Site icon Vistara News

Modi Caste | ಮೋದಿ ಜಾತಿ ನಕಲಿ, ಜೆಡಿಯು ನಾಯಕ ಲಲನ್‌ ಸಿಂಗ್‌ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲ

Lalan Modi

ಪಟನಾ: ಪ್ರಧಾನಿ ನರೇಂದ್ರ ಮೋದಿ (Modi Caste) ಅವರ ಜಾತಿಯ ಕುರಿತು ಜೆಡಿಯು ರಾಷ್ಟ್ರೀಯ ಅಧ್ಯಕ್ಷ ಲಲನ್‌ ಸಿಂಗ್‌ (ರಾಜೀವ್‌ ರಂಜನ್)‌ ಮಾಡಿದ ಆರೋಪಕ್ಕೆ ಬಿಜೆಪಿ ಕೆಂಡಾಮಂಡಲವಾಗಿದೆ. “ನರೇಂದ್ರ ಮೋದಿ ಅವರು ಒಬ್ಬ ನಕಲಿ ವ್ಯಕ್ತಿಯಾಗಿದ್ದಾರೆ. ಅವರು ಜಾತಿ ಕುರಿತು ದೇಶದ ಜನರಿಗೆ ಸುಳ್ಳು ಹೇಳಿದ್ದಾರೆ” ಎಂದು ಲಲನ್‌ ಸಿಂಗ್‌ ಹೇಳಿದ್ದೀಗ ವಿವಾದಕ್ಕೆ ಕಾರಣವಾಗಿದೆ.

ಲಲನ್‌ ಸಿಂಗ್‌ ಹೇಳಿದ್ದೇನು?

“೨೦೧೪ರಲ್ಲಿ ನರೇಂದ್ರ ಮೋದಿ ಅವರು ದೇಶಾದ್ಯಂತ ನಾನು ತೀವ್ರ ಹಿಂದುಳಿದ ವರ್ಗ (EBC)ಕ್ಕೆ ಸೇರಿದವ ಎಂದು ಹೇಳಿಕೊಂಡು ಪ್ರಚಾರ ಕೈಗೊಂಡಿದ್ದರು. ಆದರೆ, ಗುಜರಾತ್‌ನಲ್ಲಿ ಇಬಿಸಿ ಎಂಬ ವರ್ಗವೇ ಇಲ್ಲ. ಅಲ್ಲಿ, ಬರೀ ಇತರೆ ಹಿಂದುಳಿದ ವರ್ಗ (OBC) ಇದೆ. ಮೋದಿ ಅವರೇ ಗುಜರಾತ್‌ ಮುಖ್ಯಮಂತ್ರಿಯಾದ ಬಳಿಕ ತಮ್ಮ ಜಾತಿಯನ್ನು ಒಬಿಸಿಗೆ ಸೇರಿಸಿದ್ದಾರೆ. ಅವರೊಬ್ಬ ಢೋಂಗಿ, ಅಸಲಿ ವ್ಯಕ್ತಿಯಲ್ಲ” ಎಂದು ಟೀಕಿಸಿದ್ದಾರೆ.

ಬಿಜೆಪಿ ತೀವ್ರ ಆಕ್ರೋಶ

ಲಲನ್‌ ಸಿಂಗ್‌ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ. “ಲಲನ್‌ ಸಿಂಗ್‌ ಅವರ ಬಳಿ ನಾಚಿಕೆ ಎಂಬುದೇ ಉಳಿದಿಲ್ಲ. ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿ ಹೀಗೆ ಹೇಳಿಕೆ ನೀಡುವುದೇಕೆ? ನರೇಂದ್ರ ಮೋದಿ ಅವರ ಹೆಸರು ಹೇಳಿಕೊಂಡೇ ಲಲನ್‌ ಸಿಂಗ್‌ ಅವರು ಸಂಸದರಾಗಿದ್ದಾರೆಯೇ ಹೊರತು, ನಿತೀಶ್‌ ಕುಮಾರ್‌ ಹೆಸರಲ್ಲ. ನಾವು ಸಣ್ಣ ಪುಟ್ಟ ನಾಯಕರ ಹೇಳಿಕೆಗೆ ಕಿವಿಗೊಡುವುದಿಲ್ಲ. ಆದರೆ, ಇಂತಹ ಹೇಳಿಕೆ ನೀಡುವುದು ಸರಿಯಲ್ಲ” ಎಂದು ಬಿಜೆಪಿ ನಾಯಕ ರವಿಶಂಕರ್‌ ಪ್ರಸಾದ್‌ ಹೇಳಿದ್ದಾರೆ.

ಕ್ಷಮೆ ಕೇಳಲ್ಲ ಎಂದ ಜೆಡಿಯು ನಾಯಕ

ಪ್ರಧಾನಿ ಕುರಿತು ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಬಿಜೆಪಿ ಕ್ಷಮೆಯಾಚಿಸಬೇಕು ಎಂದು ಪಟ್ಟುಹಿಡಿದಿದ್ದು, ಇದಕ್ಕೆ ಲಲನ್‌ ಸಿಂಗ್‌ ನಕಾರ ವ್ಯಕ್ತಪಡಿಸಿದ್ದಾರೆ. “ಯಾವುದಕ್ಕಾಗಿ ಕ್ಷಮೆ ಕೇಳಬೇಕು? ನಕಲಿ, ಢೋಂಗಿ ಎಂಬ ಅಸಂಸದೀಯ ಪದಗಳು ಅಲ್ಲ. ಹಾಗಾಗಿ, ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ” ಎಂದಿದ್ದಾರೆ. ಇದಕ್ಕೂ ಮೊದಲು ಲಲನ್‌ ಸಿಂಗ್‌ ಬಿಜೆಪಿಯಲ್ಲೇ ಇದ್ದರು.

ಇದನ್ನೂ ಓದಿ | Bharat Jodo | ಗಾಂಧಿ ಕುಟುಂಬ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದೆ; ಮೋದಿ, ಷಾ ಯಾವ ತ್ಯಾಗ ಮಾಡಿದ್ದಾರೆ: ಸಿದ್ದರಾಮಯ್ಯ ಪ್ರಶ್ನೆ

Exit mobile version