ನವ ದೆಹಲಿ: ದೇಶದಲ್ಲಿ ಉಂಟಾಗಿರುವ ಬೆಲೆ ಏರಿಕೆಯ ಪರಿಸ್ಥಿತಿ ಬಗ್ಗೆ ರಾಜ್ಯಸಭೆಯಲ್ಲಿ ಮುಂದಿನ ವಾರ ಚರ್ಚೆ ನಡೆಯುವ ನಿರೀಕ್ಷೆ ಉಂಟಾಗಿದೆ.
ಮುಂಗಾರು ಅಧಿವೇಶನ ಆರಂಭವಾದಂದಿನಿಂದ ಕಲಾಪಗಳು ಅಸ್ತವ್ಯಸ್ತವಾಗಿವೆ. ಈ ನಡುವೆ ಪ್ರತಿಪಕ್ಷಗಳನ್ನು ಸಮಾಧಾನಪಡಿಸಲು ರಾಜ್ಯಸಭೆಯ ಅಧ್ಯಕ್ಷ ವೆಂಕಯ್ಯ ನಾಯ್ಡು ಯತ್ನಿಸಿದ್ದಾರೆ. ಹಾಗೂ ಬೆಲೆ ಏರಿಕೆ ಬಗ್ಗೆ ರಾಜ್ಯಸಭೆಯಲ್ಲಿ ಮುಂದಿನ ವಾರ ಚರ್ಚೆ ನಡೆಸುವ ಬಗ್ಗೆ ಪ್ರತಿಪಕ್ಷಗಳಿಗೆ ಭರವಸೆ ನೀಡಿದ್ದಾರೆ.
ಕೋವಿಡ್-೧೯ ಸೋಂಕಿಗೆ ಒಳಗಾಗಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇದೀಗ ಚೇತರಿಸುತ್ತಿದ್ದು, ಮುಂದಿನ ವಾರ ಸಂಸತ್ತಿಗೆ ಮರಳುವ ಸಾಧ್ಯತೆ ಇದೆ. ಬಳಿಕ ಬೆಲೆ ಏರಿಕೆ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ವೆಂಕಯ್ಯ ನಾಯ್ಡು ತಿಳಿಸಿದ್ದಾರೆ.
ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಕೆ.ಸಿ ವೇಣುಗೋಪಾಲ್, ಎಸ್ಪಿ ನಾಯಕ ರಾಮ್ ಗೋಪಾಲ್ ಯಾದವ್, ಡಿಎಂಕೆಯ ತಿರುಚ್ಚಿ ಶಿವ, ಶಿವಸೇನಾದ ಸಂಜಯ್ ರಾವತ್ ಜತೆ ವೆಂಕಯ್ಯ ನಾಯ್ಡು ಮಾತುಕತೆ ನಡೆಸಿದ್ದಾರೆ. ಮೇಲ್ಮನೆಯಿಂದ ೧೯ ಪ್ರತಿಪಕ್ಷ ಸಂಸದರ ಅಮಾನತು ರದ್ದುಪಡಿಸಿ, ಬೆಲೆ ಏರಿಕೆ ಬಗ್ಗೆ ಚರ್ಚೆ ನಡೆಸಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿವೆ. ಅಮಾನತಿನ ಅವಧಿ ಈ ವಾರ ಮುಕ್ತಾಯವಾಗಲಿದೆ.
ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಷಿ ಕೂಡಾ, ಸಂಸತ್ತಿನಲ್ಲಿ ಬೆಲೆ ಏರಿಕೆ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಇತರ ಹಲವು ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಹಣದುಬ್ಬರವನ್ನು ನಿಯಂತ್ರಿಸಲಾಗಿದೆ ಎಂದು ಜೋಷಿ ಹೇಳಿದರು.