Site icon Vistara News

Narendra Modi: ಭೂಕುಸಿತ ಪೀಡಿತ ವಯನಾಡಿನಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ಮೋದಿ

Narendra Modi

ತಿರುವನಂತಪುರಂ: ಭೂಕುಸಿತದಿಂದ ತತ್ತರಿಸಿರುವ ಕೇರಳದ ವಯನಾಡಿಗೆ ಶನಿವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಭೇಟಿ ನೀಡಿದರು (Wayanad landslide). ಮೋದಿ ಅವರಿದ್ದ ವಿಮಾನ ಬೆಳಿಗ್ಗೆ 11 ಗಂಟೆ ಸುಮಾರಿಗೆ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನನಿಲ್ದಾಣಕ್ಕೆ ಬಂದಿಳಿಯಿತು. ಮೋದಿ ಅವರನ್ನು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ಬಳಿಕ ಮೋದಿ ಹೆಲಿಕಾಫ್ಟರ್‌ ಮೂಲಕ ವಯನಾಡಿಗೆ ಪ್ರಯಾಣ ಬೆಳೆಸಿದರು.

ಮೋದಿ ಅವರೊಂದಿಗೆ ಆರಿಫ್ ಮೊಹಮ್ಮದ್ ಖಾನ್, ಪಿಣರಾಯಿ ವಿಜಯನ್ ಮತು ಕೇಂದ್ರ ಸಚಿವ ಸುರೇಶ್‌ ಗೋಪಿ ಕೂಡ ತೆರಳಿದರು. ಭೂಕುಸಿತದಿಂದ ನೂರಾರು ಜನರು ಸಾವನ್ನಪ್ಪಿದ ವಯನಾಡಿನಲ್ಲಿ ವೈಮಾನಿಕ ಸಮೀಕ್ಷೆಯನ್ನು ನಡೆಸಿದ ಪ್ರಧಾನಿ ನರೇಂದ್ರ ಮೋದಿ ದುರಂತದ ಬಗ್ಗೆ ಮಾಹಿತಿ ಪಡೆದುಕೊಂಡರು.

ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ನಲ್ಲಿ ಭೂಕುಸಿತದಿಂದ ಹಾನಿಗೊಳಗಾದ ಚುರಲ್‌ಮಲ, ಮುಂಡಕೈ ಮತ್ತು ಪುಂಚಿರಿಮಟ್ಟಂ ಗ್ರಾಮಗಳ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ಮೋದಿ ಅವರಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ದುರಂತದ ತೀವ್ರತೆ ಬಗ್ಗೆ ಮನವರಿಕೆ ಮಾಡಿದರು. ದುರಂತ ಪೀಡಿತ ಸ್ಥಳದಲ್ಲಿರು ಬೀಡು ಬಿಟ್ಟಿರುವ ರಕ್ಷಣಾ ತಂಡಗಳಿಂದ ಮಾಹಿತಿ ಪಡೆಯಲಿರುವ ಮೋದಿ ನಿರಾಶ್ರಿತರ ಶಿಬಿರ, ಗಾಯಗೊಂಡರವರು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೂ ಭೇಟಿ ನೀಡಲಿದ್ದಾರೆ. ಈ ಪ್ರದೇಶದಲ್ಲಿನ ಪುನರ್ವಸತಿ ಪ್ರಯತ್ನಗಳ ಮೇಲ್ವಿಚಾರಣೆ ನಡೆಸುವ ನಿರೀಕ್ಷೆಯಿದೆ.

ವಿಪತ್ತು ಪೀಡಿತ ಪ್ರದೇಶದಲ್ಲಿ ಪುನರ್ವಸತಿ ಮತ್ತು ಪರಿಹಾರ ಕಾರ್ಯಗಳಿಗಾಗಿ ಕೇರಳ ಸರ್ಕಾರ ಕೇಂದ್ರಕ್ಕೆ 2,000 ಕೋಟಿ ರೂ.ಗಳ ಸಹಾಯಧನ ಒದಗಿಸುವಂತೆ ಮನವಿ ಮಾಡಿದ ಬೆನ್ನಲ್ಲೇ ಪ್ರಧಾನಿ ಅವರ ಭೇಟಿ ನಿರೀಕ್ಷೆ ಮೂಡಿಸಿದೆ.

