Site icon Vistara News

Narendra Modi: ಪಾದರಕ್ಷೆ ಕಳಚಿಟ್ಟು ವಿಮಾನದಲ್ಲೇ ರಾಮನ ಸೂರ್ಯ ತಿಲಕ ವೀಕ್ಷಿಸಿದ ಪ್ರಧಾನಿ ಮೋದಿ

Narendra Modi

Narendra Modi

ನವದೆಹಲಿ: ರಾಮ ನವಮಿ(Ram Navami)ಯಾದ ಇಂದು (ಏಪ್ರಿಲ್‌ 17) ದೇಶ ಅಪೂರ್ಣ ಘಳಿಗೆಗೆ ಸಾಕ್ಷಿಯಾಯಿತು. ಅಯೋಧ್ಯೆ ರಾಮ ಮಂದಿರ(Ayodhya Ram Mandir)ದ ಬಾಲಕ ರಾಮನ ಹಣೆಯ ಮೇಲೆ ಸೂರ್ಯ ತಿಲಕ ಮೂಡಿತು. ಕೋಟ್ಯಾಂತರ ಮಂದಿ ಈ ವಿಸ್ಮಯ ದೃಶ್ಯವನ್ನು ಕಣ್ತುಂಬಿಕೊಂಡರು. ಇತ್ತ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ವಿಮಾನದಲ್ಲಿಯೇ ಈ ದೃಶ್ಯವನ್ನು ವೀಕ್ಷಿಸಿದರು. ಮೋದಿ ಅವರು ತಮ್ಮ ಪಾದರಕ್ಷೆಯನ್ನು ಕಳಚಿಟ್ಟು ಸೂರ್ಯ ತಿಲಕವನ್ನು ಟ್ಯಾಬ್‌ನಲ್ಲಿ ವೀಕ್ಷಿಸಿದ್ದು ಗಮನ ಸೆಳೆಯಿತು.

ಸೂರ್ಯ ತಿಲಕ ರಾಮನ ಹಣೆಯ ಮೇಲೆ ಮೂಡುತ್ತಿದ್ದಂತೆ ಕೈಮುಗಿದು ನಮಸ್ಕರಿಸಿದ ಫೋಟೋವನ್ನು ಮೋದಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ʼʼಅಸ್ಸಾಂನ ನಲ್ಬರಿಯಲ್ಲಿ ನಡೆದ ಚುನಾವಣಾ ರ‍್ಯಾಲಿಯ ನಂತರ ವಿಮಾನದಲ್ಲಿ ಪ್ರಯಾಣಿಸುವಾಗ ರಾಮ್ ಲಲ್ಲಾ ವಿಗ್ರಹದ ಮೇಲೆ ಮೂಡಿದ ಸೂರ್ಯ ತಿಲಕವನ್ನು ವೀಕ್ಷಿಸಿದೆ. ಕೋಟಿಗಟ್ಟಲೆ ಭಾರತೀಯರಂತೆ ನನಗೂ ಇದು ಅತ್ಯಂತ ಭಾವನಾತ್ಮಕ ಕ್ಷಣ. ಅಯೋಧ್ಯೆಯ ರಾಮ ನವಮಿ ಐತಿಹಾಸಿಕ ಆಚರಣೆ. ಈ ಸೂರ್ಯ ತಿಲಕ ನಮ್ಮ  ಜೀವನಕ್ಕೆ ಶಕ್ತಿಯನ್ನು ತರಲಿ ಮತ್ತು ನಮ್ಮ ರಾಷ್ಟ್ರವು ವೈಭವದ ಹೊಸ ಎತ್ತರಗಳನ್ನು ಏರಲು ಪ್ರೇರೇಪಿಸಲಿʼʼ ಎಂದು ಮೋದಿ ಬರೆದುಕೊಂಡಿದ್ದಾರೆ.

