Site icon Vistara News

Narendra Modi: ಅಡ್ವಾಣಿ ಅವರೊಂದಿಗೆ ಕೆಲಸ ಮಾಡಿದ್ದೇ ಹೆಮ್ಮೆ; ಮೋದಿ ಭಾವುಕ ನುಡಿ

narendra modi

narendra modi

ನವದೆಹಲಿ: ಬಿಜೆಪಿ ಹಿರಿಯ ನಾಯಕ, ಮಾಜಿ ಉಪಪ್ರಧಾನಿ ಎಲ್‌.ಕೆ.ಅಡ್ವಾಣಿ (LK Advani) ಅವರಿಗೆ ಭಾನುವಾರ (ಮಾರ್ಚ್‌ 31) ಭಾರತರತ್ನ (Bharat Ratna 2024) ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಎಲ್‌.ಕೆ.ಅಡ್ವಾಣಿ ಅವರ ನಿವಾಸದಲ್ಲಿಯೇ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಅಡ್ವಾಣಿ ಅವರಿಗೆ ಭಾರತರತ್ನ ಪ್ರಶಸ್ತಿ ನೀಡಿದರು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕೂಡ ಉಪಸ್ಥಿತರಿದ್ದರು. ಎಲ್‌.ಕೆ.ಅಡ್ವಾಣಿ ಅವರಿಗೆ ಅಭಿನಂದನೆ ಸಲ್ಲಿಸಿದ ಮೋದಿ ಅವರು, ʼʼತಮ್ಮೊಂದಿಗೆ ಕಾರ್ಯ ನಿರ್ವಹಿಸಲು ಸಾಧ್ಯವಾಗಿದ್ದು ನನ್ನ ಪಾಲಿಗೆ ಅತ್ಯಂತ ಹೆಮ್ಮೆಯ ಸಂಗತಿʼʼ ಎಂದು ಭಾವುಕರಾಗಿದ್ದಾರೆ. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ʼʼಎಲ್.ಕೆ.ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿ ಪ್ರದಾನ ಮಾಡಿರುವುದು ಬಹಳ ವಿಶೇಷವಾಗಿತ್ತು. ಈ ಗೌರವವು ನಮ್ಮ ರಾಷ್ಟ್ರದ ಪ್ರಗತಿಗೆ ಅವರು ನೀಡಿದ ನಿರಂತರ ಕೊಡುಗೆಗೆ ಸಂದ ಪ್ರತಿಫಲ. ಸಾರ್ವಜನಿಕ ಸೇವೆಗಾಗಿ ಅವರು ಮಾಡಿದ ತ್ಯಾಗ, ಸಮರ್ಪಣೆ ಮತ್ತು ಆಧುನಿಕ ಭಾರತವನ್ನು ರೂಪಿಸುವಲ್ಲಿನ ಅವರ ಪ್ರಮುಖ ಪಾತ್ರವು ಇತಿಹಾಸದಲ್ಲಿ ಅಳಿಸಲಾಗದ ಗುರುತನ್ನು ಸೃಷ್ಟಿಸಿದೆ. ಹಲವು ದಶಕಗಳ ಕಾಲ ಅವರೊಂದಿಗೆ ಬಹಳ ನಿಕಟವಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ಹೆಮ್ಮೆ ಇದೆʼʼ ಎಂದು ಪ್ರಧಾನಿ ಮೋದಿ ಅವರು ತಿಳಿಸಿದ್ದಾರೆ.

ಬಿಹಾರ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್, ಮಾಜಿ ಪ್ರಧಾನಿಗಳಾದ ಪಿ.ವಿ.ನರಸಿಂಹರಾವ್‌, ಚೌಧರಿ ಚರಣ್‌ ಸಿಂಗ್‌ ಹಾಗೂ ಹಸಿರು ಕ್ರಾಂತಿ ಪಿತಾಮಹ ಎಂ.ಎಸ್.ಸ್ವಾಮಿನಾಥನ್‌ ಅವರಿಗೆ ಭಾರತರತ್ನ ನೀಡಲಾಗಿದೆ. ನಾಲ್ವರು ಮಹನೀಯರ ಕುಟುಂಬಸ್ಥರು ಶನಿವಾರ (ಮಾರ್ಚ್‌ 30) ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ಆದರೆ ಅನಾರೋಗ್ಯದ ಹಿನ್ನೆಲೆಯಲ್ಲಿ ಎಲ್‌.ಕೆ. ಅಡ್ವಾಣಿ ಅವರಿಗೆ ಅವರ ನಿವಾಸದಲ್ಲಿಯೇ ಭಾರತರತ್ನ ಪ್ರದಾನ ಮಾಡಲಾಗಿದೆ.

ಪಿ.ವಿ. ನರಸಿಂಹರಾವ್‌ ಅವರ ಪುತ್ರ ಪಿ.ವಿ. ಪ್ರಭಾಕರ್‌ ರಾವ್‌, ಎಂ.ಎಸ್.ಸ್ವಾಮಿನಾಥನ್‌ ಅವರ ಪುತ್ರಿ ನಿತ್ಯಾ ರಾವ್‌, ಚೌಧರಿ ಚರಣ್‌ ಸಿಂಗ್‌ ಅವರ ಮೊಮ್ಮಗ ಜಯಂತ್‌ ಸಿಂಗ್‌, ಕರ್ಪೂರಿ ಠಾಕೂರ್‌ ಅವರ ಪುತ್ರ ರಾಮನಾಥ್‌ ಠಾಕೂರ್‌ ಅವರು ಪ್ರಶಸ್ತಿ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತಿತರರು ಹಾಜರಿದ್ದರು.

ಇದನ್ನೂ ಓದಿ: LK Advani: ಮೋದಿ ಉಪಸ್ಥಿತಿಯಲ್ಲಿ ಭಾರತ ರತ್ನ ಪ್ರಶಸ್ತಿ ಸ್ವೀಕರಿಸಿದ ಅಡ್ವಾಣಿ; ವಿಡಿಯೊ ಇಲ್ಲಿದೆ

ಫೆಬ್ರವರಿ 3ರಂದು ಘೋಷಣೆ

ಎಲ್‌.ಕೆ. ಅಡ್ವಾಣಿ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತರತ್ನ ಪುರಸ್ಕಾರ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ವರ್ಷದ ಫೆಬ್ರವರಿ 3ರಂದು ಘೋಷಿಸಿದ್ದರು. “ಎಲ್.ಕೆ.ಅಡ್ವಾಣಿ ಅವರಿಗೆ ಭಾರತ ರತ್ನ ನೀಡಲಾಗುವುದು ಎಂದು ಹಂಚಿಕೊಳ್ಳಲು ನನಗೆ ತುಂಬಾ ಸಂತೋಷವಾಗಿದೆ. ನಾನು ಅವರೊಂದಿಗೆ ಮಾತನಾಡಿದ್ದೇನೆ ಮತ್ತು ಈ ಗೌರವವನ್ನು ಪಡೆದಿರುವುದಕ್ಕೆ ಅವರನ್ನು ಅಭಿನಂದಿಸಿದ್ದೇನೆ” ಎಂದು ಪೋಸ್ಟ್‌ ಮಾಡಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version