Site icon Vistara News

Narendra Modi: ಭಾರತ-ಚೀನಾ ಗಡಿ ಬಿಕ್ಕಟ್ಟು ಶೀಘ್ರ ಬಗೆಹರಿಯಲಿ; ಪ್ರಧಾನಿ ಮೋದಿ ಮನದಾಳ

Narendra Modi

Narendra Modi

ನವದೆಹಲಿ: ʼʼಭಾರತಕ್ಕೆ ಚೀನಾ ಜತೆಗಿನ ಸಂಬಂಧವು ಪ್ರಮುಖವಾಗಿದೆ. ಹಾಗಾಗಿ ಗಡಿಯಲ್ಲಿ ಉಂಟಾಗಿರುವ ಬಿಕ್ಕಟ್ಟು ಬಗೆಹರಿಸಿಕೊಳ್ಳುವ ದಿಸೆಯಲ್ಲಿ ನಾವು ಕ್ಷಿಪ್ರವಾಗಿ ಮಾತುಕತೆ ನಡೆಸಬೇಕು. ಗಡಿಯಲ್ಲಿ ಬಿಕ್ಕಟ್ಟು ಸೃಷ್ಟಿಯಾದರೆ ಉಭಯ ದೇಶಗಳ ಒಪ್ಪಂದ, ಸಂಬಂಧ, ದ್ವಿಪಕ್ಷೀಯ ಮಾತುಕತೆ ಹಿಂದೆ ಉಳಿಯುತ್ತದೆʼʼ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ. ನರೇಂದ್ರ ಮೋದಿ ಅವರು ಅಮೆರಿಕದ ನ್ಯೂಸ್‌ವೀಕ್‌ ಮ್ಯಾಗಜಿನ್‌ಗೆ (Newsweek Magazine) ನೀಡಿದ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.

ಸ್ಥಿರವಾದ ಭಾರತ-ಚೀನಾ ಸಂಬಂಧವು ಇಡೀ ಜಗತ್ತಿಗೆ ಮುಖ್ಯವಾಗಿದೆ ಎಂದು ಮೋದಿ ಒತ್ತಿ ಹೇಳಿದ್ದಾರೆ. “ಭಾರತಕ್ಕೆ, ಚೀನಾದೊಂದಿಗಿನ ಸಂಬಂಧವು ಮುಖ್ಯ ಮತ್ತು ಮಹತ್ವದ್ದಾಗಿದೆ. ನಮ್ಮ ಗಡಿಗಳಲ್ಲಿನ ದೀರ್ಘಕಾಲದ ವಿವಾದವನ್ನು ತುರ್ತಾಗಿ ಪರಿಹರಿಸಬೇಕು ಎನ್ನುವುದು ನನ್ನ ಅಭಿಪ್ರಾಯ” ಎಂದು ಅವರು ತಿಳಿಸಿದ್ದಾರೆ.

ಸಕಾರಾತ್ಮಕ ಕಾರ್ಯಕ್ರಮಗಳ ಮೂಲಕ ಗಡಿಯಲ್ಲಿ ಶಾಂತಿಯನ್ನು ಪುನಃಸ್ಥಾಪಿಸಲು ಸಾಧ್ಯವಾಗುತ್ತದೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ. “ಭಾರತ ಮತ್ತು ಚೀನಾ ನಡುವಿನ ಸ್ಥಿರ ಮತ್ತು ಶಾಂತಿಯುತ ಸಂಬಂಧಗಳು ನಮ್ಮ ಎರಡು ದೇಶಗಳಿಗೆ ಮಾತ್ರವಲ್ಲ ಇಡೀ ಜಗತ್ತಿಗೆ ಮುಖ್ಯವಾಗಿದೆ. ರಾಜತಾಂತ್ರಿಕ ಮತ್ತು ಮಿಲಿಟರಿ ಮಟ್ಟದಲ್ಲಿನ ಸಕಾರಾತ್ಮಕ ಮತ್ತು ರಚನಾತ್ಮಕ ದ್ವಿಪಕ್ಷೀಯ ಕಾರ್ಯಕ್ರಮಗಳ ಮೂಲಕ ನಮ್ಮ ಗಡಿಗಳಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಪುನಃ ಸ್ಥಾಪಿಸಲು ಮತ್ತು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ಅವರು ನ್ಯೂಯಾರ್ಕ್ ಮೂಲದ ನಿಯತಕಾಲಿಕದೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

2020ರಲ್ಲಿ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಸೈನಿಕರ ನಡುವೆ ಘರ್ಷಣೆಯಾದ ನಂತರ ಭಾರತ-ಚೀನಾ ಸಂಬಂಧಗಳು ತೀವ್ರವಾಗಿ ಹದಗೆಟ್ಟಿದೆ. ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದರು.

