ನವದೆಹಲಿ: ರಾಜ್ಯಸಭೆ (Rajya Sabha)ಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಬುಧವಾರ (ಜುಲೈ 3) ರಾಷ್ಟ್ರಪತಿಯವರ ಭಾಷಣದ ಮೇಲಿನ ವಂದನಾ ನಿರ್ಣಯದ ವೇಳೆ ಮಾತನಾಡಿ, ಈ ಲೋಕಸಭಾ ಚುನಾವಣೆಯ ಫಲಿತಾಂಶ ದೇಶೀಯ ಬಂಡವಾಳ ಮಾರುಕಟ್ಟೆಗೆ ಉತ್ತೇಜನ ನೀಡಿದೆ ಎಂದು ಹೇಳಿದರು.
ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾಡಿದ ಭಾಷಣಕ್ಕಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಧನ್ಯವಾದ ಅರ್ಪಿಸುವ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಿದ ಅವರು, ʼʼಭಾರತವು ಸದ್ಯದಲ್ಲೇ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದ್ದು, ಅದು ದೇಶೀಯ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿಯೂ ಸಕಾರಾತ್ಮಕ ಪರಿಣಾಮ ಬೀರಲಿದೆʼʼ ಎಂದು ಅಭಿಪ್ರಾಯಪಟ್ಟರು.
#WATCH | PM Narendra Modi says, "In her Address, the President called paper leak, a major issue. I had expected all parties to speak by rising above party politics. But, unfortunately, they sacrificed even such a sensitive and important issue, an issue related to the future of… pic.twitter.com/qgGOO9E8qi
— ANI (@ANI) July 3, 2024
“ಭಾರತದ ಆರ್ಥಿಕತೆಯು 10ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಜಿಗಿದಿದೆ. ಭಾರತವನ್ನು ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡಲು ನಮಗೆ ಜನಾದೇಶ ಸಿಕ್ಕಿದೆ. ದೇಶದಲ್ಲಿ ಸಾರ್ವಜನಿಕ ಸಾರಿಗೆ ಕ್ಷೇತ್ರದಲ್ಲಿ ತ್ವರಿತ ಪರಿವರ್ತನೆಯಾಗಲಿದೆ. ತಂತ್ರಜ್ಞಾನದ ಹೆಜ್ಜೆ ಗುರುತುಗಳನ್ನು ಇಂದು ಅನೇಕ ಕ್ಷೇತ್ರಗಳಲ್ಲಿ ಕಾಣಬಹುದು” ಎಂದು ಅವರು ಹೇಳಿದರು.
ಮಹಿಳಾ ಸಬಲೀಕರಣ
ʼʼಮಹಿಳಾ ಸಬಲೀಕರಣದ ಪ್ರಯೋಜನಗಳು ಎಲ್ಲ ಕ್ಷೇತ್ರಗಳಲ್ಲಿ ಗೋಚರಿಸುತ್ತಿವೆ. ಸ್ವಸಹಾಯ ಗುಂಪುಗಳಲ್ಲಿ ಒಂದು ಕೋಟಿ ಮಹಿಳೆಯರು ‘ಲಖ್ಪತಿ ದೀದಿ’ಗಳಾಗಿದ್ದಾರೆ. ಈ ಸಂಖ್ಯೆ 3 ಕೋಟಿ ಹೆಚ್ಚಿಸಲು ಮುಂದಿನ ದಿನಗಳಲ್ಲಿ ಯತ್ನಿಸುತ್ತೇವೆ. ಜತೆಗೆ ನಮ್ಮ ಸರ್ಕಾರ ಬೆಂಬಲ ಬೆಲೆ ಹೆಚ್ಚಳ, ರಸಗೊಬ್ಬರಗಳಿಗೆ ರಿಯಾಯಿತಿ ನೀಡುವ ಮೂಲಕ ಕೃಷಿ ಕ್ಷೇತ್ರದ ಬಲವರ್ಧನೆಗೂ ಮುಂದಾಗಿದೆʼʼ ಎಂದು ತಿಳಿಸಿದರು.
