Site icon Vistara News

Modi Egypt Visit: ಯೇ ದೋಸ್ತಿ ಹಮ್‌ ನಹೀಂ ತೋಡೆಂಗೆ… ಶೋಲೆ ಹಾಡಿನೊಂದಿಗೆ ಈಜಿಪ್ಟ್‌ನಲ್ಲಿ ಮೋದಿಗೆ ಸ್ವಾಗತ

Egypt PM Welcomes Modi

Narendra Modi lands in Egypt for first bilateral visit by an Indian PM after 28 years

ಕೈರೋ: ಅಮೆರಿಕದಲ್ಲಿ ನಾಲ್ಕು ದಿನ ಸಾಲು ಸಾಲು ಕಾರ್ಯಕ್ರಮಗಳಲ್ಲಿ ಭಾಗಿಯಾಗಿ, ವಿಶೇಷ ಆತಿಥ್ಯ ಸ್ವೀಕರಿಸಿ, ದ್ವಿಪಕ್ಷೀಯ ಸಂಬಂಧಕ್ಕೆ ಮತ್ತೊಂದು ಮೈಲಿಗಲ್ಲು ನೆಟ್ಟು ಈಜಿಪ್ಟ್‌ಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ (Modi Egypt Visit) ಅವರಿಗೆ ಅಲ್ಲೂ ವಿಶೇಷ ಸ್ವಾಗತ ದೊರೆತಿದೆ. ಈಜಿಪ್ಟ್‌ ಪ್ರಧಾನಿ ಮೊಸ್ತಫಾ ಮ್ಯಾಡ್ಬೌಲಿ ಅವರು ಖುದ್ದು ವಿಮಾನ ನಿಲ್ದಾಣಕ್ಕೆ ಆಗಮಿಸಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿದರು. ಇದೇ ವೇಳೆ, ಈಜಿಪ್ಟ್‌ ಮಹಿಳೆಯೊಬ್ಬರು ಶೋಲೆ ಸಿನಿಮಾದ “ಯೇ ದೋಸ್ತಿ ಹಮ್‌ ನಹೀಂ ತೋಡೆಂಗೆ” ಹಾಡು ಹಾಡಿದರು.

ನರೇಂದ್ರ ಮೋದಿ ಅವರು ಈಜಿಪ್ಟ್‌ ತಲುಪುವ ಮೂಲಕ ಕಳೆದ 28 ವರ್ಷಗಳಲ್ಲಿ ಈಜಿಪ್ಟ್‌ಗೆ ಭೇಟಿ ನೀಡಿದ ಮೊದಲ ಪ್ರಧಾನಿ ಎನಿಸಿದರು. ಹಾಗೆಯೇ, ಮೋದಿ ಅವರು ಇದೇ ಮೊದಲ ಬಾರಿಗೆ ಈಜಿಪ್ಟ್‌ಗೆ ತೆರಳಿರುವುದು ಕೂಡ ವಿಶೇಷ ಎನಿಸಿದೆ. ವಿಶೇಷ ಪ್ರವಾಸದ ವೇಳೆ ಮೋದಿ ಅವರು ದ್ವಿಪಕ್ಷೀಯ ಮಾತುಕತೆ, ಸಂಬಂಧ ವೃದ್ಧಿ ಜತೆಗೆ ಅನಿವಾಸಿ ಭಾರತೀಯರನ್ನು ಕೂಡ ಭೇಟಿಯಾಗಲಿದ್ದಾರೆ.

