ನವದೆಹಲಿ: ಲೋಕಸಭಾ ಚುನಾವಣೆ (Lok Sabha Election 2024)ಗೆ ಸಿದ್ಧತೆ ನಡೆಸುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅಪರೂಪದ ಸಾಧನೆ ಮಾಡಿದ್ದಾರೆ. ಅಮೆರಿಕದ ನ್ಯೂಯಾರ್ಕ್ ಮೂಲದ ನ್ಯೂಸ್‌ವೀಕ್ ಮ್ಯಾಗಜಿನ್(Newsweek Magazine)ನ ಮುಖಪುಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಇಂದಿರಾ ಗಾಂಧಿ ನಂತರ ಮುಖಪುಟದಲ್ಲಿ ಕಾಣಿಸಿಕೊಂಡ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ನಿಯತಕಾಲಿಕದ ಏಪ್ರಿಲ್ 1966ರ ಸಂಚಿಕೆಯ ಮುಖಪುಟದಲ್ಲಿ ಕಾಣಿಸಿಕೊಂಡಿದ್ದರು. ಇದಾಗಿ ಸುಮಾರು ನಾಲ್ಕು ದಶಕದ ಬಳಿಕ ಭಾರತದ ಪ್ರಧಾನಿರೊಬ್ಬರು ಈ ಪ್ರತಿಷ್ಠಿತ ನಿಯತಕಾಲಿಕದ ಮುಖಪುಟವನ್ನು ಅಲಂಕರಿಸಿದ್ದಾರೆ. ನ್ಯೂಯಾರ್ಕ್ ಮೂಲದ ನ್ಯೂಸ್‌ವೀಕ್ ನಿಯತಕಾಲಿಕ ಈ ಮಾರ್ಚ್ ಅಂತ್ಯದಲ್ಲಿ ಮೋದಿ ಅವರನ್ನು ಸಂದರ್ಶಿಸಿತ್ತು. ಸುಮಾರು 90 ನಿಮಿಷಗಳ ಕಾಲ ನಡೆದ ಮಾತುಕತೆ ವೇಳೆ ಹಲವು ವಿಷಯಗಳ ಬಗ್ಗೆ ಮೋದಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
Do read my interview with @Newsweek, in which I have shared my thoughts on various issues, both domestic and international. https://t.co/l4lejBTFfI@NancyCooperNYC @TellDM
— Narendra Modi (@narendramodi) April 10, 2024
ನರೇಂದ್ರ ಮೋದಿ ಅವರ ನಿವಾಸದಲ್ಲಿ ಸಂದರ್ಶನ ನಡೆದಿದೆ. ನ್ಯೂಸ್‌ವೀಕ್ ಅಧ್ಯಕ್ಷ ದೇವ್ ಪ್ರಗಾಡ್, ಗ್ಲೋಬಲ್ ಎಡಿಟರ್ ಇನ್ ಚೀಫ್ ನ್ಯಾನ್ಸಿ ಕೂಪರ್ ಹಾಗೂ ಏಷ್ಯಾದ ಎಡಿಟೋರಿಯಲ್ ಡೈರೆಕ್ಟರ್ ಡ್ಯಾನಿಶ್ ಮಂಜೂರ್ ಭಟ್ ಅವರ ಪ್ರಶ್ನೆಗಳಿಗೆ ಪ್ರಧಾನಿ ಉತ್ತರಿಸಿದರು.
ರಾಮಮಂದಿರ
“ಪ್ರತಿಯೊಬ್ಬ ಭಾರತೀಯನಲ್ಲಿ ಶ್ರೀರಾಮ ಎಂಬ ಹೆಸರು ಅಚ್ಚೊತ್ತಿದೆ. ಶ್ರೀರಾಮ ವಿಚಾರಗಳು, ಜೀವನ, ಮೌಲ್ಯಗಳು ನಮ್ಮ ನಾಗರಿಕತೆಯ ಮೇಲೆ ಪ್ರಭಾವ ಬೀರಿವೆ. ಹಾಗಾಗಿ, ಅಯೋಧ್ಯೆಗೆ ಶ್ರೀರಾಮನು ಮರಳಿರುವುದು ಭಾರತದ ಏಕತೆ ಹಾಗೂ ಐತಿಹಾಸಿಕ ಸಂಗತಿಯ ದ್ಯೋತಕವಾಗಿದೆ. ಶತಮಾನಗಳ ತ್ಯಾಗ, ಪ್ರಾರ್ಥನೆ, ಕನವರಿಕೆಗಳು ಈಡೇರಿವೆ. ರಾಮಲಲ್ಲಾನ ಪ್ರತಿಷ್ಠಾಪನೆಗೆ ದೇಶದ 140 ಕೋಟಿ ಜನ ಕಾಯುತ್ತಿದ್ದರು. ಅವರ ಪ್ರತಿನಿಧಿಯಾಗಿ ನಾನು ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದೆ. 11 ದಿನಗಳ ವಿಶೇಷ ಧಾರ್ಮಿಕ ವಿಧಿವಿಧಾನಗಳನ್ನೂ ನೆರವೇರಿಸಿದೆ” ಎಂದು ಮೋದಿ ಹೇಳಿದರು.
