Site icon Vistara News

Narendra Modi: ಪ್ರಮಾಣವಚನಕ್ಕೂ ಮೊದಲು ಅಡ್ವಾಣಿಯ ಆಶೀರ್ವಾದ ಪಡೆದ ನರೇಂದ್ರ ಮೋದಿ!

Narendra Modi

Narendra Modi Meets LK Advani Ahead Of Taking Oath As Prime Minister

ನವದೆಹಲಿ: ನರೇಂದ್ರ ಮೋದಿ (Narendra Modi) ಅವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲು ಸಿದ್ಧರಾಗಿದ್ದಾರೆ. ಜೂನ್‌ 9ರಂದು ಸಂಜೆ 6 ಗಂಟೆಗೆ ಮೋದಿ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದಕ್ಕೂ ಮೊದಲು, ತಮ್ಮ ರಾಜಕೀಯ ಗುರು, ಬಿಜೆಪಿ ಹಿರಿಯ ನಾಯಕ ಎಲ್‌.ಕೆ.ಅಡ್ವಾಣಿ (LK Advani) ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ದೆಹಲಿಯಲ್ಲಿರುವ ಎಲ್‌.ಕೆ.ಅಡ್ವಾಣಿ ಅವರ ನಿವಾಸಕ್ಕೆ ತೆರಳಿದ ಮೋದಿ ಅವರು ಅಡ್ವಾಣಿ ಅವರ ಜತೆ ಮಾತುಕತೆ ನಡೆಸಿ, ಆಶೀರ್ವಾದ ಪಡೆದರು.

ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಮುನ್ನವೇ ರಾಜಕೀಯ ಗುರುವಿನ ಆಶೀರ್ವಾದ ಪಡೆದಿದ್ದಾರೆ. 2014, 2019ರ ಲೋಕಸಭೆ ಚುನಾವಣೆಯಲ್ಲಿ ಪ್ರಚಂಡ ಗೆಲುವು ಸಾಧಿಸಿದ ಬಳಿಕವೂ ಮೋದಿ ಅವರು ಅಡ್ವಾಣಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದರು. ಅಡ್ವಾಣಿ ಅವರ ಭೇಟಿ ಬಳಿಕ ನರೇಂದ್ರ ಮೋದಿ ಅವರು ರಾಷ್ಟ್ರಪತಿ ಭವನಕ್ಕೆ ತೆರಳಿ, ಸರ್ಕಾರ ರಚಿಸುವ ಕುರಿತು ಹಕ್ಕು ಮಂಡನೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಕೋವಿಂದ್‌ ಅವರನ್ನೂ ಭೇಟಿಯಾದ ಮೋದಿ

ಮಾಜಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರನ್ನು ಕೂಡ ನರೇಂದ್ರ ಮೋದಿ ಅವರು ಭೇಟಿಯಾದರು. ರಾಮನಾಥ್‌ ಕೋವಿಂದ್‌ ಹಾಗೂ ಅವರ ಪತ್ನಿಯನ್ನು ಭೇಟಿಯಾದ ಮೋದಿ ಹಲವು ವಿಷಯಗಳ ಕುರಿತು ಚರ್ಚಿಸಿದರು ಎಂದು ತಿಳಿದುಬಂದಿದೆ.

ನರೇಂದ್ರ ಮೋದಿ ಅವರು ಶಾಸಕಾಂಗ ಪಕ್ಷದ ನಾಯಕರಾಗಿ ಶುಕ್ರವಾರ ಆಯ್ಕೆಯಾಗಿದ್ದಾರೆ. ಇದಾದ ಬಳಿಕ ಮಾತನಾಡಿದ ಅವರು, “ಮುಂದಿನ ಹತ್ತು ವರ್ಷಗಳ ಕಾಲ ನಾವೇ ಆಡಳಿತದಲ್ಲಿದ್ದು, ಅತ್ಯುತ್ತಮ ಆಡಳಿತ ನೀಡಲಿದ್ದೇವೆ. ನಾನು ಇದನ್ನು ಹೆಚ್ಚಿನ ಜವಾಬ್ದಾರಿಯಿಂದ ಹೇಳುತ್ತಿದ್ದೇನೆ” ಎಂದು ಹೇಳಿದರು.