2019ರ ಪುಲ್ವಾಮಾ ದಾಳಿಯ ನಂತರದ ಭಾರತ-ಪಾಕಿಸ್ತಾನ ಸಂಬಂಧಗಳ ಬಗ್ಗೆಯೂ ಮೋದಿ ಪ್ರತಿಕ್ರಿಯಿಸಿದ್ದಾರೆ. ಈ ದಾಳಿಯಲ್ಲಿ 40 ಭಾರತೀಯ ಸೈನಿಕರು ಹುತಾತ್ಮರಾಗಿದ್ದರು. ”ಪಾಕಿಸ್ತಾನದ ನೂತನ ಪ್ರಧಾನಿ ಪ್ರಮಾಣ ವಚನ ಸ್ವೀಕರಿಸಿದ ಕಾರಣ ನಾನು ಅಭಿನಂದನೆ ಸಲ್ಲಿಸಿದೆ. ಭಾರತವು ಎಂದಿಗೂ ಶಾಂತಿ, ಭದ್ರತೆ, ಸಮೃದ್ಧಿಯನ್ನು ಬಯಸುತ್ತದೆ. ನಮ್ಮ ಪ್ರದೇಶದಲ್ಲಿ ಉಗ್ರವಾದ ಹಾಗೂ ಹಿಂಸಾಚಾರವನ್ನು ಮುಕ್ತಗೊಳಿಸಲು ಇಷ್ಟಪಡುತ್ತದೆ” ಎಂದು ತಿಳಿಸಿದ್ದಾರೆ. ಇಮ್ರಾನ್‌ ಖಾನ್‌ ಅವರಿಗೆ ಜೈಲು ಶಿಕ್ಷೆ ಕುರಿತ ಪ್ರಶ್ನೆಗೆ ಮೋದಿ, “ಪಾಕಿಸ್ತಾನದ ಆಂತರಿಕ ವಿಚಾರಗಳ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ” ಎಂದಿದ್ದಾರೆ.

ಇದನ್ನೂ ಓದಿ: PM Modi: ಅಮೆರಿಕ ಪತ್ರಿಕೆಗೆ ಮೋದಿ ಸಂದರ್ಶನ; ಮಂದಿರ, ಚೀನಾ ಸೇರಿ ಹಲವು ವಿಷಯಗಳ ಬಗ್ಗೆ ಹೇಳಿದ್ದಿಷ್ಟು!

ಈ ವೇಳೆ ಮೋದಿ ಅವರು ಮುಂಬರುವ ಲೋಕಸಭಾ ಚುನಾವಣೆಯ ಬಗ್ಗೆಯೂ ತಮ್ಮ ಮನದಾಳ ಹಂಚಿಕೊಂಡಿದ್ದಾರೆ. ʼʼ10 ವರ್ಷಗಳಲ್ಲಿ ಜನರಿಗೆ ನೀಡಿದ ಭರವಸೆಗಳನ್ನು ನಾವು ಈಡೇರಿಸಿದ್ದೇವೆ. ಇದಕ್ಕೂ ಮೊದಲು, ಜನರ ಭರವಸೆಗಳು, ಕನಸುಗಳು ಈಡೇರುತ್ತಿರಲಿಲ್ಲ. ಆದರೀಗ, ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌, ಸಬ್‌ ಕಾ ವಿಶ್ವಾಸ್‌, ಸಬ್‌ ಕಾ ಪ್ರಯಾಸ್‌ ತತ್ವದಲ್ಲಿ ಜನರ ಆಶೋತ್ತರಗಳನ್ನು ಕೇಂದ್ರ ಸರ್ಕಾರ ಈಡೇರಿಸಿದೆ. ಜಗತ್ತಿನ 11ನೇ ಬಲಿಷ್ಠ ಆರ್ಥಿಕತೆಯಿಂದ 5ನೇ ಆರ್ಥಿಕತೆಯಾಗಿ ಹೊರಹೊಮ್ಮಿದ್ದೇವೆ. ಹಾಗಾಗಿ ಜನ ನಮ್ಮ ಸರ್ಕಾರದ ಮೇಲೆ ಹೆಚ್ಚು ವಿಶ್ವಾಸ ಇರಿಸಿದ್ದಾರೆ. ಹಾಗಾಗಿ, ಲೋಕಸಭೆ ಚುನಾವಣೆಯಲ್ಲಿ ನಮಗೆ ಬೆಂಬಲ ಸಿಕ್ಕೇ ಸಿಗುತ್ತದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version