ನವದೆಹಲಿ: ಎಸ್.ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಸಿನಿಮಾದ ನಾಟು ನಾಟು (Naatu Naatu) ಹಾಡು ಈಗ ವಿಶ್ವವಿಖ್ಯಾತಿ ಪಡೆದಿದೆ. ಜಗತ್ತಿನಾದ್ಯಂತ ಖ್ಯಾತನಾಮರು, ನಾಗರಿಕರು ನಾಟು ನಾಟು ಹಾಡಿಗೆ ನೃತ್ಯ ಮಾಡುತ್ತಿದ್ದಾರೆ. ಅದರಲ್ಲೂ, ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಬಂದ ಬಳಿಕವಂತೂ ಹಾಡು, ನೃತ್ಯವು ಮತ್ತಷ್ಟು ಖ್ಯಾತಿ ಪಡೆದಿದೆ. ಇದರ ಭಾಗವಾಗಿಯೇ, ದೆಹಲಿಯಲ್ಲಿರುವ ಜರ್ಮನಿ ರಾಯಭಾರ ಕಚೇರಿಯ ಸಿಬ್ಬಂದಿಯು ರಾಷ್ಟ್ರ ರಾಜಧಾನಿಯ ಚಾಂದಿನಿ ಚೌಕ್‌ನಲ್ಲಿ ನಾಟು ನಾಟು ಹಾಡಿಗೆ ನೃತ್ಯ ಮಾಡಿದ್ದಾರೆ. ಹಾಗೆಯೇ, ಇದನ್ನು ಮೋದಿ ಕೊಂಡಾಡಿದ್ದಾರೆ.
ಜರ್ಮನಿ ರಾಯಭಾರ ಕಚೇರಿಯ ಸಿಬ್ಬಂದಿಯು ಟ್ವಿಟರ್‌ನಲ್ಲಿ ಹಂಚಿಕೊಂಡ ವಿಡಿಯೊಗೆ ನರೇಂದ್ರ ಮೋದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. “ಭಾರತದ ವಿವಿಧತೆ ಹಾಗೂ ಅಭಿರುಚಿಗಳಿಗೆ ಇದು ದ್ಯೋತಕ” ಎಂಬುದಾಗಿ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿರುವ ಜರ್ಮನಿ ರಾಯಭಾರಿ ಡಾಕ್ಟರ್ ಫಿಲಿಪ್ ಆಕರ್‌ಮ್ಯಾನ್ ಅವರು ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೊ ಈಗ ಭಾರಿ ವೈರಲ್ ಆಗಿದೆ.
ಮೋದಿ ಶ್ಲಾಘನೆಯ ಟ್ವೀಟ್
“ಜರ್ಮನಿಯವರಿಗೆ ನೃತ್ಯ ಮಾಡಲು ಬರುವುದಿಲ್ಲವೇ? ನಾನು ಹಾಗೂ ಇಂಡೋ-ಜರ್ಮನ್ ತಂಡವು ನಾಟು ನಾಟು ಹಾಡಿಗೆ ಡಾನ್ಸ್ ಮಾಡುವ ಮೂಲಕ ಸಂತಸ ಹಂಚಿಕೊಂಡೆವು. ನಾವು ಹಾಡಿನ ರೀತಿಯೇ ಹೆಜ್ಜೆ ಹಾಕದಿದ್ದರೂ, ಕುಣಿದು ಕುಪ್ಪಳಿಸಿದ್ದು ಖುಷಿಯಾಯಿತು. ನಮಗೆ ಸ್ಫೂರ್ತಿ ತುಂಬಿದ್ದಕ್ಕೆ ಭಾರತದಲ್ಲಿರುವ ಕೊರಿಯಾ ರಾಯಭಾರ ಕಚೇರಿಯ ಸಿಬ್ಬಂದಿಗೆ ಧನ್ಯವಾದಗಳು” ಎಂದು ಫಿಲಿಪ್ ಆಕರ್‌ಮ್ಯಾನ್ ಸಂತಸ ಹಂಚಿಕೊಂಡಿದ್ದಾರೆ.
ಮಹೀಂದ್ರಾ ಗ್ರೂಪ್ ಚೇರ್ಮನ್ ಆನಂದ್ ಮಹೀಂದ್ರಾ ಅವರೂ ಜರ್ಮನಿ ರಾಯಭಾರ ಕಚೇರಿ ಸಿಬ್ಬಂದಿಯ ನೃತ್ಯವನ್ನು ಕೊಂಡಿದ್ದಾರೆ. ವಿಡಿಯೊವನ್ನು ಹಂಚಿಕೊಂಡಿದ್ದಾರೆ. ವರದಿಯೊಂದರ ಪ್ರಕಾರ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಬಂದ ಬಳಿಕ ಗೂಗಲ್ ಸರ್ಚ್ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.
ಜಪಾನ್‌ನ ಕ್ಯಾಸಿನೋ ಗೈಡ್ ವರದಿಯ ಪ್ರಕಾರ, ಆಸ್ಕರ್ ಪ್ರಶಸ್ತಿ ಬಂದ ಬೆನ್ನಲ್ಲೇ ಗೂಗಲ್‌ನಲ್ಲಿ ನಾಟು ನಾಟು ಹಾಡನ್ನು ಸರ್ಚ್ ಮಾಡಿದವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಬರೋಬ್ಬರಿ ಶೇ.1105 ಏರಿಕೆ ದಾಖಲೆಯಾಗಿದೆಯಂತೆ. ಹಾಗೆಯೇ ಟಿಕ್‌ಟಾಕ್‌ನಲ್ಲೂ 52.6 ಮಿಲಿಯನ್ ಜನರು ಈ ಹಾಡಿನ ವಿಡಿಯೊ ವೀಕ್ಷಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಬಾಚಿಕೊಂಡಿದ್ದ ನಾಟು ನಾಟು ಹಾಡು ಮಾ.12ರಂದು ಆಸ್ಕರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ನಾಟು ನಾಟು ಹಾಡಿಗೆ ಈ ಪ್ರಶಸ್ತಿ ಬಂದಿರುವ ಬಗ್ಗೆ ಬಾಲಿವುಡ್ ಸೇರಿ ಭಾರತೀಯ ಚಿತ್ರರಂಗ ಸೇರಿ ಜಗತ್ತಿನ ಗಣ್ಯಾತಿಗಣ್ಯರು ಶುಭ ಹಾರೈಸಿದ್ದಾರೆ. ವಿದೇಶಿ ಗಣ್ಯರು ಕೂಡ ಹಾಡಿಗೆ ಹೆಜ್ಜೆ ಹಾಕಿದ ವಿಡಿಯೊಗಳು ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ.
ಇದನ್ನೂ ಓದಿ: Naatu Naatu: ನಾಟು ನಾಟು ಹಾಡನ್ನು ಗೂಗಲ್‌ನಲ್ಲಿ ಹುಡುಕಿದವರ ಸಂಖ್ಯೆಯಲ್ಲಿ ಶೇ.1105 ಏರಿಕೆ!