ಪೋಸ್ಟ್ ಮೊರೆಸ್ಬಿ: ಪಪುವಾ ನ್ಯೂಗಿನಿಯಾದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಅದ್ಧೂರಿ ಸ್ವಾಗತ ದೊರೆತಿದೆ. ಭಾನುವಾರ ರಾತ್ರಿ (May 21) ಪಪುವಾ ನ್ಯೂಗಿನಿಯಾ ತಲುಪಿದ ಮೋದಿ ಅವರ ಕಾಲಿಗೆ ನಮಸ್ಕರಿಸಿ ಪ್ರಧಾನಿ ಜೇಮ್ಸ್ ಮರಾಪೆ ಸ್ವಾಗತಿಸಿದರು. ಇದಾದ ಬಳಿಕ ಮೋದಿ ಅವರು ಸೋಮವಾರ ದ್ವಿಪಕ್ಷೀಯ ಸಭೆ ಮುಗಿಸಿದ್ದಾರೆ. ಇನ್ನು ಇದರ ಮಧ್ಯೆಯೇ ತಮಿಳಿನ ಅತಿ ಪುರಾತನ ಗ್ರಂಥಗಳಲ್ಲಿ ಒಂದಾದ, ತಿರುವಳ್ಳುವರ್ ಅವರು ರಚಿಸಿದ ತಿರುಕ್ಕುರಳ್ ಕೃತಿಯನ್ನು ಬಿಡುಗಡೆಗೊಳಿಸಿದರು.
ತಿರುಕ್ಕುರಳ್ ಕೃತಿಯನ್ನು ಪಪುವಾ ನ್ಯೂಗಿನಿಯಾದ ಅಧಿಕೃತ ಭಾಷೆಯಾದ ಟೋಕ್ ಪಿಸಿನ್‌ಗೆ ಅನುವಾದ ಮಾಡಲಾಗಿದ್ದು, ಅದನ್ನು ಮೋದಿ ಬಿಡುಗಡೆ ಮಾಡಿದರು. ಭಾರತದ ಸಂಸ್ಕೃತಿ, ಜನರ ಜೀವನ ಅರಿಯಲು ತಿರುಕ್ಕುರಳ್ ಕೃತಿಯನ್ನು ಪಪುವಾ ನ್ಯೂಗಿನಿಯಾ ಭಾಷೆಗೆ ಅನುವಾದ ಮಾಡಲಾಗಿದೆ. ಪಪುವಾ ನ್ಯೂಗಿನಿಯಾದಲ್ಲಿ ಮೇ 22ರಂದು ಇಂಡಿಯಾ-ಪೆಸಿಫಿಕ್ ಐಲ್ಯಾಂಡ್ಸ್ ಕೋಪರೇಷನ್ (FIPIC) ಸಭೆ ನಡೆದಿದೆ. ಮೋದಿ ಅವರ ನಾಯಕತ್ವಕ್ಕೆ ಸಭೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ.
ಪುಸ್ತಕ ಬಿಡುಗಡೆಗೊಳಿಸಿದ ಮೋದಿ
ಪುಸ್ತಕ ಬಿಡುಗಡೆ ಬಳಿಕ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ. “ವೆಸ್ಟ್ ನ್ಯೂ ಬ್ರಿಟನ್ ಪ್ರಾವಿನ್ಸ್ ಗವರ್ನರ್ ಶಶಿಂದ್ರನ್ ಮುತ್ತುವೇಲ್ ಹಾಗೂ ಶುಭಾ ಶಂಶಿಂದ್ರನ್ ಅವರು ಪುಸ್ತಕದ ಅನುವಾದಕ್ಕೆ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. ಗವರ್ನರ್ ಶಶಿಂದ್ರನ್ ಅವರು ತಮಿಳಿನಲ್ಲಿಯೇ ಶಾಲೆ ಹಂತದ ಅಭ್ಯಾಸ ಮಾಡಿದ್ದಾರೆ. ಶುಭಾ ಶಶಿಂದ್ರನ್ ಅವರು ಪ್ರತಿಭಾನ್ವಿತ ಭಾಷಾ ತಜ್ಞೆಯಾಗಿದ್ದಾರೆ” ಎಂದು ಮೋದಿ ಬಣ್ಣಿಸಿದ್ದಾರೆ.
ಮೋದಿ ಅವರು ತಮ್ಮ ದೇಶಕ್ಕೆ ಆಗಮಿಸುತ್ತಲೇ ಅವರನ್ನು ತಬ್ಬಿಕೊಂಡು ಜೇಮ್ಸ್ ಮರಾಪೆ ಸ್ವಾಗತಿಸಿದರು. ಇದೇ ವೇಳೆ, ಮೋದಿ ಕಾಲು ಮುಟ್ಟಿ ಅವರು ನಮಸ್ಕರಿಸಿದರು. ಭಾರತದಲ್ಲಿ ಹಿರಿಯರಿಗೆ ನಮಸ್ಕರಿಸಿ ಗೌರವ ಸಲ್ಲಿಸುವ ಪದ್ಧತಿ ಇದೆ. ಇದನ್ನೇ ಜೇಮ್ಸ್ ಅವರು ಕೂಡ ಅನುಸರಿಸಿದರು.
ಇದನ್ನೂ ಓದಿ: Narendra Modi: ಮೋದಿ ಕಾಲಿಗೆ ನಮಸ್ಕರಿಸಿ ತಮ್ಮ ದೇಶಕ್ಕೆ ಸ್ವಾಗತಿಸಿದ ಪಪುವಾ ನ್ಯೂಗಿನಿಯಾ ಪ್ರಧಾನಿ; ಇಲ್ಲಿದೆ ವಿಡಿಯೊ
ಪಪುವಾ ನ್ಯೂಗಿನಿಯಾಗೆ ತೆರಳುವ ಮೂಲಕ ನರೇಂದ್ರ ಮೋದಿ ಹೊಸ ದಾಖಲೆ ಸೃಷ್ಟಿಸಿದರು. ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿಯೊಬ್ಬರು ಪಪುವಾ ನ್ಯೂಗಿನಿಯಾಗೆ ತೆರಳಿದ್ದಾರೆ. ಇದು ಕೂಡ ಮೋದಿ ಅವರಿಗೆ ವಿಶೇಷ ಗೌರವ ನೀಡಲು ಕಾರಣವಾಗಿದೆ. ಜಿ-7 ಶೃಂಗಸಭೆಯ ಹಿನ್ನೆಲೆಯಲ್ಲಿ ಮೋದಿ ಅವರು ಜಪಾನ್‌ನಲ್ಲಿದ್ದಾಗ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಮೋದಿ ಆಟೋಗ್ರಾಫ್ ತೆಗೆದುಕೊಂಡಿದ್ದು ಕೂಡ ಸುದ್ದಿಯಾಗಿದೆ.