ಉತ್ತರ ಪ್ರದೇಶದ ಅಯೋಧ್ಯೆ (Ayodhya) ಈಗ ಜಗಮಗಿಸುತ್ತಿದೆ. ಭವ್ಯ ರಾಮಮಂದಿರವನ್ನು (Ram Mandir) ಕಣ್ತುಂಬಿಕೊಳ್ಳಲು ಕೋಟ್ಯಂತರ ಭಾರತೀಯರು ಕಾಯುತ್ತಿದ್ದಾರೆ. ಅದರಲ್ಲೂ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶನಿವಾರ (ಡಿಸೆಂಬರ್ 30) ಅಯೋಧ್ಯೆಗೆ ಭೇಟಿ ನೀಡಿ, ಅತ್ಯದ್ಭುತ ವಿಮಾನ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಿ, ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ತೆರಳಿದ ಬಳಿಕವಂತೂ ಅಯೋಧ್ಯೆಗೆ ಹೊಸ ಕಳೆ ಬಂದಿದೆ. 2024ರ ಜನವರಿ 22ರಂದು ರಾಮಮಂದಿರ ಲೋಕಾರ್ಪಣೆಯಾಗಲಿದ್ದು, ಅದಕ್ಕೂ ಮೊದಲು ಪ್ರಧಾನಿ ಅವರು ಅಯೋಧ್ಯೆಗೆ ಭೇಟಿ ನೀಡಿರುವುದು ರಾಮನ ನಗರಿಗೆ ಹೊಸ ಹುರುಪು ಸಿಗುವಂತೆ ಮಾಡಿದೆ. ನರೇಂದ್ರ ಮೋದಿ ರೋಡ್ ಶೋ, ಪಿಎಂ ಉಜ್ವಲ ಯೋಜನೆ ಫಲಾನುಭವಿ ಮಹಿಳೆ ಮನೆಗೆ ಭೇಟಿ, ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿರುವುದು ನಗರಕ್ಕೆ ನಗರವೇ ಉತ್ಸಾಹದ ಬುಗ್ಗೆಯಾಗಿದೆ. ಇದರಿಂದಾಗಿ ಈಗ ಭಾರತ ಮಾತ್ರವಲ್ಲ ವಿಶ್ವಕ್ಕೇ ಅಯೋಧ್ಯೆಯ ಹಿರಿಮೆ, ರಾಮಮಂದಿರದ ಗರಿಮೆಯ ಬಗ್ಗೆ ಗೊತ್ತಾಗಲಿದೆ. ಶ್ರೀರಾಮನ ಕೋಟ್ಯಂತರ ಭಕ್ತರು, ಪ್ರವಾಸಿಗರು ಅಯೋಧ್ಯೆಯತ್ತ ಲಗ್ಗೆ ಇಡಲಿದ್ದಾರೆ. ಹೀಗೆ, ಅಯೋಧ್ಯೆ ಇಂದು ಜಗತ್ಪ್ರಸಿದ್ಧಿ ಗಳಿಸುತ್ತಿರುವ, ಮೂಲ ಸೌಕರ್ಯ, ಅಭಿವೃದ್ಧಿ, ಪ್ರಮುಖ ಯಾತ್ರಾ ಕೇಂದ್ರವಾಗುತ್ತಿರುವುದರ ಹಿಂದೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಇಚ್ಛಾಶಕ್ತಿಯೇ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ.