ಲೋಕಸಭೆ ಚುನಾವಣೆ
“ಕಳೆದ 10 ವರ್ಷಗಳಲ್ಲಿ ಜನರಿಗೆ ನೀಡಿದ ಭರವಸೆಗಳನ್ನು ನಾವು ಈಡೇರಿಸಿದ್ದೇವೆ. ಇದಕ್ಕೂ ಮೊದಲು, ಜನರ ಭರವಸೆಗಳು, ಕನಸುಗಳು ಈಡೇರುತ್ತಿರಲಿಲ್ಲ. ಆದರೀಗ, ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್ ತತ್ವದಲ್ಲಿ ಜನರ ಆಶೋತ್ತರಗಳನ್ನು ಕೇಂದ್ರ ಸರ್ಕಾರ ಈಡೇರಿಸಿದೆ. ಜಗತ್ತಿನ 11ನೇ ಬಲಿಷ್ಠ ಆರ್ಥಿಕತೆಯಿಂದ 5ನೇ ಆರ್ಥಿಕತೆಯಾಗಿ ಹೊರಹೊಮ್ಮಿದ್ದೇವೆ. ಹಾಗಾಗಿ ಜನ ನಮ್ಮ ಸರ್ಕಾರದ ಮೇಲೆ ಹೆಚ್ಚು ವಿಶ್ವಾಸ ಇರಿಸಿದ್ದಾರೆ. ಹಾಗಾಗಿ, ಲೋಕಸಭೆ ಚುನಾವಣೆಯಲ್ಲಿ ನಮಗೆ ಬೆಂಬಲ ಸಿಕ್ಕೇ ಸಿಗುತ್ತದೆ” ಎಂದು ತಿಳಿಸಿದರು.
ಇದನ್ನೂ ಓದಿ: Narendra Modi: ಭಾರತ-ಚೀನಾ ಗಡಿ ಬಿಕ್ಕಟ್ಟು ಶೀಘ್ರ ಬಗೆಹರಿಯಲಿ; ಪ್ರಧಾನಿ ಮೋದಿ ಮನದಾಳ
ಪ್ರಜಾಪ್ರಭುತ್ವ ಮತ್ತು ಮಾಧ್ಯಮ
“ಭಾರತದ ಪ್ರಜಾಪ್ರಭುತ್ವಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಸಂವಿಧಾನ ಇದೆ ಎಂದ ಮಾತ್ರಕ್ಕೆ ನಮ್ಮದು ಪ್ರಜಾಪ್ರಭುತ್ವ ದೇಶ ಅಲ್ಲ, ಪ್ರಜಾಪ್ರಭುತ್ವ ನಮ್ಮ ವಂಶಾವಳಿಯಲ್ಲೇ ಇದೆ. ಭಾರತವು ಪ್ರಜಾಪ್ರಭುತ್ವದ ಜನನಿ. 1,100, 1,200 ವರ್ಷಗಳಿಂದಲೂ ನಾವು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡಿಕೊಂಡು ಬಂದಿದ್ದೇವೆ. ವಿಶ್ವದಲ್ಲೇ ನಮ್ಮದು ಬೃಹತ್ ಪ್ರಜಾಪ್ರಭುತ್ವ ದೇಶವಾಗಿದೆ. 2019ರ ಲೋಕಸಭೆ ಚುನಾವಣೆಯಲ್ಲಿ 60 ಕೋಟಿ ಜನ ಮತದಾನ ಮಾಡಿದ್ದಾರೆ. ದೇಶದಲ್ಲಿ 1.5 ಲಕ್ಷ ನೋಂದಾಯಿತ ಮಾಧ್ಯಮ ಪಬ್ಲಿಕೇಶನ್‌ಗಳಿವೆ. ನೂರಾರು ಚಾನೆಲ್‌ಗಳಿವೆ. ಜನರ ಪ್ರತಿಕ್ರಿಯೆಗೆ ಭಾರತದ ಮಾಧ್ಯಮಗಳು ಸೇತುವೆಯಾಗಿ ಕೆಲಸ ಮಾಡುತ್ತಿವೆ. ಭಾರತ ಹಾಗೂ ವಿದೇಶದ ಕೆಲ ಮಾಧ್ಯಮಗಳು ಮಾತ್ರ ಜನರೊಂದಿಗೆ ಸಂಪರ್ಕ ಕಳೆದುಕೊಂಡಿವೆ. ಜನರ ಜತೆ ಇರದ ಕೆಲ ಮಾಧ್ಯಮಗಳು ಹುರುಳಿಲ್ಲದ ಆರೋಪ ಮಾಡುತ್ತಿವೆ” ಎಂದು ಹೇಳಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