“ಭಾರತದ ಜನತೆಯ ಸ್ಥಳೀಯ ಆಸೆ ಆಕಾಂಕ್ಷೆಗಳು, ರಾಷ್ಟ್ರೀಯ ಆಸೆ ಆಕಾಂಕ್ಷೆಗಳನ್ನು ಜತೆಗೆ ಜೋಡಿಸಿ ನಾವು ಈಡೇರಿಸಬೇಕಾಗಿದೆ. ಈ ಚುನಾವಣೆಯಲ್ಲಿ ದಕ್ಷಿಣ ಭಾರತದಲ್ಲಿ ಎನ್‌ಡಿಎ ನೂತನ ರಾಜನೀತಿಯೊಂದನ್ನು ತೆರೆದಿದೆ. ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಅವರ ಸರಕಾರವಿದೆ. ಆದರೆ ಅಲ್ಲಿನ ಜನರು ಎನ್‌ಡಿಎಯನ್ನು ಅಪ್ಪಿಕೊಂಡಿದ್ದಾರೆ. ತಮಿಳುನಾಡು ತಂಡಕ್ಕೆ ನಾನು ಧನ್ಯವಾದ ಹೇಳುತ್ತೇನೆ. ಅಲ್ಲಿನ ಜನರು ನಮ್ಮ ಧ್ವಜವನ್ನು ಎತ್ತಿ ಹಿಡಿಯಲು ಹೋರಾಡಿದರು. ಅಲ್ಲಿ ನಮ್ಮ ಮತಪ್ರಮಾಣ ಹೆಚ್ಚಿದೆ. ಅಲ್ಲಿ ನಾಳೆ ಭವಿಷ್ಯದಲ್ಲಿ ಏನು ಬರೆದಿದೆ ಎಂಬುದನ್ನು ನಾನು ಈಗಲೇ ಹೇಳಬಲ್ಲೆ. ಕೇರಳದಲ್ಲಿ ನಮ್ಮ ಎಷ್ಟೋ ಕಾರ್ಯಕರ್ತರು ಬಲಿದಾನ ಮಾಡಿದ್ದಾರೆ. ಅಲ್ಲಿಂದ ಮೊದಲ ಬಾರಿಗೆ ಒಬ್ಬ ನಮ್ಮ ಸಂಸದರು ಆರಿಸಿ ಬಂದಿದ್ದಾರೆ. ಅರುಣಾಚಲ ಪ್ರದೇಶ, ಸಿಕ್ಕಿಂನಲ್ಲಿ ನಾವು ಸರಕಾರ ರಚಿಸಿದ್ದೇವೆ” ಎಂದು ಅವರು ತಿಳಿಸಿದರು.

ಆಂಧ್ರಪ್ರದೇಶದಿಂದ 16 ಸಂಸದರನ್ನು ತಂದ ಚಂದ್ರಬಾಬು ನಾಯ್ಡು ಅವರನ್ನು ಮೋದಿ ಶ್ಲಾಘಿಸಿದರು. ಪವನ್‌ ಕಲ್ಯಾಣ್‌ ಅವರು ʼಪವನʼ ಅಲ್ಲ ʼಬಿರುಗಾಳಿʼ ಎಂದು ಅವರು ಚಟಾಕಿ ಹಾರಿಸಿದರು. ಇವಿಎಂಗಳನ್ನು ವಿರೋಧಿಸಿದ ಇಂಡಿ ಒಕ್ಕೂಟ ಪ್ರಗತಿ ವಿರೋಧಿ, ತಂತ್ರಜ್ಞಾನದ ವಿರೋಧಿ ಎಂದು ಅವರು ನುಡಿದರು. ಪ್ರತಿಪಕ್ಷಗಳು ಇವಿಎಂ ಅನ್ನು ಟೀಕಿಸುತ್ತಿದ್ದವು. ಈಗ ಅದರ ಬಗ್ಗೆ ಮೌನವಾಗಿವೆ. ಹೀಗಾಗಿ ಇವಿಎಂಗಳು ಇವೆಯೋ ಇಲ್ಲವೋ ಎಂಬುದೇ ನನಗೆ ಗೊತ್ತಾಗುತ್ತಿಲ್ಲ ಎಂದೂ ಅವರು ಚಟಾಕಿ ಸಿಡಿಸಿದರು. ಭಾರತದ ಪ್ರಜಾಪ್ರಭುತ್ವದ ಬಗ್ಗೆ, ಚುನಾವಣೆ ಪ್ರಕ್ರಿಯೆಯ ಬಗ್ಗೆ ಅವಿಶ್ವಾಸ ಮೂಡಿಸುವುದೇ ಅವರ ಕೆಲಸವಾಗಿದೆ ಎಂದರು.

ಇದನ್ನೂ ಓದಿ: Narendra Modi: ಅಕೌಂಟ್‌ಗೆ ಲಕ್ಷ ರೂ. ಹಾಕ್ತೇವೆ ಎಂದರೂ ಜನ ಕಾಂಗ್ರೆಸ್‌ಗೆ ಮತ ಹಾಕಲಿಲ್ಲ: ಮೋದಿ ವ್ಯಂಗ್ಯ

Exit mobile version