Site icon Vistara News

Narendra Modi: ಹಿಮಾಚಲ ಗಡಿಯಲ್ಲಿ ಯೋಧರ ಜತೆ ಮೋದಿ ದೀಪಾವಳಿ ಆಚರಣೆ; ಜನತೆಗೆ ಶುಭಾಶಯ

Narendra Modi

Narendra Modi Reached Himachal Pradesh To Celebrate Deepavali With Soldiers

ಶಿಮ್ಲಾ: ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಪ್ರತಿವರ್ಷ ಗಡಿಯಲ್ಲಿ ಸೈನಿಕರ ಜತೆಯೇ ದೀಪಾವಳಿ (Deepavali) ಆಚರಿಸುತ್ತಾರೆ. ಅದರಂತೆ ನರೇಂದ್ರ ಮೋದಿ (Narendra Modi) ಅವರು ಈ ಬಾರಿಯ ದೀಪಾವಳಿಯನ್ನು ಸೈನಿಕರ ಜತೆ ಆಚರಿಸಲು ಹಿಮಾಚಲ ಪ್ರದೇಶದ ಗಡಿಗೆ ತೆರಳಿದ್ದಾರೆ. ಈ ಕುರಿತು ನರೇಂದ್ರ ಮೋದಿ ಅವರೇ ಎಕ್ಸ್‌ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

“ನಮ್ಮ ಭದ್ರತಾ ಸಿಬ್ಬಂದಿಯ ಜತೆ ದೀಪಾವಳಿಯನ್ನು ಆಚರಿಸಲು ಹಿಮಾಚಲ ಪ್ರದೇಶದ ಲೆಪ್ಚಾ ಗಡಿಗೆ ಆಗಮಿಸಿದ್ದೇನೆ” ಎಂದು ಯೋಧರ ಜತೆಗಿರುವ ಫೋಟೊಗಳ ಸಮೇತ ನರೇಂದ್ರ ಮೋದಿ ಅವರು ಪೋಸ್ಟ್‌ ಮಾಡಿದ್ದಾರೆ. ಯೋಧರ ಜತೆ ಮಾತುಕತೆ ನಡೆಸಲಿರುವ ಮೋದಿ ಅವರು, ಬಳಿಕ ಸೈನಿಕರಿಗೆ ಸಿಹಿ ಹಂಚಲಿದ್ದಾರೆ ಎಂದು ತಿಳಿದುಬಂದಿದೆ.

ಪ್ರಧಾನಿಯಾದ ಬಳಿಕ ಯೋಧರೊಂದಿಗೆ ದೀಪಾವಳಿ ಆಚರಣೆ

2014ರಿಂದಲೂ ನರೇಂದ್ರ ಮೋದಿ ಅವರು ಯೋಧರ ಜತೆಗೇ ದೀಪಾವಳಿ ಆಚರಿಸುತ್ತಾರೆ. 2014ರಲ್ಲಿ ಅವರು ಸಿಯಾಚಿನ್‌ನಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಿದ್ದರು. 2015ರಲ್ಲಿ ಪಂಜಾಬ್, 2016ರಲ್ಲಿ ಹಿಮಾಚಲ ಪ್ರದೇಶದ ಸುಮ್ದೊ, 2017ರಲ್ಲಿ ಜಮ್ಮು-ಕಾಶ್ಮೀರದ ಗುರೇಜ್‌ ಕಣಿವೆ, 2018ರಲ್ಲಿ ಉತ್ತರಾಖಂಡದ ಹರ್ಸಿಲ್‌, 2019ರಲ್ಲಿ ಜಮ್ಮು-ಕಾಶ್ಮೀರದ ರಾಜೌರಿ, 2020ರಲ್ಲಿ ರಾಜಸ್ಥಾನದ ಜೈಸಲ್ಮೇರ್‌, 2021ರಲ್ಲಿ ಜಮ್ಮು-ಕಾಶ್ಮೀರದ ನೌಶೇರಾ ಹಾಗೂ 2022ರಲ್ಲಿ ಜಮ್ಮು-ಕಾಶ್ಮೀರದ ಕಾರ್ಗಿಲ್‌ನಲ್ಲಿ ಯೋಧರ ಜತೆಗೆ ದೀಪಾವಳಿ ಆಚರಿಸಿದ್ದರು.

ಇದನ್ನೂ ಓದಿ: Raja Marga Column : ಈ ದೀಪಾವಳಿಗೆ ನಮ್ಮೊಳಗೆ ಬೆಳಕಿನ ಬೀಜಗಳ ಬಿತ್ತೋಣ ಬನ್ನಿ!

ದೇಶದ ಜನತೆಗೆ ಹಬ್ಬದ ಶುಭಾಶಯ

ನರೇಂದ್ರ ಮೋದಿ ಅವರು ಹಿಮಾಚಲ ಪ್ರದೇಶಕ್ಕೆ ತೆರಳುವ ಮುನ್ನ ದೇಶದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದರು. “ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ದೀಪಗಳ ಹಬ್ಬವು ಎಲ್ಲರ ಬದುಕಿನಲ್ಲೂ ಶಾಂತಿ, ನೆಮ್ಮದಿ, ಸಂತೋಷ ಹಾಗೂ ಆರೋಗ್ಯ ತರಲಿ ಎಂಬುದಾಗಿ ಪ್ರಾರ್ಥಿಸುತ್ತೇನೆ” ಎಂದು ಪೋಸ್ಟ್‌ ಮಾಡಿದ್ದಾರೆ.

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿ ಹಲವು ಗಣ್ಯರು ಶುಭಾಶಯ ಕೋರಿದ್ದಾರೆ. ಮತ್ತೊಂದೆಡೆ ದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣವು ಕುಸಿತ ಕಂಡಿದ್ದು, ಜನರಲ್ಲಿ ಹಬ್ಬದ ಸಂಭ್ರಮ ಮನೆಮಾಡಿದೆ. ದೇಶಾದ್ಯಂತ ಸಡಗರ-ಸಂಭ್ರಮದಿಂದ ದೀಪಾವಳಿ ಆಚರಣೆ ಮಾಡಲಾಗುತ್ತಿದೆ. ಹಬ್ಬದ ವೇಳೆ ದೇಶೀಯ ಉತ್ಪನ್ನಗಳನ್ನು ಹೆಚ್ಚು ಖರೀದಿಸಿ ಎಂದು ನರೇಂದ್ರ ಮೋದಿ ಅವರು ಈಗಾಗಲೇ ಕರೆ ನೀಡಿದ್ದು, ಉತ್ತಮ ಸ್ಪಂದನೆಯೂ ವ್ಯಕ್ತವಾಗುತ್ತಿದೆ. ‌

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version