Site icon Vistara News

Bharat Rice: ಮೋದಿ ಸರ್ಕಾರದಿಂದ ಬಡವರಿಗೆ ಕೊಡುಗೆ, ಇಂದಿನಿಂದ ಕಿಲೋಗೆ 29 ರೂಪಾಯಿಗೆ ʼಭಾರತ್‌ ಅಕ್ಕಿʼ

bharat rice narendra modi

ಹೊಸದಿಲ್ಲಿ: ಪ್ರತಿ ಕೆಜಿಗೆ 29 ರೂ.ಗಳ ಸಬ್ಸಿಡಿ (subsidised rate) ದರದಲ್ಲಿ ʻಭಾರತ್ ಅಕ್ಕಿ’ಯನ್ನು (Bharat Rice) ಮಂಗಳವಾರ ಕೇಂದ್ರ ಸರ್ಕಾರ ಇಂದು ಬಿಡುಗಡೆ ಮಾಡುತ್ತಿದೆ. ಸಬ್ಸಿಡಿ ಅಕ್ಕಿ 5 ಕೆಜಿ ಮತ್ತು 10 ಕೆಜಿ ಪ್ಯಾಕ್‌ಗಳಲ್ಲಿ ಲಭ್ಯವಿರುತ್ತದೆ.

ಕಳೆದ ಒಂದು ವರ್ಷದಲ್ಲಿ ಧಾನ್ಯದ ಚಿಲ್ಲರೆ ಬೆಲೆಯಲ್ಲಿ ಶೇಕಡಾ 15ರಷ್ಟು ಏರಿಕೆಯಾಗಿರುವ (inflation) ಹಿನ್ನೆಲೆಯಲ್ಲಿ ದರ ಏರಿಕೆಯಿಂದ ತುಸು ಪರಿಹಾರ ನೀಡಲು ಸರ್ಕಾರ ಇದನ್ನು ಒದಗಿಸುತ್ತಿದೆ. ಆಹಾರ ಸಚಿವ ಪಿಯೂಷ್ ಗೋಯಲ್ (Piyush Goyal) ಅವರು ರಾಷ್ಟ್ರ ರಾಜಧಾನಿಯ ಕರ್ತವ್ಯ ಪಥದಲ್ಲಿ ಭಾರತ್ ಅಕ್ಕಿ ವಿತರಣೆಯನ್ನು ಪ್ರಾರಂಭಿಸದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಇದರ ಮೊದಲ ಹಂತದಲ್ಲಿ ಭಾರತೀಯ ಆಹಾರ ನಿಗಮವು (Food Corporation of India – FCI – ಎಫ್‌ಸಿಐ) ಎರಡು ಸಹಕಾರಿ ಸಂಸ್ಥೆಗಳಾದ ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (NAFED) ಮತ್ತು ನ್ಯಾಷನಲ್ ಕೋಆಪರೇಟಿವ್ ಕನ್ಸೂಮರ್ಸ್ ಫೆಡರೇಶನ್ ಆಫ್ ಇಂಡಿಯಾ (NCCF) ಹಾಗೂ ಚಿಲ್ಲರೆ ಸರಪಳಿ ಕೇಂದ್ರೀಯ ಭಂಡಾರ್‌ಗೆ 5 ಲಕ್ಷ ಟನ್ ಅಕ್ಕಿಯನ್ನು ನೀಡುತ್ತದೆ.

ಈ ಏಜೆನ್ಸಿಗಳು ಅಕ್ಕಿಯನ್ನು 5 ಕೆಜಿ ಮತ್ತು 10 ಕೆಜಿಗಳಲ್ಲಿ ಪ್ಯಾಕ್ ಮಾಡುತ್ತವೆ ಮತ್ತು “ಭಾರತ್” ಬ್ರಾಂಡ್‌ನ ಅಡಿಯಲ್ಲಿ ತಮ್ಮ ಔಟ್‌ಲೆಟ್‌ಗಳ ಮೂಲಕ ಚಿಲ್ಲರೆ ಮಾರಾಟ ಮಾಡುತ್ತವೆ. ಅಕ್ಕಿಯನ್ನು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕವೂ ಮಾರಾಟ ಮಾಡಲಾಗುತ್ತದೆ.

ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (OMSS) ಮೂಲಕ ಅದೇ ದರದಲ್ಲಿ ಬೃಹತ್ ಬಳಕೆದಾರರಿಗೆ ಅಕ್ಕಿಯನ್ನು ಮಾರಾಟ ಮಾಡಲು ಮುಂದಾದಾಗ ದೊರೆತ ನೀರಸ ಪ್ರತಿಕ್ರಿಯೆಯ ಹಿನ್ನೆಲೆಯಲ್ಲಿ ಸರ್ಕಾರ FCI ಅಕ್ಕಿಯ ಚಿಲ್ಲರೆ ಮಾರಾಟವನ್ನು ಆಶ್ರಯಿಸಿದೆ.

ಅದೇ ಏಜೆನ್ಸಿಗಳ ಮೂಲಕ ಭಾರತ್ ಚನ್ನಾ ಕೆ.ಜಿಗೆ 27.50 ರೂ.ಗೆ ಮತ್ತು ʼಭಾರತ್ ಅಟ್ಟʼ ಕೆಜಿಗೆ 60 ರೂ.ಗೆ ಮಾರಾಟವಾಗುತ್ತಿವೆ. ಅವುಗಳಿಗೆ ಸಿಗುತ್ತಿರುವಂತೆಯೇ ʼಭಾರತ್ ಅಕ್ಕಿʼಗೂ ಉತ್ತಮ ಪ್ರತಿಕ್ರಿಯೆ ಸಿಗಲಿದೆ ಎಂದು ಸರ್ಕಾರ ಆಶಿಸಿದೆ.

2023-24ರಲ್ಲಿ ರಫ್ತು ಮತ್ತು ಬಂಪರ್ ಉತ್ಪಾದನೆಯ ಮೇಲಿನ ನಿರ್ಬಂಧಗಳ ಹೊರತಾಗಿಯೂ ಚಿಲ್ಲರೆ ಬೆಲೆಗಳು ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಆಹಾರ ಸಂಗ್ರಹಣೆಯನ್ನು ಪರಿಶೀಲಿಸಲು ಚಿಲ್ಲರೆ ವ್ಯಾಪಾರಿಗಳು, ಸಗಟು ವ್ಯಾಪಾರಿಗಳು, ಪ್ರೊಸೆಸರ್‌ಗಳು ಮತ್ತು ದೊಡ್ಡ ರಿಟೇಲ್ ಸರಪಳಿಗಳನ್ನು ತಮ್ಮ ದಾಸ್ತಾನುಗಳನ್ನು ಬಹಿರಂಗಪಡಿಸಲು ಸರ್ಕಾರ ಕೇಳಿದೆ.

ಸರ್ಕಾರವು 80 ಕೋಟಿ ಬಡ ಪಡಿತರ ಚೀಟಿದಾರರಿಗೆ ಉಚಿತ ಎಫ್‌ಸಿಐ ಅಕ್ಕಿಯನ್ನು ನೀಡುತ್ತಿದೆ. ಎಫ್‌ಸಿಐ ಅಕ್ಕಿಯಲ್ಲಿ ಹೆಚ್ಚಿನ ಹಣದುಬ್ಬರ ಸಾಧ್ಯವಿಲ್ಲ. ಏಕೆಂದರೆ ಎಫ್‌ಸಿಐ ಬೃಹತ್‌ ದಾಸ್ತಾನು ಹೊಂದಿದೆ ಮತ್ತು ಒಎಂಎಸ್‌ಎಸ್ ಮೂಲಕ ಧಾನ್ಯವನ್ನು ಮಾರಾಟ ಮಾಡುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಆದ್ದರಿಂದ ಹಣದುಬ್ಬರವು ಬಹುಶಃ ಬಡವರು ಕೊಳ್ಳದ, ಎಫ್‌ಸಿಐ ಮಾರಾಟ ಹೊರತುಪಡಿಸಿದ ಅಕ್ಕಿಗೆ ಆಗಿದ್ದು, ಇದು ಹಣದುಬ್ಬರದ ಪ್ರವೃತ್ತಿಯ ಬಗ್ಗೆ ಸರಿಯಾದ ಚಿತ್ರಣವನ್ನು ನೀಡುತ್ತಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: Budget 2024: ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೂ ಆಯುಷ್ಮಾನ್‌ ಭಾರತ್‌ ವಿಸ್ತರಣೆ: ನಿರ್ಮಲಾ ಸೀತಾರಾಮನ್

Exit mobile version