ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು (NDA) ಸ್ಪಷ್ಟ ಬಹುಮತ ಸಾಧಿಸಿದ ಕಾರಣ ಬಿಜೆಪಿ ಕಚೇರಿಯಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ನರೇಂದ್ರ ಮೋದಿ (Narendra Modi) ಮಾತನಾಡಿದರು. ಇದೇ ವೇಳೆ ಮಾತನಾಡಿದ (Narendra Modi Election) ಮೋದಿ, “ಮೂರನೇ ಅವಧಿಯಲ್ಲಿ ದೇಶವು ಹೊಸ ಅಧ್ಯಾಯಕ್ಕೆ ಸಾಕ್ಷಿಯಾಗಲಿದೆ” ಎಂದರು. ಅಷ್ಟೇ ಅಲ್ಲ, ನರೇಂದ್ರ ಮೋದಿ ಅವರು ತಮ್ಮ ತಾಯಿಯನ್ನು ನೆನೆದು ಭಾವುಕರಾದರು.
“ನನ್ನ ತಾಯಿ ಅಗಲಿದ ಬಳಿಕ ಇದು ನನ್ನ ಮೊದಲ ಚುನಾವಣೆಯಾಗಿತ್ತು. ಆದರೆ, ದೇಶದ ಮೂಲೆ ಮೂಲೆಯಲ್ಲಿ, ಕೋಟ್ಯಂತರ ತಾಯಂದಿರು ನನ್ನನ್ನು ಮಗನಂತೆ ಸ್ವೀಕರಿಸಿದರು. ಹೆಣ್ಣುಮಕ್ಕಳು ನನಗೆ ಆಶೀರ್ವಾದ ಮಾಡಿದರು. ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳೆಯರು ದಾಖಲೆ ಸಂಖ್ಯೆಯಲ್ಲಿ ಮತದಾನ ಮಾಡಿದರು. ಇಂತಹ ಅಭೂತಪೂರ್ವ ಬೆಳವಣಿಗೆಯನ್ನು ನಾನು ಎಂದಿಗೂ ಮರೆಯುವುದಿಲ್ಲ. ದೇಶದ ಕೋಟ್ಯಂತರ ಮಾತೆಯರು ನೀಡಿದ ಆಶೀರ್ವಾದ, ಪ್ರೇರಣೆಯು ನನ್ನ ಮನದಲ್ಲಿ ತುಂಬಿದೆ” ಎಂದು ಮೋದಿ ಹೇಳಿದರು.
ಭಾಷಣದ ವೇಳೆ ನರೇಂದ್ರ ಮೋದಿ ಅವರು ಕಾಂಗ್ರೆಸ್ ಸೇರಿ ಎಲ್ಲ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದರು. “ಲೋಕಸಭೆ ಚುನಾವಣೆ ಫಲಿತಾಂಶದ ಕುರಿತು ಪ್ರತಿಪಕ್ಷಗಳು ಜೋರು ಧ್ವನಿಯಲ್ಲಿ ಮಾತನಾಡುತ್ತಿವೆ. ಆದರೆ, ಕಾಂಗ್ರೆಸ್ ಸೇರಿ ಎಲ್ಲ ಪ್ರತಿಪಕ್ಷಗಳಿಗೆ ಗೊತ್ತಿಲ್ಲ, ಬಿಜೆಪಿಯೊಂದೇ ಗಳಿಸಿರುವಷ್ಟು ಸ್ಥಾನಗಳನ್ನು ಎಲ್ಲ ಪ್ರತಿಕ್ಷಗಳು ಒಗ್ಗೂಡಿ ಜಯಿಸಿಲ್ಲ. ಆದರೆ, ಮೂರನೇ ಅವಧಿಯಲ್ಲೂ ಎನ್‌ಡಿಎ ಸರ್ಕಾರವು ಉತ್ತಮ ಆಡಳಿತ ನೀಡಲಿದೆ. ದೇಶದಲ್ಲಿ ಹೊಸ ಅಧ್ಯಾಯ ಸೃಷ್ಟಿಯಾಗಲಿದೆ. ಇದು ನರೇಂದ್ರ ಮೋದಿಯ ಗ್ಯಾರಂಟಿ” ಎಂದು ಹೇಳಿದರು.
#WATCH | PM Modi begins his address to BJP workers with chants of "Jai Jagannath"
— ANI (@ANI) June 4, 2024
BJP has swept Odisha Assembly elections. pic.twitter.com/sST73dV5JK
“10 ವರ್ಷಕ್ಕೂ ಮೊದಲು ದೇಶವು ಬದಲಾವಣೆ ಬಯಸುತ್ತಿತ್ತು. 2014ರಲ್ಲಿ ನಾಗರಿಕರು ನಿರಾಸೆಯ ಕಡಲಲ್ಲಿ ಮುಳುಗಿದ್ದರು. ಯುವಕರು ತಮ್ಮ ಭವಿಷ್ಯವನ್ನು ನೆನೆದುಕೊಂಡು ಆತಂಕದಲ್ಲಿದ್ದರು. ಬಡವರು ಸಂಕಷ್ಟದಲ್ಲಿದ್ದರು. ಅಂತಹ ಕಾಲಘಟದಲ್ಲಿ ಬಿಜೆಪಿ ಎಂಬ ಆಶಾವಾದವನ್ನು ಜನ ಆಯ್ಕೆ ಮಾಡಿದರು. ನಾವು ಕೂಡ ಕಳೆದ 10 ವರ್ಷಗಳಿಂದ ಪರಿಶ್ರಮ ವಹಿಸಿದೆವು. ಜನರ ಪರವಾಗಿ ಕೆಲಸ ಮಾಡಿದೆವು. ಇದೇ ಕಾರಣಕ್ಕೆ 2019ರಲ್ಲಿ ಜನ ನಮ್ಮನ್ನು ಆಯ್ಕೆ ಮಾಡಿದರು. ಈಗ 2024ರಲ್ಲೂ ಜನರ ಆಶೀರ್ವಾದ ಪಡೆಯಲು ದೇಶದ ಮೂಲೆ ಮೂಲೆ ಸುತ್ತಿದೆ. ಜನರು ಕೂಡ ಮೂರನೇ ಬಾರಿಗೆ ಎನ್‌ಡಿಎಗೆ ಜನರ ಬೆಂಬಲ ಸಿಕ್ಕಿದೆ. ಹಾಗಾಗಿ, ಜನರಿಗೆ ನಾನು ವಿನಮ್ರವಾಗಿ ಧನ್ಯವಾದ ತಿಳಿಸಲು ಬಯಸುತ್ತೇನೆ” ಎಂದರು.
ಇದನ್ನೂ ಓದಿ: Narendra Modi Election: 3ನೇ ಸಲ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದ; ರಿಸಲ್ಟ್ ಬಳಿಕ ಮೋದಿ ಭಾವುಕ ಪೋಸ್ಟ್