ಮೋದಿ ತಂಗುವ ಹೋಟೆಲ್‌ನಲ್ಲಿ ಗಾಂಧಿ ಕವನ

ನರೇಂದ್ರ ಮೋದಿ ಅವರು ಹೋಟೆಲ್‌ನಲ್ಲಿ ಮಹಾತ್ಮ ಗಾಂಧೀಜಿ ಕುರಿತು ಈಜಿಪ್ಟ್‌ ಕವಿ ರಚಿಸಿರುವ ‘ಗಾಂಧಿ’ ಎಂಬ ಕವನದ ಫೋಟೊವನ್ನು ನೇತುಹಾಕಲಾಗಿದೆ. ಈಜಿಪ್ಟ್‌ ಕವಿ ಅಹ್ಮದ್‌ ಶಾವ್ಕಿ ಅವರು ಗಾಂಧೀಜಿ ಕುರಿತು ಕವನ ರಚಿಸಿದ್ದಾರೆ. ಅದನ್ನು ಕೈರೋದಲ್ಲಿರುವ ಹೋಟೆಲ್‌ನಲ್ಲಿ ಮೋದಿ ಭೇಟಿ ಸ್ಮರಣಾರ್ಥ ಗೋಡೆ ಮೇಲೆ ನೇತುಹಾಕಲಾಗಿದೆ.

ಇದನ್ನೂ ಓದಿ: PM Modi in Egypt: ಈಜಿಪ್ಟ್‌ ಸ್ಮಾರಕದಲ್ಲಿ ನಮನ ಸಲ್ಲಿಸಲಿದ್ದಾರೆ ಮೋದಿ; ಭಾರತಕ್ಕೆ ಇದೆ ಲಿಂಕ್!

ಶೋಲೆ ಸಿನಿಮಾದ ಹಾಡು ಹಾಡಿದ ಈಜಿಪ್ಟ್‌ ಮಹಿಳೆ

ನರೇಂದ್ರ ಮೋದಿ ಅವರು ಈಜಿಪ್ಟ್‌ಗೆ ಆಗಮಿಸುತ್ತಲೇ ಅಲ್ಲಿನ ಮಹಿಳೆಯರ ತಂಡವು ಸಾಂಪ್ರದಾಯಿಕವಾಗಿ ಸ್ವಾಗತ ಕೋರಿತು. ಇದೇ ವೇಳೆ ಈಜಿಪ್ಟ್‌ ಮಹಿಳೆಯೊಬ್ಬರು ಬಾಲಿವುಡ್‌ನ ಶೋಲೆ ಸಿನಿಮಾದ “ಯೇ ದೋಸ್ತಿ ಹಮ್‌ ನಹೀಂ ತೋಡೆಂಗೆ” ಹಾಡು ಹಾಡಿದರು. ಮಹಿಳೆ ಹಾಡಿಗೆ ಮೋದಿ ಮನಸೋತು ಮೆಚ್ಚುಗೆ ವ್ಯಕ್ತಪಡಿಸಿದರು.

ಮೋದಿ ಅವರು ಭೇಟಿ ವೇಳೆ ಕೈರೋದಲ್ಲಿನ ಹೆಲಿಯೊಪೊಲಿಸ್ ಯುದ್ಧ ಸ್ಮಾರಕದಲ್ಲಿ ಯೋಧರಿಗೆ ಗೌರವ ನಮನ ಸಲ್ಲಿಸಲಿದ್ದಾರೆ. ಹೆಲಿಯೊಪೊಲಿಸ್‌ ಎಂಬುದು ಈಜಿಪ್ಟ್‌ ರಾಜಧಾನಿ ಕೈರೋದಲ್ಲಿರುವ ಭಾರತೀಯ ಯೋಧರ ಒಂದು ಯುದ್ಧ ಸ್ಮಾರಕ. ಇಲ್ಲಿ, ಮೊದಲ ಮಹಾಯುದ್ಧದಲ್ಲಿ ಹೋರಾಡಿ ಮಡಿದ ಸುಮಾರು 4,000 ಭಾರತೀಯ ಸೈನಿಕರ ಹೆಸರನ್ನು ಕೆತ್ತಲಾಗಿದೆ. ಹೆಲಿಯೊಪೊಲಿಸ್ ಕಾಮನ್‌ವೆಲ್ತ್ ಯುದ್ಧ ಸಮಾಧಿಗಳ ಸ್ಮಶಾನದಲ್ಲಿ ಎರಡನೇ ವಿಶ್ವಸಮರದಲ್ಲಿ ಮಡಿದ 1,700 ಕಾಮನ್‌ವೆಲ್ತ್ ಸೈನಿಕರ ಸ್ಮಾರಕವೂ ಇದೆ.

Exit mobile version