ಮುಂದಿನ ಐದು ವರ್ಷಗಳಲ್ಲಿ ಮೂಲಭೂತ ಸೌಕರ್ಯಗಳ ವೃದ್ಧಿಗೆ ಶ್ರಮಿಸುತ್ತೇವೆ ಮತ್ತು ಬಡತನದ ವಿರುದ್ಧದ ಹೋರಾಡುತ್ತೇವೆ. ಮುಂದಿನ ಐದು ವರ್ಷಗಳಲ್ಲಿ ಈ ದೇಶವು ಬಡತನದ ವಿರುದ್ಧ ವಿಜಯಶಾಲಿಯಾಗಿ ಹೊರಹೊಮ್ಮಲಿದೆ ಎನ್ನುವ ವಿಶ್ವಾಸವಿದೆ. ಕಳೆದ 10 ವರ್ಷಗಳ ಅನುಭವದ ಆಧಾರದ ಮೇಲೆ ನಾನು ಇದನ್ನು ಹೇಳುತ್ತಿದ್ದೇನೆ. ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾದಾಗ, ಅದರ ಪರಿಣಾಮವು ಜೀವನದ ಪ್ರತಿಯೊಂದು ಕ್ಷೇತ್ರದ ಮೇಲೂ ಬೀರುತ್ತದೆ. ಭಾರತವು ಮಹಿಳಾ ನೇತೃತ್ವದ ಅಭಿವೃದ್ಧಿಯತ್ತ ನಿರ್ಣಾಯಕ ಹೆಜ್ಜೆಗಳನ್ನು ಇಟ್ಟಿದೆ ಮತ್ತು ಇಂದು ಅದರ ಫಲಿತಾಂಶ ನಮ್ಮ ಕಣ್ಣ ಮುಂದಿದೆ. ನಾವು ಮಹಿಳೆಯರ ಆರೋಗ್ಯ, ನೈರ್ಮಲ್ಯ ಮತ್ತು ಸ್ವಾಸ್ಥ್ಯ ಕ್ಷೇತ್ರಗಳಲ್ಲಿಯೂ ಕೆಲಸ ಮಾಡಿದ್ದೇವೆʼʼ ಎಂದು ಮೋದಿ ಹೇಳಿದರು.
ಈಗ ರದ್ದಾಗಿರುವ 2021-22ರ ದೆಹಲಿ ಅಬಕಾರಿ ನೀತಿಯಲ್ಲಿನ ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಅವರು ಆಮ್ ಆದ್ಮಿ ಪಕ್ಷ (ಎಎಪಿ) ವಿರುದ್ಧ ವಾಗ್ದಾಳಿ ನಡೆಸಿದರು. ಜತೆಗೆ ಕಾಂಗ್ರೆಸ್ ಮತ್ತು ಎಎಪಿ ದ್ವಂದ್ವ ನೀತಿ ಅನುಸರಿಸುತ್ತಿವೆ ಎಂದು ಆರೋಪಿಸಿದರು. “ಕೇಂದ್ರ ಸರ್ಕಾರವು ಸಿಬಿಐ ಮತ್ತು ಇಡಿ (ಜಾರಿ ನಿರ್ದೇಶನಾಲಯ) ನಂತಹ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಈಗ ಆರೋಪಿಸುತ್ತಿರುವವರು ಒಮ್ಮೆ ಅವುಗಳನ್ನು ಭ್ರಷ್ಟರ ವಿರುದ್ಧ ಬಳಸುವಂತೆ ಸರ್ಕಾರಕ್ಕೆ ಮನವಿ ಮಾಡಿದರು” ಎಂದು ನರೇಂದ್ರ ಮೋದಿ ಹೇಳಿದರು.
ಇದನ್ನೂ ಓದಿ: Sudha Murty: ಕರ್ನಾಟಕ ಸೇರಿ ದೇಶದ ಪ್ರವಾಸೋದ್ಯಮಕ್ಕೆ ಒತ್ತು ನೀಡಿ; ರಾಜ್ಯಸಭೆಯಲ್ಲಿ ಸುಧಾಮೂರ್ತಿ ಮೊದಲ ಭಾಷಣ!