ಮೋದಿ ಅವರು ಪಾದರಕ್ಷೆ ಕಳಚಿಟ್ಟು, ರಾಮನಿಗೆ ನಮಸ್ಕರಿಸುತ್ತಿರುವ ವಿಡಿಯೊ ಸದ್ಯ ವೈರಲ್‌ ಆಗಿದೆ. ಇದಕ್ಕೂ ಮೊದಲು ನಲ್ಬಾರಿಯಲ್ಲಿ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ ಜೈ ಶ್ರೀರಾಮ್‌ ಘೋಷಣೆ ಕೂಗಿದರು. “ಇಂದು ರಾಮನವಮಿಯ ಐತಿಹಾಸಿಕ ಸಂದರ್ಭವೂ ಆಗಿದೆ. 500 ವರ್ಷಗಳ ಕಾಯುವಿಕೆಯ ನಂತರ, ಭಗವಾನ್ ರಾಮನು ಅಂತಿಮವಾಗಿ ತನ್ನ ಭವ್ಯ ದೇವಾಲಯದಲ್ಲಿ ಕುಳಿತಿದ್ದಾನೆ ಮತ್ತು ಭಗವಾನ್ ರಾಮನಿಗೆ ‘ಸೂರ್ಯ ತಿಲಕ್’ ಹಚ್ಚುವ ಮೂಲಕ ಪವಿತ್ರ ನಗರವಾದ ಅಯೋಧ್ಯೆಯ ರಾಮ ದೇವಾಲಯದಲ್ಲಿ ರಾಮನ ಜನ್ಮ ದಿನವನ್ನು ಆಚರಿಸಲಾಗುತ್ತಿದೆ” ಎಂದು ಅವರು ಹೇಳಿದ್ದರು.

ರಾಮ ನವಮಿ ಸಂದೇಶ ನೀಡಿದ ಮೋದಿ

ಬುಧವಾರ ಮೋದಿ ಅವರು ರಾಮ ನವಮಿ ಸಂದೇಶ ನೀಡಿದ್ದಾರೆ. “ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆಯ ನಂತರದ ಮೊದಲ ರಾಮ ನವಮಿ ಒಂದು ಪೀಳಿಗೆಯ ಮೈಲಿಗಲ್ಲು. ಶತಮಾನಗಳ ಭಕ್ತಿಯನ್ನು ಭರವಸೆ ಮತ್ತು ಪ್ರಗತಿಯ ಹೊಸ ಯುಗದೊಂದಿಗೆ ಹೆಣೆಯಲಾಗುತ್ತದೆ. ಇದು ಕೋಟ್ಯಂತರ ಭಾರತೀಯರು ಕಾಯುತ್ತಿದ್ದ ದಿನ” ಎಂದು ಮೋದಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ʼʼಅಯೋಧ್ಯೆಯ ರಾಮ ಮಂದಿರ ಹಲವು ವರ್ಷಗಳಿಂದ ದೇಶದ ಜನರು ಮಾಡಿದ ಕಠಿಣ ಪರಿಶ್ರಮ ಮತ್ತು ತ್ಯಾಗದ ಫಲ. ಇದು ಅಸಂಖ್ಯಾತ ರಾಮನ ಭಕ್ತರು ಮತ್ತು ರಾಮ ಮಂದಿರ ನಿರ್ಮಾಣಕ್ಕಾಗಿ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟ ಸಂತರನ್ನು ನೆನಪಿಸಿಕೊಳ್ಳುವ ಮತ್ತು ಗೌರವ ಸಲ್ಲಿಸುವ ಸಂದರ್ಭವೂ ಆಗಿದೆʼʼ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Ayodhya Ram Mandir: ಜನ್ಮದಿನದ ಸಂಭ್ರಮಕ್ಕೆ ಕಾತರ; ರಾಮಲಲ್ಲಾನಿಗೆ ಸೂರ್ಯ ಕಿರಣ ಅಭಿಷೇಕ ಪ್ರಯೋಗ ಸಕ್ಸೆಸ್!

“ಪ್ರಭು ಶ್ರೀ ರಾಮನ ಆಶೀರ್ವಾದವು ಯಾವಾಗಲೂ ನಮ್ಮ ಮೇಲೆ ಇರಲಿ ಮತ್ತು ನೀತಿ ಮತ್ತು ಶಾಂತಿಯತ್ತ ನಡೆಯುವಂತೆ ರಾಮ ನಮಗೆ ಮಾರ್ಗದರ್ಶನ ನೀಡಲಿ. ನಮ್ಮ ಜೀವನವನ್ನು ಬುದ್ಧಿವಂತಿಕೆ ಮತ್ತು ಧೈರ್ಯದಿಂದ ಬೆಳಗಿಸಲಿ” ಎಂದು ಮೋದಿ ಬೇಡಿಕೊಂಡಿದ್ದಾರೆ. 

Exit mobile version