ದುರಂತ ಪೀಡಿತ ಸ್ಥಳಗಳ ಭೇಟಿಯ ನಂತರ ನಡೆಯಲಿರುವ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಲಿರುವ ಪ್ರಧಾನಿ ಮೋದಿ ರಕ್ಷಣಾ ಕಾರ್ಯಾಚರಣೆ ಮತ್ತು ಪುನರ್ವಸತಿಗಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಿದ್ದಾರೆ. ಜುಲೈ 30ರಂದು ವಯನಾಡಿನ ಮೆಪ್ಪಾಡಿ ಪ್ರದೇಶದ ಮುಂಡಕೈಯಲ್ಲಿ ಭೂಕುಸಿತ ಸಂಭವಿಸಿ ಅಪಾರ ಜೀವ ಹಾನಿ ಮತ್ತು ವ್ಯಾಪಕ ನಾಶನಷ್ಟಕ್ಕೆ ಕಾರಣವಾಗಿದೆ. ದುರಂತದಲ್ಲಿ ಮೃತರ ಸಂಖ್ಯೆ 400 ದಾಟಿದೆ. ಕೇರಳದಲ್ಲಿ ನಡೆದ ಅತೀ ಭೀಕರ ದುರಂತಗಳಲ್ಲಿ ಇದೂ ಒಂದು ಎನಿಸಿಕೊಂಡಿದೆ.

ಇದನ್ನೂ ಓದಿ: Wayanad Tragedy: ವಯನಾಡ್ ಭೂಕುಸಿತ; ದಕ್ಷಿಣ ಭಾರತದ ಸಿನಿಮಾ ನಟರಿಂದ ಸಂತ್ರಸ್ತರಿಗೆ ನೆರವಿನ‌ ಮಹಾಪೂರ

ಧನ್ಯವಾದ ಅರ್ಪಿಸಿದ ರಾಹುಲ್‌ ಗಾಂಧಿ

ವಯನಾಡಿನ ಮಾಜಿ ಸಂಸದ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಭೂಕುಸಿತ ಪ್ರದೇಶಕ್ಕೆ ಭೇಟಿ ನೀಡುತ್ತಿರುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶುಕ್ರವಾರ ಧನ್ಯವಾದ ಅರ್ಪಿಸಿದ್ದರು. ಭೇಟಿಯ ನಂತರ ಪ್ರಧಾನಿ ವಯನಾಡ್ ಭೂಕುಸಿತವನ್ನು ʼರಾಷ್ಟ್ರೀಯ ವಿಪತ್ತುʼ ಎಂದು ಘೋಷಿಸುತ್ತಾರೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದರು.

“ಮೋದಿ ಜೀ, ಭೀಕರ ದುರಂತದ ಬಗ್ಗೆ ವೈಯಕ್ತಿಕವಾಗಿ ಅವಲೋಕನ ಮಾಡಲು ವಯನಾಡ್‌ಗೆ ಭೇಟಿ ನೀಡುತ್ತಿರುವುದಕ್ಕಾಗಿ ಧನ್ಯವಾದಗಳು. ಇದೊಂದು ಒಳ್ಳೆಯ ನಿರ್ಧಾರ. ಪ್ರಧಾನಿ ಒಮ್ಮೆ ವಿನಾಶದ ಪ್ರಮಾಣವನ್ನು ನೇರವಾಗಿ ನೋಡಿದ ನಂತರ, ಅವರು ಅದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುತ್ತಾರೆ ಎಂದು ನನಗೆ ವಿಶ್ವಾಸವಿದೆ” ಎಂದು ಗಾಂಧಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು.

Exit mobile version