Site icon Vistara News

Narendra Modi: ಯೋಗ ದಿನಾಚರಣೆಯಲ್ಲಿ ಭಾಗವಹಿಸಲು ಮೋದಿ ನಾಳೆ ಕಾಶ್ಮೀರಕ್ಕೆ; ವ್ಯಾಪಕ ಕಟ್ಟೆಚ್ಚರ, ಡ್ರೋನ್ ಹಾರಾಟ ನಿಷೇಧ

Narendra Modi

Narendra Modi

ಶ್ರೀನಗರ: ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಎರಡು ದಿನಗಳ ಭೇಟಿಗಾಗಿ ಗುರುವಾರ (ಜೂನ್‌ 20) ಜಮ್ಮು ಮತ್ತು ಕಾಶ್ಮೀರದ ಶ್ರೀನಗರಕ್ಕೆ ತೆರಳಲಿದ್ದು, ಜೂನ್‌ 21ರಂದು ಶ್ರೀನಗರದ ಶೇರ್-ಎ-ಕಾಶ್ಮೀರ್ ಇಂಟರ್‌ನ್ಯಾಷನಲ್‌ ಕಾನ್ಫರೆನ್ಸ್ ಸೆಂಟರ್ (Sher-e-Kashmir International Conference Centre)ನಲ್ಲಿ ನಡೆಯಲಿರುವ ವಿಶ್ವ ಯೋಗ ದಿನಾಚರಣೆ (World Yoga Day) ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಲೋಕಸಭಾ ಚುನಾವಣೆಯ ಬಳಿಕ ಮೋದಿ ಅವರ ಮೊದಲ ಕಾಶ್ಮೀರ ಪ್ರವಾಸವಾಗಿದ್ದು, ವ್ಯಾಪಕ ಕಟ್ಟೆಚ್ಚರ ಕೈಗೊಳ್ಳಲಾಗಿದೆ. ಭದ್ರತಾ ಕ್ರಮದ ಭಾಗವಾಗಿ ಶ್ರೀನಗರದಲ್ಲಿ ಡ್ರೋನ್ ಮತ್ತು ಕ್ವಾಡ್‌ಕಾಪ್ಟರ್‌ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಈ ಬಗ್ಗೆ ಪೊಲೀಸರು ಆದೇಶ ಹೊರಡಿಸಿದ್ದಾರೆ. ಡ್ರೋನ್ ನಿಯಮಗಳು 2021ರ ನಿಬಂಧನೆಗಳ ಪ್ರಕಾರ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಎಲ್ಲರೂ ಸಹಕರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಯೋಗ ದಿನಾಚರಣೆಯಲ್ಲಿ 9 ಸಾವಿರ ಮಂದಿ ಭಾಗಿ

ಸತತ ಮೂರನೇ ಬಾರಿಗೆ ಕೇಂದ್ರ ಸಚಿವರಾದ ನಂತರ ಜಮ್ಮು ರಾಜಧಾನಿ ಶ್ರೀನಗರಕ್ಕೆ ಆಗಮಿಸಿದ ಬಿಜೆಪಿ ಮುಖಂಡ ಜಿತೇಂದ್ರ ಸಿಂಗ್, ಜೂನ್ 21ರಂದು ಶ್ರೀನಗರದಲ್ಲಿ ನಡೆಯಲಿರುವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಭಾಗವಹಿಸಲಿದ್ದಾರೆ. ಇವರ ಜತೆ ಸುಮಾರು 9,000 ಮಂದಿ ಯೋಗ ಪ್ರದರ್ಶನ ನೀಡಲಿದ್ದಾರೆ ಮೂಲಗಳು ತಿಳಿಸಿವೆ.