ಅಯೋಧ್ಯೆ ಎಂದರೆ ರಾಮ ಜನ್ಮಭೂಮಿ, ಅಯೋಧ್ಯೆಯಲ್ಲಿದ್ದ ರಾಮಮಂದಿರ ಕೆಡವಿ ಬಾಬರಿ ಮಸೀದಿ ನಿರ್ಮಿಸಲಾಯಿತು, ಬಾಬರಿ ಮಸೀದಿ ಕೆಡವಿದ ಬಳಿಕ ರಾಮಜನ್ಮಭೂಮಿಯು ಪಾಳು ಬಿದ್ದಿತು ಎಂಬ ಮಾತುಗಳಷ್ಟೇ ಜನರ ಬಾಯಲ್ಲಿ ಚಾಲ್ತಿಯಲ್ಲಿದ್ದವು. ಐತಿಹಾಸಿಕ ಚರಿತ್ರೆ ಹೊಂದಿದ್ದರೂ ದೇಶದ ಹಲವು ನಗರಗಳಂತೆ ಅಯೋಧ್ಯೆಯೂ ಒಂದು ನಗರವಾಗಿತ್ತು. ಆದರೆ, ಅಯೋಧ್ಯೆಗೆ 2017ರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಯೋಗಿ ಆದಿತ್ಯನಾಥ್ ಅವರು ಹೊಸ ರೂಪ ನೀಡಲು ಮುಂದಾದರು. ಅಯೋಧ್ಯೆಗೆ ಇರುವ ‘ರಾಮನ ಅಸ್ಮಿತೆ’ ಮರುಕಳಿಸುವ ಜತೆಗೆ ಮೂಲ ಸೌಕರ್ಯ, ಸಂಪರ್ಕ ಯೋಜನೆಗಳನ್ನು ಜಾರಿಗೆ ತಂದರು. ಇನ್ನು ರಾಮಮಂದಿರ ನಿರ್ಮಾಣದ ಕುರಿತು 2019ರಲ್ಲಿ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದ ಬಳಿಕವಂತೂ ಅಯೋಧ್ಯೆಯ ಚಹರೆಯೇ ಬದಲಾಯಿತು. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವೂ ಅಯೋಧ್ಯೆ ಅಭಿವೃದ್ಧಿಗೆ ಪಣತೊಟ್ಟಿತು. ಸಾವಿರಾರು ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉಡುಗೊರೆ ನೀಡಿತು. ಮೋದಿ-ಯೋಗಿಯ ‘ಡಬಲ್ ಎಂಜಿನ್’ ಸರ್ಕಾರವು ಇಚ್ಛಾಶಕ್ತಿಯ ಮೂಲಕವೇ ಅಯೋಧ್ಯೆಯ ವರ್ಚಸ್ಸು, ಪರಂಪರೆ, ಅಭಿವೃದ್ಧಿಯನ್ನು ಹತ್ತಾರು ಪಟ್ಟು ಹೆಚ್ಚಿಸಿತು.
ಅಯೋಧ್ಯೆಯಲ್ಲಿ ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರದ 32 ಸಾವಿರ ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳು, ಬೃಹತ್ ಕಾಮಗಾರಿಗಳು ಚಾಲ್ತಿಯಲ್ಲಿವೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೇ ಮಾಹಿತಿ ನೀಡಿದ್ದಾರೆ. ಇನ್ನು ನರೇಂದ್ರ ಮೋದಿ ಅವರು ಶನಿವಾರ ಸುಮಾರು 15,700 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಒಟ್ಟು 15,700 ಕೋಟಿ ರೂ. ಮೌಲ್ಯದ ಯೋಜನೆಗಳಲ್ಲಿ 11,100 ಕೋಟಿ ರೂ. ಮೌಲ್ಯದ ಯೋಜನೆಗಳು ಅಯೋಧ್ಯೆ ನಗರದ ಅಭಿವೃದ್ಧಿಗೇ ಸಂಬಂಧಿಸಿವೆ. ಇನ್ನುಳಿದ 4,600 ಕೋಟಿ ರೂ. ಮೌಲ್ಯದ ಯೋಜನೆಗಳು ಮಾತ್ರ ಇಡೀ ರಾಜ್ಯಕ್ಕೆ ಸಂಬಂಧಿಸಿವೆ. ಸುಮಾರು 1,450 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಅಯೋಧ್ಯೆ ವಿಮಾನ ನಿಲ್ದಾಣವು ಬೆಂಗಳೂರು ಸೇರಿ ದೇಶದ ಹತ್ತಾರು ಭಾಗಗಳಿಂದ ರಾಮನ ಭಕ್ತರನ್ನು ಅಯೋಧ್ಯೆಗೆ ಕರೆತರಲಿದೆ. ಅತ್ಯಾಧುನಿಕ ರೈಲುಗಳು ಅಯೋಧ್ಯೆಯನ್ನು ಸಂಪರ್ಕಿಸಲಿವೆ. ಅಯೋಧ್ಯೆಗೆ ಕಾಲಿಟ್ಟರೆ ಸುಸಜ್ಜಿತ ಮೂಲ ಸೌಕರ್ಯಗಳು ಜನರನ್ನು ಹಿಡಿದಿಡಲಿವೆ. ಸ್ವಚ್ಛತೆ, ವಸತಿ, ಸಂಪರ್ಕ, ಧಾರ್ಮಿಕ ಹಿರಿತನದ ರೂಪವಾಗಿ ಅಯೋಧ್ಯೆ ಪುಟಿದೆದ್ದಿದೆ.
