Site icon Vistara News

Narendra Modi: ಮೋದಿ ಪ್ರಮಾಣವಚನಕ್ಕೆ 7 ವಿದೇಶಿ ನಾಯಕರು; 8000 ಅತಿಥಿಗಳು

Narendra Modi

Election Results 2024

ನವದೆಹಲಿ: ಲೋಕಸಭೆ ಚುನಾವಣೆ(Lok Sabha Election 2024)ಯ ಫಲಿತಾಂಶ ಹೊರಬಿದ್ದಿದ್ದು, ಸ್ಪಷ್ಟ ಬಹುಮತದ ಮೂಲಕ ಎನ್‌ಡಿಎ ಕೇಂದ್ರದಲ್ಲಿ ಮತ್ತೊಮ್ಮೆ ಸರ್ಕಾರ ರಚಿಸಲಿದೆ. ಮೂರನೇ ಬಾರಿ ಗದ್ದುಗೆ ಏರಲಿರುವ ನರೇಂದ್ರ ಮೋದಿ(Narendra Modi) ಭಾನುವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಇನ್ನು ಈ ಕಾರ್ಯಕ್ರಮದಲ್ಲಿ ದೇಶ-ವಿದೇಶದ ಗಣ್ಯರು ಭಾಗಿಯಾಗಲಿದ್ದಾರೆ.

ಭಾನುವಾರ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಏಳು ವಿದೇಶಿ ನಾಯಕರು ಸೇರಿದಂತೆ ಒಟ್ಟು 8000 ಗಣ್ಯರು ಉಪಸ್ಥಿತರಿರಲಿದ್ದಾರೆ. ಇನ್ನು ಗಣ್ಯರಲ್ಲಿ ವಿವಿಧ ವೃತ್ತಿಪರರು, ಸಾಂಸ್ಕೃತಿಕ ಕಲಾವಿದರು ಸೇರಿದ್ದಾರೆ. ಇನ್ನು ನಾಳೆ ಸಂಜೆ 7:31ರ ಹೊತ್ತಿಗೆ ನರೇಂದ್ರ ಮೋದಿ ರಾಷ್ಟ್ರಪತಿ ಭವನದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ.

7 ವಿದೇಶಿ ನಾಯಕರ ಉಪಸ್ಥಿತಿ

ನಾಳೆ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾರತದ ಏಳು ನೆರೆಯ ರಾಷ್ಟ್ರಗಳ ನಾಯಕರು ಭಾಗಿಯಾಗಲಿದ್ದಾರೆ. ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ, ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ಮುಯಿಝು, ಸೆಶೆಲ್ಸ್‌ನ ಉಪಾಧ್ಯಕ್ಷ ಅಹ್ಮದ್ ಅಫೀಫ್; ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ; ಮಾರಿಷಸ್‌ನ ಪ್ರಧಾನ ಮಂತ್ರಿ, ಪ್ರವಿಂದ್ ಕುಮಾರ್ ಜುಗ್ನೌತ್; ನೇಪಾಳದ ಪ್ರಧಾನಿ, ಪುಷ್ಪ ಕಮಲ್ ದಹಲ್ ‘ಪ್ರಚಂಡ’ ಮತ್ತು ಭೂತಾನ್ ಪ್ರಧಾನಿ, ತ್ಶೆರಿಂಗ್ ಟೊಬ್ಗೇ ಉಪಸ್ಥಿತರಿರಲಿದ್ದಾರೆ.

ದೆಹಲಿಗೆ ಬಂದಿಳಿದ ಶೇಖ್‌ ಹಸೀನಾ

ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಾಂಗ್ಲಾದೇಶ ಪ್ರಧಾನಿ ಶೇಖ್‌ ಹಸೀನಾ ಅಬಿನಂದನೆ ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಅವರನ್ನು ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಹೀಗಾಗಿ ಅವರು ಇಂದು ಬೆಳಗ್ಗೆ 11 ಗಂಟೆಗೆ ಬಾಂಗ್ಲಾದಿಂದ ದೆಹಲಿಗೆ ಆಗಮಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿದ ನಂತರ ಜೂನ್ 10 ರಂದು ವಾಪಾಸಾಗಲಿದ್ದಾರೆ.

ನರೇಂದ್ರ ಮೋದಿ ಅವರು ಇಂದು ರಾಷ್ಟ್ರಪತಿ ಭವನದಲ್ಲಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಎನ್‌ಡಿಎ ನಾಯಕನಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರು. ಈ ವೇಳೆ ಎನ್‌ಡಿಎ ಮಿತ್ರಪಕ್ಷಗಳ ನಾಯಕರು ಸಹ ಮೋದಿಗೆ ಸಾಥ್‌ ನೀಡಿದ್ದರು. ಇನ್ನು ನೆರೆಯ ರಾಷ್ಟ್ರಗಳ ಜೊತೆಗಿನ ಬಾಂದವ್ಯ ಹೆಚ್ಚಿಸುವ ನಿಟ್ಟಿನಲ್ಲಿ ಭಾರತದ ನೈಬರ್‌ಹುಡ್ ಫಸ್ಟ್ ನೀತಿಯ ಭಾಗವಾಗಿ ಈ ನಾಯಕರನ್ನು ಆಹ್ವಾನಿಸಿದೆ. ಮಾಲ್ಢೀವ್ಸ್‌ ಅಧ್ಯಕ್ಷ ಮುಯಿಝು ಭಾರತಕ್ಕೆ ಬಂದರೆ, ಎರಡು ಸಾಂಪ್ರದಾಯಿಕ ಪಾಲುದಾರರ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಲಿದೆ.

ಇದನ್ನೂ ಓದಿ:Rahul Gandhi: ಷೇರುಪೇಟೆಯಲ್ಲಿ ಭಾರಿ ಹಗರಣವಾಗಿದೆ ಎಂದಿದ್ದ ರಾಹುಲ್ ಗಾಂಧಿಗೆ ಐದೇ ದಿನದಲ್ಲಿ 25 ಲಕ್ಷ ರೂ. ಲಾಭ!

Exit mobile version