“ಜೂನ್ 21ರಂದು ಶ್ರೀನಗರದಲ್ಲಿ ನಡೆಯಲಿರುವ ಯೋಗ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ, ಸುಮಾರು 9,000 ಜನರು ಅವರೊಂದಿಗೆ ಅವರು ಯೋಗ ಪ್ರದರ್ಶನ ನೀಡಲಿದ್ದಾರೆ” ಎಂದು ಜಿತೇಂದ್ರ ಸಿಂಗ್ ಅವರು ಸಿದ್ಧತೆ ಪರಿಶೀಲಿಸಿ ಸುದ್ದಿಗಾರರಿಗೆ ತಿಳಿಸಿದರು. ಈ ವೇಳೆ ಜಮ್ಮು ಮತ್ತು ಕಾಶ್ಮೀರದ ಎಲ್ಲ 20 ಜಿಲ್ಲೆಗಳನ್ನು ವರ್ಚುವಲ್ ಆಗಿ ಸಂಪರ್ಕಿಸುವ ಯೋಜನೆ ಇದೆ. “ಪ್ರತಿ ಜಿಲ್ಲೆಯಿಂದ 2,000 ಜನರು ಸಂಪರ್ಕ ಸಾಧಿಸಿದರೂ, ಕಾರ್ಯಕ್ರಮದಲ್ಲಿ ಸುಮಾರು 50,000 ಭಾಗವಹಿಸಿದಂತಾಗುತ್ತದೆʼʼ ಎಂದು ಸಿಂಗ್ ಹೇಳಿದರು. ʼʼಶ್ರೀನಗರದ ಶೇರ್-ಎ-ಕಾಶ್ಮೀರ್ ಇಂಟರ್‌ನ್ಯಾಷನಲ್‌ ಕಾನ್ಫರೆನ್ಸ್ ಸೆಂಟರ್‌ನಲ್ಲಿ ಇಂತಹ ಬೃಹತ್‌ ಯೋಗ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ಎಲ್ಲರಿಗೂ ಹೆಮ್ಮೆಯ ವಿಷಯʼʼ ಎಂದು ಅವರು ಅಭಿಪ್ರಾಯಪಟ್ಟರು.

ವಿಶೇಷತೆ

ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ ಬಳಿಕ ಶಾಂತಿ ನೆಲೆಸುತ್ತಿದ್ದು, ಈ ಹಿಂದೆ ಜಿ-20 ಶೃಂಗಸಭೆಯನ್ನೂ ಆಯೋಜಿಸಲಾಗಿತ್ತು. ಯೋಗ ದಿನವನ್ನು ಆಚರಿಸುವ ಮೂಲಕ ಮೋದಿ ಅವರು ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ ಎಂಬ ಸಂದೇಶ ಸಾರಲಿದ್ದಾರೆ.

ಯೋಗ ದಿನಾಚರಣೆಗೆ ಅಂತಾರಾಷ್ಟ್ರೀಯ ಮಾನ್ಯತೆ

ಪ್ರಧಾನಿ ಮೋದಿಯವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ‘ಅಂತಾರಾಷ್ಟ್ರೀಯ ಯೋಗ ದಿನಾಚರಣೆ’ ಪ್ರಸ್ತಾಪವನ್ನು ಇಟ್ಟರು. ಯಾಕಾಗಿ ಇದನ್ನ ಅಂತಾರಾಷ್ಟ್ರೀಯ ದಿನವನ್ನಾಗಿ ಆಚರಿಸಬೇಕು ಎಂಬುದಕ್ಕೆ ಸಮರ್ಥ ವಿವರಣೆಯನ್ನೂ ಭಾರತ ಕೊಟ್ಟಿತ್ತು. ಅದನ್ನು ವಿಶ್ವ ಸಂಸ್ಥೆ ಒಪ್ಪಿಕೊಂಡು, ಸದಸ್ಯ ರಾಷ್ಟ್ರಗಳು 2015ರಲ್ಲಿ ಅನುಮೋದಿಸಿವೆ. ಆಗಿನಿಂದ ಇಲ್ಲಿಯವರೆಗೆ ಭಾರತ, ಯೋಗಕ್ಕೆ ಸಂಬಂಧಪಟ್ಟ ಹಲವು ಕಾರ್ಯಕ್ರಗಳನ್ನು ಆಯೋಜಿಸುತ್ತಿದೆ. ವಿದೇಶಗಳಲ್ಲೂ ಯೋಗದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಅದರ ಮಹತ್ವವನ್ನು ಸಾರುತ್ತಿದೆ.

ಇದನ್ನೂ ಓದಿ: Narendra Modi: ಜೂನ್‌ 21ರ ಯೋಗ ದಿನದಂದು ವಿಶೇಷ ಸ್ಥಳದಲ್ಲಿ ಮೋದಿ ಯೋಗ; ಯಾವುದದು?

Exit mobile version