Site icon Vistara News

Narendra Modi: ಮುಂದಿನ 5 ವರ್ಷ ಬಡತನ ವಿರುದ್ಧದ ಹೋರಾಟಕ್ಕೆ ಮೀಸಲು; ರಾಜ್ಯಸಭೆಯಲ್ಲಿ ಮೋದಿ ಭರವಸೆ

Narendra Modi

Narendra Modi

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಬುಧವಾರ (ಜುಲೈ 3) ರಾಜ್ಯಸಭೆ (Rajya Sabha)ಯಲ್ಲಿ ರಾಷ್ಟ್ರಪತಿಯವರ ಭಾಷಣದ ಮೇಲಿನ ವಂದನಾ ನಿರ್ಣಯದ ವೇಳೆ ಮಾತನಾಡಿ, ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ”2024ರ ಲೋಕಸಭಾ ಚುನಾವಣೆಯ ಫಲಿತಾಂಶವು ಜನರು ಪ್ರಚಾರವನ್ನು ತಿರಸ್ಕರಿಸಿದ್ದಾರೆ ಮತ್ತು ಕಾರ್ಯಕ್ಷಮತೆಗಾಗಿ ಮತ ಚಲಾಯಿಸಿದ್ದಾರೆ ಎನ್ನುವುದನ್ನು ಸ್ಪಷ್ಟವಾಗಿ ತೋರಿಸಿದೆ. ಮುಂದಿನ 5 ವರ್ಷ ನಾವು ಬಡತನ ನಿರ್ಮೂಲನೆ ಮಾಡಲು ಹೋರಾಡುತ್ತೇವೆʼʼ ಎಂದು ಹೇಳಿದರು.

ʼʼನಾವು 10 ವರ್ಷಗಳಿಂದ ಸರ್ಕಾರ ನಡೆಸಿದ್ದೇವೆ. ಇನ್ನೂ 20 ವರ್ಷ ಇದು ಮುಂದುವರಿಯಲಿದೆ. ಭಾರತದ ಸಂವಿಧಾನದಿಂದಾಗಿ ಎನ್‌ಡಿಎ ಸರ್ಕಾರ ಅಧಿಕಾರದಲ್ಲಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದಿಂದಾಗಿ ನಾನು ಇಲ್ಲಿದ್ದೇನೆ” ಎಂದರು. ʼʼಎನ್‌ಡಿಎ ಮೂರನೇ ಅವಧಿಯಲ್ಲಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. ಕಳೆದ 10 ವರ್ಷಗಳಲ್ಲಿ ಭಾರತದ ಆರ್ಥಿಕತೆಯು ಹತ್ತರಿಂದ ಐದನೇ ಸ್ಥಾನಕ್ಕೆ ಏರಿದೆʼʼ ಎಂದು ಅವರು ಹೇಳಿದರು.

ಯಾರು ಅಧಿಕಾರದಲ್ಲಿದ್ದರೂ ದೇಶ ಬೆಳೆಯುತ್ತದೆ ಎಂಬ ಕಾಂಗ್ರೆಸ್ ಹೇಳಿಕೆಗೆ ಮೋದಿ ತಿರುಗೇಟು ನೀಡಿದರು. ಆಟೋ-ಪೈಲಟ್ ಮೋಡ್‌ನಲ್ಲಿ ಸರ್ಕಾರವನ್ನು ನಡೆಸಿದವರು ಮಾತ್ರ ಅಂತಹ ಹೇಳಿಕೆಗಳನ್ನು ನೀಡಬಹುದು ಎಂದು ಅವರು ಹೇಳಿದರು.

ಪ್ರಧಾನಿ ಮೋದಿ ಅವರ ಭಾಷಣದ ಮಧ್ಯೆ ಪ್ರತಿಪಕ್ಷದ ಸಂಸದರು ತಮ್ಮ ಸ್ಥಾನದಿಂದ ಎದ್ದುನಿಂತು ರಾಜ್ಯಸಭೆಯನ್ನು ಮುಂದೂಡುವಂತೆ ಆಗ್ರಹಿಸಿದವು. ಪ್ರಧಾನಿ ಭಾಷಣದ ವೇಳೆ ಮಧ್ಯಪ್ರವೇಶಿಸಲು ಸಭಾಪತಿ ಜಗದೀಪ್ ಧನ್ಕರ್ ನಿರಾಕರಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಪ್ರತಿಪಕ್ಷಗಳ ಸಂಸದರು ಸಭಾತ್ಯಾಗ ಮಾಡಿದರು. ಈ ಕರಿತು ವ್ಯಂಗ್ಯವಾಡಿದ ಮೋದಿ, ʼʼಪ್ರತಿಪಕ್ಷಗಳಿಗೆ ತಾವು ಎತ್ತಿದ ಪ್ರಶ್ನೆಗಳಿಗೆ ನಾವು ಹೇಳುವ ಉತ್ತರವನ್ನು ಕೇಳುವ ತಾಳ್ಮೆ ಇಲ್ಲ. ಹೀಗಾಗಿ ಅವರು ಓಡಿಹೋಗುತ್ತಿದ್ದಾರೆ. ಅವರು ಮೇಲ್ಮನೆ ಅದರ ಸಂಪ್ರದಾಯಗಳನ್ನು ಅವಮಾನಿಸುತ್ತಿದ್ದಾರೆ. ಜನರು ಅವರನ್ನು ಎಲ್ಲ ರೀತಿಯಲ್ಲಿ ಸೋಲಿಸಿದ್ದಾರೆ ಮತ್ತು ಅವರಿಗೆ ಗಲ್ಲಿಗಳಲ್ಲಿ ಕೂಗುವುದನ್ನು ಬಿಟ್ಟು ಬೇರೆ ಆಯ್ಕೆಗಳಿಲ್ಲʼʼ ಎಂದು ಟೀಕಿಸಿದರು.

ʼʼಬೆಂಬಲ ಬೆಲೆಯಲ್ಲಿ ದಾಖಲೆಯ ಖರೀದಿಯನ್ನೂ ಮಾಡಿದ್ದೇವೆ. ಮೊದಲು ಕೇವಲ ಘೋಷಣೆಗಳನ್ನು ಮಾಡಲಾಗುತ್ತಿತ್ತು, ಆದರೆ ಈಗ ಖರೀದಿಗಳನ್ನು ಮಾಡಲಾಗಿದೆ. ನಾವು ಮಹಿಳೆಯರ ಹೆಸರಿನಲ್ಲಿ ಹೆಚ್ಚಿನ ಮನೆಗಳನ್ನು ನಿರ್ಮಿಸಿದ್ದೇವೆ. ಬ್ಯಾಂಕ್‌ಗಳಲ್ಲಿ ಖಾತೆ ತೆರೆಯುವುದರೊಂದಿಗೆ ಆರ್ಥಿಕ ನಿರ್ಧಾರಗಳಲ್ಲಿ ಮಹಿಳೆಯರ ಪಾತ್ರ ಹೆಚ್ಚಿದೆ. ಎಲ್ಲರಿಂದಲೂ ಕಡೆಗಣಿಸಲ್ಪಟ್ಟ ಮಹಿಳೆಯರಲ್ಲಿ ಆತ್ಮವಿಶ್ವಾಸ ವೃದ್ಧಿಸಿದೆʼʼ ಎಂದು ಮೋದಿ ತಿಳಿಸಿದರು.

ಮೋದಿ ಹೇಳಿದ್ದೇನು?

Exit mobile version