Site icon Vistara News

Modi In Ayodhya | ಅಯೋಧ್ಯೆ ದೀಪಗಳಿಂದ ದಿವ್ಯ, ಭಾವನೆಗಳಿಂದ ಭವ್ಯ, ರಾಮನಿಗೆ ನಾನು ಧನ್ಯ ಎಂದ ಮೋದಿ

Modi Arati Final

ಅಯೋಧ್ಯೆ: ದೇಶದ ಗಮನ ಸೆಳೆದಿರುವ ಅಯೋಧ್ಯೆಯ ದೀಪೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ (Modi In Ayodhya) ಚಾಲನೆ ನೀಡಿದ್ದಾರೆ. ಸರಯೂ ನದಿಯಲ್ಲಿ ಆರತಿ ಬೆಳಗಿದ ಅವರು, ಬಳಿಕ ದೀಪೋತ್ಸವಕ್ಕೆ ಚಾಲನೆ ನೀಡಿದರು. ಇದಾದ ಬಳಿಕ ಮಾತನಾಡಿದ ಅವರು, “ಅಯೋಧ್ಯೆಯು ದೀಪಗಳಿಂದ ದಿವ್ಯವಾಗಿದೆ” ಎಂದು ಹೇಳಿದರು.

“ದೀಪಗಳಿಂದ ದಿವ್ಯವಾಗಿದೆ, ಭಾವನೆಗಳಿಂದ ಭವ್ಯವಾಗಿದೆ. ಇಂದು ಅಯೋಧ್ಯೆ ನಗರವು ಭಾರತದ ಸಾಂಸ್ಕೃತಿಕ ಪುನರುಜ್ಜೀವನ ಹಾಗೂ ಸುವರ್ಣ ಅಧ್ಯಾಯದ ಪ್ರತಿಬಿಂಬವಾಗಿದೆ. ನಾವು ತ್ರೇತಾಯುಗದ ದರ್ಶನ ಮಾಡಿಲ್ಲ ನಿಜ. ಆದರೆ, ಶ್ರೀರಾಮನ ಆಶೀರ್ವಾದದಿಂದ ಅಮೃತ ಕಾಲದಲ್ಲಿ ಅಯೋಧ್ಯೆಯ ಸಿರಿವಂತಿಕೆಯನ್ನು ನೋಡುತ್ತಿದ್ದೇವೆ. ಹಾಗಾಗಿ, ಅಯೋಧ್ಯೆಯು ಅಮರವಾಗಿದೆ” ಎಂದು ತಿಳಿಸಿದರು.

ದೀಪ ಬೆಳಗುವ ಮೂಲಕ ದೀಪೋತ್ಸವಕ್ಕೆ ಪ್ರಧಾನಿ ಚಾಲನೆ. ಮೋದಿ ಅವರಿಗೆ ಯೋಗಿ ಆದಿತ್ಯನಾಥ್‌ ಸಾಥ್‌ ನೀಡಿದರು.

ರಾಮನಿಗೇ ಜಯ, ರಾವಣನಿಗೆ ಅಲ್ಲ

“ದೀಪಾವಳಿಯ ದೀಪವು ನಮಗೆ ಒಂದು ಧಾರ್ಮಿಕ ಸಂಕೇತವಾಗಿಲ್ಲ. ಇದು ದೇಶದ ಏಳಿಗೆ, ಮೌಲ್ಯಗಳ ಸಂಕೇತವಾಗಿದೆ. ಕಣ್ಣು ಹಾಯಿಸಿದ ಕಡೆಯೆಲ್ಲ ಜ್ಯೋತಿ ಕಾಣಿಸುತ್ತಿದೆ. ಇದು ಭಾರತದ ಮೂಲ ಮಂತ್ರವಾದ ಸತ್ಯಮೇಯ ಜಯತೆಯ ದ್ಯೋತಕವಾಗಿದೆ. ಗೆಲುವು ಯಾವಾಗಲೂ ಸತ್ಯದ ಪರವಾಗಿಯೇ ಇರುತ್ತದೆ. ಅದು ಎಂದಿಗೂ ಸುಳ್ಳಿನ ಪರವಾಗಿ ಇರುವುದಿಲ್ಲ. ಇದೇ ರಾಮನ ಸಂದೇಶವಾಗಿದೆ. ಹಾಗಾಗಿ, ಯಾವಾಗಲೂ ರಾಮನಿಗೇ ಗೆಲುವು ಸಿಗುತ್ತದೆಯೇ ಹೊರತು, ರಾವಣನಿಗೆ ಅಲ್ಲ” ಎಂದು ತಿಳಿಸಿದರು.