ರಾಮಮಂದಿರ ಲೋಕಾರ್ಪಣೆ, ಅಯೋಧ್ಯೆಗೆ ಇರುವ ಪಾರಂಪರಿಕ ಹಿನ್ನೆಲೆ, ಮೂಲ ಸೌಕರ್ಯಗಳ ಅಭಿವೃದ್ಧಿಯಿಂದಾಗಿ ಅಯೋಧ್ಯೆಯು ದೇಶದಲ್ಲೇ ಹೆಚ್ಚು ಪ್ರವಾಸಿಗರನ್ನು ಸೆಳೆಯುವ ನಗರವಾಗಿ ಹೊರಹೊಮ್ಮುವುದರಲ್ಲಿ ಎರಡು ಮಾತಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, 2021ರಲ್ಲಿ ಅಯೋಧ್ಯೆಗೆ 1.57 ಕೋಟಿ ಪ್ರವಾಸಿಗರು, ರಾಮನ ಭಕ್ತರು ಭೇಟಿ ನೀಡಿದ್ದರು. ಗಮನಾರ್ಹ ಸಂಗತಿ ಎಂದರೆ, 2022ರಲ್ಲಿ ರಾಮಮಂದಿರ ನಿರ್ಮಾಣ ಕಾರ್ಯವು ಹೆಚ್ಚು ಪ್ರಗತಿಯತ್ತ ಸಾಗಿತೋ, ಆಗ ಪ್ರವಾಸಿಗರು ಭೇಟಿ ನೀಡುವ ಸಂಖ್ಯೆಯೂ ಗಣನೀಯವಾಗಿ ಏರಿಕೆ ಕಂಡಿದೆ. ಅಂದರೆ, 2022ರಲ್ಲಿ ಅಯೋಧ್ಯೆಗೆ 2.39 ಕೋಟಿ ಪ್ರವಾಸಿಗರು ಭೇಟಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ರಾಮಮಂದಿರ ಲೋಕಾರ್ಪಣೆಯಾದರೆ, ಅಯೋಧ್ಯೆಗೆ ಭೇಟಿ ನೀಡುವವರ ಸಂಖ್ಯೆ 10 ಪಟ್ಟು ಜಾಸ್ತಿಯಾಗುತ್ತದೆ ಎಂದು ಅಂದಾಜಿಸಲಾಗಿದೆ. ಅಂದರೆ, ಅಯೋಧ್ಯೆಗೆ ವರ್ಷಕ್ಕೆ ಅಂದಾಜು 20 ಕೋಟಿ ಜನ ಭೇಟಿ ನೀಡಲಿದ್ದಾರೆ. ಯಾವುದೇ ನಗರಕ್ಕೆ ವರ್ಷಕ್ಕೆ 20 ಕೋಟಿ ಪ್ರವಾಸಿಗರು ಭೇಟಿ ನೀಡಿದರೆ, ಆ ನಗರವು ಎಲ್ಲ ರೀತಿಯಲ್ಲಿ ಅಭಿವೃದ್ಧಿ ಹೊಂದುವುದರಲ್ಲಿ ಅನುಮಾನವೇ ಇಲ್ಲ. ಇದೇ ಕಾರಣಕ್ಕೆ ಈಗಾಗಲೇ ಅಯೋಧ್ಯೆಯಲ್ಲಿ ಭೂಮಿಗೆ ಬಂಗಾರ ಬಿಡಿ, ವಜ್ರದ ಬೆಲೆ ಬಂದಿದೆ. ಬೀದಿ ಬದಿ ವ್ಯಾಪಾರಿಯಿಂದ ಹಿಡಿದು ದೊಡ್ಡ ಉದ್ಯಮಿಗಳ ಜೇಬು ತುಂಬುತ್ತಿದೆ.
