾಗಿನಿಂದ ಇಬ್ಬರ ಮಧ್ಯೆ ದ್ವೇಷ ಹೊತ್ತಿಕೊಂಡಿತ್ತು. ಸಂಗ್ವಾನ್ 2017ರಲ್ಲಿ ಮಹಲ್‌ನ ತಂದೆ ಶ್ರೀ ಕೃಷ್ಣ ಅವರನ್ನು ನಜಾಫ್‌ಗಡ್‌ನ ಅವರ ಮನೆಯಲ್ಲಿ ಗುಂಡಿಕ್ಕಿ ಕೊಲ್ಲುವ ಮೂಲಕ ಸೇಡು ತೀರಿಸಿಕೊಂಡಿದ್ದ.

ಇದನ್ನೂ ಓದಿ: Nafe Singh Rathi: ಐಎನ್‌ಎಲ್‌ಡಿ ನಾಯಕ ರಾಠಿ ಹತ್ಯೆಯ ಹಿಂದೆ ಇಂಗ್ಲೆಂಡ್‌ ಮೂಲದ ಗ್ಯಾಂಗ್‌ನ ಕೈವಾಡ?

ನಫೆ ಸಿಂಗ್ ರಾಠಿ ಅವರ ಹತ್ಯೆ

ಮಾಜಿ ಶಾಸಕರೂ ಆಗಿರುವ ಐಎನ್‌ಡಿಎಲ್ ಹರ್ಯಾಣ ಘಟಕದ ಅಧ್ಯಕ್ಷ ರಾಠಿ ಫೆಬ್ರವರಿ 25ರಂದು ತಮ್ಮ ಎಸ್‌ಯುವಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಹರ್ಯಾಣದ ಜಜ್ಜರ್‌ನ ಬಹದ್ದೂರ್‌ಗಢ ಪಟ್ಟಣದಲ್ಲಿ ರೈಲು ಕ್ರಾಸಿಂಗ್‌ಗಾಗಿ ರಾಠಿ ಅವರ ವಾಹನವನ್ನು ನಿಲ್ಲಿಸಲಾಗಿತ್ತು. ಆಗ ಸಿನಿಮೀಯ ಮಾದರಿಯ ಘಟನೆ ಸಂಭವಿಸಿತು. ಅಲ್ಲಿಗೆ ಆಗಮಿಸಿದ ಕಾರೊಂದು ರಾಠಿ ಅವರಿದ್ದ ಎಸ್‌ಯುವಿಗೆ ಡಿಕ್ಕಿ ಹೊಡೆಯಿತು. ಬಳಿಕ ಆ ನಿಗೂಢ ಕಾರಿನಿಂದ ಹೊರ ಬಂದ ಸುಮಾರು 5 ಮಂದಿ ರಾಠಿ ಅವರ ಮೇಲೆ ನಿರಂತರವಾಗಿ ಗುಂಡಿನ ಮಳೆಗೆರೆದರು. ಈ ವೇಳೆ 66 ವರ್ಷದ ರಾಠಿ ಮತ್ತು ಅವರ ಸಹಾಯಕ ಸಾವನ್ನಪ್ಪಿದರು. ಇತರ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಾಳಿಕೋರರು ವಾಹನವನ್ನು ಚಾಲನೆ ಮಾಡುತ್ತಿದ್ದ ರಾಠಿ ಅವರ ಸೋದರಳಿಯನ ಜೀವವನ್ನು ಉಳಿಸಿದ್ದು, ಈ ದಾಳಿಯ ಬಗ್ಗೆ ಕುಟುಂಬಕ್ಕೆ ಮಾಹಿತಿ ನೀಡುವಂತೆ ಸೂಚಿಸಿ ಪರಾರಿಯಾಗಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version