ಸರಯೂ ನದಿ ತೀರದಲ್ಲಿ ಆರತಿ ಬೆಳಗಿದ ಪ್ರಧಾನಿ ಮೋದಿ.

ದೀಪ ಬ್ರಹ್ಮನ ಸ್ವರೂಪ

“ದೀಪ, ಜ್ಯೋತಿಯು ಬ್ರಹ್ಮನ ಸ್ವರೂಪವಾಗಿದೆ. ಈ ಅಧ್ಯಾತ್ಮದ ಬೆಳಕು, ದೇಶದ ಸಂಸ್ಕೃತಿ, ಅಭಿವೃದ್ಧಿಯ ಜಗಜ್ಯೋತಿಯಾಗಿದೆ. ಇಲ್ಲಿರುವ ಲಕ್ಷಾಂತರ ದೀಪಗಳು ಏಳಿಗೆ ದ್ಯೋತಕವಾಗಿವೆ. ಅಷ್ಟಕ್ಕೂ, ಭಗವಾನ ರಾಮನು ಜಗತ್ತಿಗೇ ಬೆಳಕು ನೀಡುವ ಪ್ರಕಾಶಕನಾಗಿದ್ದಾನೆ” ಎಂದು ತಿಳಿಸಿದರು.

ರಾಮನ ಜನ್ಮಭೂಮಿಯಲ್ಲಿ ದೀಪಗಳ ಉತ್ಸವ.

ದೀಪದಿಂದಲೇ ಅಂಧಕಾರದ ಅಂತ್ಯ

“ದೀಪವು ಎಲ್ಲರ ಬದುಕನ್ನೂ ಬೆಳಗಲಿ. ನಾವು ದೀಪ ಹಚ್ಚುವುದನ್ನು ಬಿಟ್ಟಿಲ್ಲ, ವಿಶ್ವಾಸವನ್ನು ಕೈಚಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, ಕೊರೊನಾ ಸಮಯದಲ್ಲಿ ಪ್ರತಿಯೊಬ್ಬರೂ ದೀಪ ಬೆಳಗಿದ್ದರು. ದೇಶವು ಕೊರೊನಾ ವಿರುದ್ಧ ಹೇಗೆ ಹೋರಾಡಿತು ಎಂಬುದನ್ನು ಇಡೀ ಜಗತ್ತೇ ನೋಡಿದೆ. ಈಗಲೂ ಅಷ್ಟೇ ನಾವು, ಕರ್ತವ್ಯ, ಮೌಲ್ಯಗಳ ದೀಪಗಳನ್ನು ಬೆಳಗುವ ಮೂಲಕ ಏಳಿಗೆ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯೋಣ” ಎಂದು ಹೇಳಿದರು.

ರಾಮಕಥಾದ ದೃಶ್ಯ.

ಇದನ್ನೂ ಓದಿ | Modi In Ayodhya | ರಾಮನ ಆದರ್ಶ, ಸಂವಿಧಾನದ ಆಶಯ ಪಾಲನೆಯೇ ಗುರಿ, ಅಯೋಧ್ಯೆಯಲ್ಲಿ ಮೋದಿ ಮೋಡಿ

Exit mobile version