ಇದನ್ನೂ ಓದಿ: ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಬಂದ ಮೊದಲ ವಿಮಾನ; ಜೈ ಶ್ರೀರಾಮ್ ಎಂದ ಪ್ರಯಾಣಿಕರು! ವಿಡಿಯೊ ಇದೆ
ಯಾವುದೇ ಒಂದು ಪ್ರದೇಶ, ದೇಶ ಅಥವಾ ರಾಜ್ಯವು ತನ್ನದೇ ಆದ ಅಸ್ಮಿತೆ, ಪರಂಪರೆ, ಆಚರಣೆಗಳನ್ನು ಹೊಂದಿರುತ್ತದೆ. ಆ ಪ್ರದೇಶದ ಅಭಿವೃದ್ಧಿಯು ರಸ್ತೆ, ಸಾರಿಗೆ, ಸಂಪರ್ಕ, ಜನರ ಜೀವನಮಟ್ಟದ ಸುಧಾರಣೆಯ ಜತೆಗೆ ಅಲ್ಲಿನ ಸಂಸ್ಕೃತಿ, ಆಚರಣೆ, ನಂಬಿಕೆ, ಶ್ರದ್ಧಾಕೇಂದ್ರಗಳನ್ನು ಕೂಡ ಅವಲಂಬಿಸಿರುತ್ತದೆ. ಈಗಾಗಲೇ ನರೇಂದ್ರ ಮೋದಿ ಅವರು ತಮ್ಮ ಲೋಕಸಭೆ ಕ್ಷೇತ್ರವಾದ ಕಾಶಿಯ ಗತವೈಭವವನ್ನು ಕಾಶಿ ವಿಶ್ವನಾಥ ಕಾರಿಡಾರ್ ಮೂಲಕ ಮರುಕಳಿಸಿದ್ದಾರೆ. ಈಗ ಮೋದಿ-ಯೋಗಿ ಜೋಡಿಯು ಅಯೋಧ್ಯೆಯನ್ನು ಅಭಿವೃದ್ಧಿಗೊಳಿಸುವ ಜತೆಗೆ ಪರಂಪರೆ, ಸಂಸ್ಕೃತಿಯಿಂದಲೂ ಶ್ರೀಮಂತಗೊಳಿಸುತ್ತಿದೆ. ಯಾವುದೇ ರಾಜಕಾರಣಿಗಳಿಗೆ ಇಚ್ಛಾಶಕ್ತಿ, ಅಭಿವೃದ್ಧಿ ಮಾಡಿತೋರಿಸುವ, ಅಸ್ಮಿತೆಯನ್ನು ಎತ್ತಿ ಹಿಡಿಯುವ ಛಾತಿ ಇದ್ದರೆ ಏನಾಗುತ್ತದೆ ಎಂಬುದಕ್ಕೆ ಅಯೋಧ್ಯೆ, ಕಾಶಿಯೇ ನಮ್ಮ ಕಣ್ಣಮುಂದಿವೆ. ಇಂತಹ ಇಚ್ಛಾಶಕ್ತಿಯುಳ್ಳ ರಾಜಕಾರಣಿಗಳ ಸಂತತಿ ಸಾವಿರವಾಗಲಿ. ದೇಶದ ಪ್ರತಿಯೊಂದು ಪ್ರದೇಶವೂ ಅಭಿವೃದ್ಧಿ, ಮೂಲ ಪರಂಪರೆ, ಸಂಸ್ಕೃತಿ, ಆಚಾರ-ವಿಚಾರಗಳ ಸಿರಿವಂತಿಕೆಯ ನೆಲೆವೀಡಾಗಲಿ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