Site icon Vistara News

Narendra Modi: ಮೋದಿಯನ್ನು ಸಲ್ಮಾನ್‌ ಖಾನ್‌ಗೆ ಹೋಲಿಸಿದ ಪ್ರಿಯಾಂಕಾ ವಾದ್ರಾ!

Priyanka Vadra

BJP will not go beyond 180 seats if there is no tampering with EVMs in polls, says Priyanka Vadra

ಭೋಪಾಲ್‌: ಮಧ್ಯಪ್ರದೇಶ, ರಾಜಸ್ಥಾನ ಸೇರಿ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ (Assembly Elections 2023) ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಮೇಲಾಟ, ಟೀಕೆ, ಆರೋಪ, ಪ್ರತ್ಯಾರೋಪಗಳು ಜೋರಾಗಿವೆ. ಇದಕ್ಕೆ ನಿದರ್ಶನ ಎಂಬಂತೆ, ಮಧ್ಯಪ್ರದೇಶದಲ್ಲಿ ನಡೆದ ಚುನಾವಣೆ ರ‍್ಯಾಲಿ ವೇಳೆ ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ (Priyanka Vadra) ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, “ನರೇಂದ್ರ ಮೋದಿ ಅವರು ತೇರೆ ನಾಮ್‌ (Tere Naam) ಸಿನಿಮಾದ ಸಲ್ಮಾನ್‌ ಖಾನ್‌ ಇದ್ದಂತೆ” ಎಂಬುದಾಗಿ ಟೀಕಿಸಿದ್ದಾರೆ.

“ಪ್ರಧಾನಿ ನರೇಂದ್ರ ಮೋದಿ ಅವರು ಒಂದಷ್ಟು ಕಾಯಂ ನೋವುಗಳನ್ನು ಹೊಂದಿದ್ದಾರೆ. ತಮ್ಮ ಮನಸ್ಸಿನ ನೋವನ್ನು ಅಳುವಿನ ಮೂಲಕ ಜನರ ಎದುರು ಇಡುತ್ತಾರೆ. ಕೆಲ ತಿಂಗಳ ಹಿಂದೆ ಕರ್ನಾಟಕಕ್ಕೆ ಹೋಗಿದ್ದ ನರೇಂದ್ರ ಮೋದಿ ಅವರು, ತಾವು ತಿಂದ ಬೈಗುಳಗಳ ಪಟ್ಟಿಯನ್ನು ಜನರ ಮುಂದೆ ಇಟ್ಟಿದ್ದರು. ಮೋದಿ ಅವರು ತೇರೆ ನಾಮ್‌ ಸಿನಿಮಾದ ಸಲ್ಮಾನ್‌ ಖಾನ್‌ ಇದ್ದಂತೆ. ಅವರು ಯಾವಾಗಲೂ ಅಳುತ್ತಿರುತ್ತಾರೆ. ಹಾಗಾಗಿ ನರೇಂದ್ರ ಮೋದಿ ಅವರು ಕೂಡ ತೇರೆ ನಾಮ್‌ ಸಿನಿಮಾ ರೀತಿ ಮೇರೆ ನಾಮ್‌ (Mere Naam) ಎಂಬ ಸಿನಿಮಾ ಮಾಡಬೇಕು” ಎಂದು ಟೀಕಿಸಿದ್ದಾರೆ. ದಾಟಿಯಾ ಜಿಲ್ಲೆಯಲ್ಲಿ ನಡೆದ ರ‍್ಯಾಲಿಯಲ್ಲಿ ಪ್ರಿಯಾಂಕಾ ವಾದ್ರಾ ಈ ರೀತಿ ವಾಗ್ದಾಳಿ ನಡೆಸಿದ್ದಾರೆ.

“ನರೇಂದ್ರ ಮೋದಿ ಅವರು ದ್ರೋಹಿಗಳು ಹಾಗೂ ವಂಚಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಕಾರ್ಯಕರ್ತರಿಗೆ ನೋವುಂಟು ಮಾಡಿದ್ದಾರೆ. ಅಷ್ಟೇ ಅಲ್ಲ, ಅವರ ಸರ್ಕಾರವು ಉದ್ಯಮಿಗಳ ಪರವಾಗಿ ಕೆಲಸ ಮಾಡುತ್ತಿದೆ. ಅದಾನಿ ಅವರ ಸಾಲವನ್ನು ಮೋದಿ ಮನ್ನಾ ಮಾಡಿದ್ದಾರೆ. ಸಾವಿರಾರು ಕೋಟಿ ರೂಪಾಯಿ ಮೌಲ್ಯದ ದೇಶದ ಆಸ್ತಿಯನ್ನು ಅವರಿಗೆ ನೀಡಿದ್ದಾರೆ” ಎಂದು ಆರೋಪಿಸಿದರು. ಮಧ್ಯಪ್ರದೇಶದಲ್ಲಿ ನವೆಂಬರ್‌ 17ರಂದು ವಿಧಾನಸಭೆ ಚುನಾವಣೆ ನಡೆಯಲಿದೆ.

ಇದನ್ನೂ ಓದಿ: Shehla Rashid: ಮೋದಿ ನಿಸ್ವಾರ್ಥಿ, ದೇಶಕ್ಕಾಗಿ ಶ್ರಮ; ಜೆಎನ್‌ಯು ಮಾಜಿ ವಿದ್ಯಾರ್ಥಿ ಶೆಹ್ಲಾ ಬಣ್ಣನೆ

ಮೋದಿ ವಿರುದ್ಧ ಹೇಳಿಕೆ ನೀಡಿದ್ದಕ್ಕೆ ನೋಟಿಸ್‌

ನರೇಂದ್ರ ಮೋದಿ ವಿರುದ್ಧ ಸತ್ಯಕ್ಕೆ ದೂರವಾದ ಮತ್ತು ದೃಢೀಕೃತವಲ್ಲದ ಹೇಳಿಕೆಯನ್ನು ನೀಡಿದ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಕೇಂದ್ರ ಚುನಾವಣಾ ಆಯೋಗವು ಕಾರಣ ಕೇಳಿ ನೋಟಿಸ್ (Show cause Notice) ಜಾರಿ ಮಾಡಿದೆ. ನರೇಂದ್ರ ಮೋದಿ ಸರ್ಕಾರವು ಸಾರ್ವಜನಿಕ ವಲಯದ ಉದ್ಯಮಗಳನ್ನು (ಪಿಎಸ್‌ಯು) ಖಾಸಗೀಕರಣಗೊಳಿಸಿದೆ ಎಂದು ಪ್ರಿಯಾಂಕಾ ವಾದ್ರಾ ಹೇಳಿದ್ದರು. ಈ ಸಂಬಂಧ ಭಾರತೀಯ ಜನತಾ ಪಾರ್ಟಿ ನಾಯಕರಾದ ಹರ್ದೀಪ್ ಸಿಂಗ್ ಪುರಿ ಮತ್ತು ಅನಿಲ್ ಬಲುನಿ, ಓಂ ಪಾಠಕ್ ಅವರು ಚುನಾಣಾ ಆಯೋಗಕ್ಕೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಆಯೋಗವು ಪ್ರಿಯಾಂಕಾ ಅವರಿಗೆ ನೋಟಿಸ್ ಜಾರಿ ಮಾಡಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version