Site icon Vistara News

Narendra Modi: ಮೂರನೇ ಬಾರಿ ಪ್ರಧಾನಿ ಪಟ್ಟಕ್ಕೇರಿದ ಬಳಿಕ ಇಂದು ಸ್ವಕ್ಷೇತ್ರ ವಾರಾಣಸಿಗೆ ಮೋದಿ ಮೊದಲ ಭೇಟಿ

Narendra Modi

Narendra Modi

ಲಕ್ನೋ: ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಇಂದು (ಜೂನ್‌ 18) ಉತ್ತರ ಪ್ರದೇಶದ ತಮ್ಮ ಕ್ಷೇತ್ರ ವಾರಣಾಸಿ (Varanasi)ಗೆ ಭೇಟಿ ನೀಡಲಿದ್ದಾರೆ. ಸತತ ಮೂರು ಬಾರಿ ಇಲ್ಲಿಂದ ಸ್ಪರ್ಧಿಸಿ ಮೋದಿ ಅವರು ಹ್ಯಾಟ್ರಿಕ್‌ ಜಯ ಗಳಿಸಿದ್ದಾರೆ. ಪ್ರಧಾನಿ ಪಟ್ಟಕ್ಕೇರಿದ ಬಳಿಕ ಅವರ ಮೊದಲ ಸ್ವಕ್ಷೇತ್ರ ಭೇಟಿ ಇದು ಎನ್ನುವುದು ವಿಶೇಷ. ಈ ಸಂದರ್ಭದಲ್ಲಿ ಅವರು  ಪ್ರಧಾನ್‌ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆ (PM Kisan Samman Nidhi Yojana)ಯ 17ನೇ ಕಂತನ್ನು ಬಿಡುಗಡೆ ಮಾಡಲಿದ್ದಾರೆ. ಈ ಮೂಲಕ ಸುಮಾರು 9.26 ಕೋಟಿ ರೈತರ ಖಾತೆಗಳಿಗೆ 20,000 ಕೋಟಿ ರೂ. ಜಮೆ ಆಗಲಿದೆ.

ಮಾತ್ರವಲ್ಲ ಕೃಷಿ ಸಖಿಗಳಾಗಿ ತರಬೇತಿ ಪಡೆದ 30,000ಕ್ಕೂ ಹೆಚ್ಚು ಸ್ವಸಹಾಯ ಗುಂಪುಗಳಿಗೆ ಮೋದಿ ಪ್ರಮಾಣಪತ್ರಗಳನ್ನೂ ಬಿಡುಗಡೆ ಮಾಡಲಿದ್ದಾರೆ. ಜತೆಗೆ ತಮ್ಮ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯಪಾಲ ಆನಂದಿಬೆನ್ ಪಟೇಲ್, ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಹಲವು ರಾಜ್ಯ ಸಚಿವರು ಭಾಗವಹಿಸಲಿದ್ದಾರೆ.

ವಾರಣಾಸಿ ಪ್ರವಾಸದ ಸಂಪೂರ್ಣ ವಿವರ

ಮೋದಿ ಅವರು ಸುಮಾರು 5 ಗಂಟೆಗಳ ಕಾಲ ವಾರಣಾಸಿಯಲ್ಲಿ ಇರಲಿದ್ದಾರೆ. ಸಂಜೆ 4 ಗಂಟೆ ಸುಮಾರಿಗೆ ಮೋದಿ ಬಬತ್ಪುರದ ಲಾಲ್ ಬಹದ್ದೂರ್ ಶಾಸ್ತ್ರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಸಂಜೆ 5 ಗಂಟೆ ಸುಮಾರಿಗೆ ವಾರಣಾಸಿಯಲ್ಲಿ ಆಯೋಜಿಸಿರುವ ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆ ಸಮ್ಮಾನ್ ನಿಧಿಯ ಕಂತನ್ನು ಮೋದಿ ಬಿಡುಗಡೆ ಮಾಡಲಿದ್ದು, ವಾರಣಾಸಿಯಲ್ಲಿ 2,76,665 ಫಲಾನುಭವಿಗಳಿದ್ದಾರೆ. ಜತೆಗೆ 21 ರೈತರನ್ನು ಭೇಟಿ ಮಾಡಿ ಅವರ ಉತ್ಪನ್ನಗಳನ್ನು ಪರಿಶೀಲಿಸಲಿದ್ದಾರೆ.

ಸಂಜೆ 7 ಗಂಟೆ ಸುಮಾರಿಗೆ ವಾರಣಾಸಿಯ ದಶಾಶ್ವಮೇಧ ಘಾಟ್‌ನಲ್ಲಿ ನಡೆಯಲಿರುವ ಗಂಗಾ ಆರತಿಯನ್ನು ವೀಕ್ಷಿಸಲಿರುವ ಮೋದಿ, ನಂತರ ರಾತ್ರಿ 8 ಗಂಟೆಗೆ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಸುಮಾರು 25 ನಿಮಿಷಗಳ ಕಾಲ ದೇವಾಲಯದಲ್ಲಿ ಇರಲಿದ್ದಾರೆ ಎಂದು ಕಾಶಿ ವಿಶ್ವನಾಥ ದೇವಾಲಯದ ಸಿಇಒ ವಿಶ್ವ ಭೂಷಣ್ ಮಿಶ್ರಾ ತಿಳಿಸಿದ್ದಾರೆ. ಈ ಲೋಕಸಭಾ ಚುನಾವಣೆಯಲ್ಲಿ ಮೋದಿ ಅವರು ವಾರಣಾಸಿ ಕ್ಷೇತ್ರದಿಂದ ಸುಮಾರು 1,52,513 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಇದನ್ನೂ ಓದಿ: Narendra Modi: ಅಮೆರಿಕ ಭದ್ರತಾ ಸಲಹೆಗಾರ-ನರೇಂದ್ರ ಮೋದಿ ಭೇಟಿ; ಯಾವೆಲ್ಲ ವಿಷಯ ಚರ್ಚೆ?

ಏನಿದು ಪಿಎಂ-ಕಿಸಾನ್ ಸಮ್ಮಾನ್‌ ಯೋಜನೆ?

ದೇಶದ ಕೃಷಿಕರಿಗೆ ನೆರವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರ 2019ರಲ್ಲಿ ಜಾರಿಗೆ ತಂದ ಪ್ರಧಾನ್‌ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯ ಹಣವನ್ನು ನಾಲ್ಕು ತಿಂಗಳಿಗೊಮ್ಮೆ 2,000 ರೂ.ಗಳಂತೆ ವರ್ಷಕ್ಕೆ 3 ಬಾರಿ ಪಾವತಿಸಲಾಗುತ್ತದೆ. ಏಪ್ರಿಲ್-ಜುಲೈ, ಆಗಸ್ಟ್-ನವೆಂಬರ್ ಮತ್ತು ಡಿಸೆಂಬರ್-ಮಾರ್ಚ್ ಎಂಬ ಮೂರು ಕಂತುಗಳಲ್ಲಿ ಹಣವನ್ನು ಒದಗಿಸಲಾಗುತ್ತದೆ. ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ದೇಶದ ಸಣ್ಣ ಮತ್ತು ಅತಿ ಸಣ್ಣ ಕೃಷಿಕರಿಗೆ ನೆರವಾಗುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

Exit mobile version