Site icon Vistara News

Narendra Modi: ನಾನು… ಮೊದಲ ಪ್ರಧಾನಿ; ಭಾರತ- ಅಮೆರಿಕ ನಡುವೆ ಅಭೂತಪೂರ್ವ ವಿಶ್ವಾಸ: ವಾಲ್‌ಸ್ಟ್ರೀಟ್‌ ಜರ್ನಲ್‌ ಸಂದರ್ಶನದಲ್ಲಿ ಮೋದಿ

narendra modi interview by WSJ

ಹೊಸ ದಿಲ್ಲಿ: ʼʼನಾನು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಜನಿಸಿದ ಮೊದಲ ಪ್ರಧಾನಿ. ಹೀಗಾಗಿ ನನ್ನ ಚಿಂತನೆ ಹಾಗೂ ನಡೆಗಳು ಭಾರತೀಯ ಸಂಪ್ರದಾಯದಿಂದ ಪ್ರೇರಿತವಾಗಿವೆʼʼ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಯೋಗ ದಿನಾಚರಣೆ ಹಾಗೂ ಇತರ ದ್ವಿಪಕ್ಷೀಯ ಮಾತುಕತೆಗಳ ಹಿನ್ನೆಲೆಯಲ್ಲಿ ಅಮೆರಿಕಕ್ಕೆ ಭೇಟಿ ನೀಡುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಅಮೆರಿಕ ಪ್ರತಿಷ್ಠಿತ ವಾಲ್‌ಸ್ಟ್ರೀಟ್‌ ಜರ್ನಲ್‌ ಪತ್ರಿಕೆಗೆ ಸಂದರ್ಶನ ನೀಡಿದ್ದು, ಅದರಲ್ಲಿ ಈ ವಿಚಾರ ಹೇಳಿದ್ದಾರೆ. ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧ ಸೇರಿದಂತೆ ಹತ್ತು ಹಲವು ವಿಚಾರಗಳ ಕುರಿತು ಅವರು ಮನಬಿಚ್ಚಿ ಮಾತನಾಡಿದ್ದಾರೆ.

ಅವರ ಮಾತಿನ ಸಮಗ್ರ ರೂಪ ಇಲ್ಲಿದೆ:

ನಾನು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಜನಿಸಿದ ಮೊದಲ ಪ್ರಧಾನಿ ಆಗಿರುವುದರಿಂದ, ನನ್ನ ಚಿಂತನಕ್ರಮ, ನನ್ನ ವರ್ತನೆಗಳು ಹಾಗೂ ಮಾತುಗಳು ಎಲ್ಲವೂ ನನ್ನ ದೇಶದ ಪರಂಪರೆ ಸಂಪ್ರದಾಯಗಳಿಂದ ಪ್ರಭಾವಿತಗೊಂಡಿವೆ. ನನಗೆ ಶಕ್ತಿ ತುಂಬುವುದೇ ಅದು. ನಾನು ನನ್ನ ದೇಶ ಹೇಗೆ ಇದೆಯೋ ಹಾಗೆ, ಮತ್ತು ನಾನು ಹೇಗಿದ್ದೇನೋ ಹಾಗೆ ಅದನ್ನು ಜಗತ್ತಿನ ಮುಂದೆ ಪ್ರತಿನಿಧಿಸುವವನು.

ಇಂದು ಭಾರತ ಹಾಗೂ ಅಮೆರಿಕದ ನಡುವೆ ಅಭೂತಪೂರ್ವವಾದ ನಂಬಿಕೆ-ವಿಶ್ವಾಸ ರೂಪುಗೊಂಡಿದೆ. ಜಾಗತಿಕ ವಲಯದಲ್ಲಿ ಭಾರತಕ್ಕೆ ಇನ್ನಷ್ಟು ಉನ್ನತವಾದ, ಆಳವಾದ ಹಾಗೂ ವಿಸ್ತಾರವಾದ ಪಾತ್ರ ಅಗತ್ಯವಿದೆ. ಉಭಯ ದೇಶಗಳ ನಡುವೆ ಬೆಳೆಯುತ್ತಿರುವ ರಕ್ಷಣಾ ಸಹಕಾರ ನಮ್ಮ ಪ್ರಮುಖ ಆಧಾರಸ್ತಂಭ. ಇದು ವ್ಯಾಪಾರ, ತಂತ್ರಜ್ಞಾನ ಹಾಗೂ ಇಂಧನ ವಲಯಗಳಿಗೂ ವಿಸ್ತರಿಸುತ್ತಿದೆ.

ಭಾರತವು ಬೇರೆ ಯಾವುದೇ ದೇಶಕ್ಕೆ ಪರ್ಯಾಯವಾಗಿ ಬರುತ್ತಿಲ್ಲ. ಭಾರತವು ವಿಶ್ವದಲ್ಲಿ ತನ್ನ ಸರಿಯಾದ ಸ್ಥಾನವನ್ನು ಪಡೆಯುತ್ತಿರುವಂತೆ ಈ ಪ್ರಕ್ರಿಯೆಯನ್ನು ನಾವು ನೋಡುತ್ತೇವೆ. ಇಂದು ಜಗತ್ತು ಹಿಂದೆಂದಿಗಿಂತಲೂ ಹೆಚ್ಚು ಪರಸ್ಪರ ಸಂಬಂಧ ಹೊಂದಿದೆ ಮತ್ತು ಪರಸ್ಪರ ಅವಲಂಬಿತವಾಗಿದೆ. ಇನ್ನಷ್ಟು ಸ್ಥಿರತೆಗಾಗಿ ಪೂರೈಕೆ ಸರಪಳಿಗಳಲ್ಲಿ ಹೆಚ್ಚಿನ ವೈವಿಧ್ಯತೆ ಇರಬೇಕು.

ಚೀನಾದ ಜತೆ ಸಂಬಂಧ

ಚೀನಾದೊಂದಿಗೆ ಸಾಮಾನ್ಯ ದ್ವಿಪಕ್ಷೀಯ ಸಂಬಂಧಗಳನ್ನು ಕಾಪಾಡಿಕೊಳ್ಳಲು ಗಡಿ ಪ್ರದೇಶದಲ್ಲಿ ಶಾಂತಿ ಮತ್ತು ನೆಮ್ಮದಿ ಅತ್ಯಗತ್ಯ. ಎಲ್ಲಾ ದೇಶಗಳು ಅಂತಾರಾಷ್ಟ್ರೀಯ ಕಾನೂನು ಮತ್ತು ಇತರ ದೇಶಗಳ ಸಾರ್ವಭೌಮತ್ವವನ್ನು ಗೌರವಿಸಬೇಕು. ವಿವಾದಗಳನ್ನು ರಾಜತಾಂತ್ರಿಕತೆ ಮತ್ತು ಸಂಭಾಷಣೆಯೊಂದಿಗೆ ಪರಿಹರಿಸಬೇಕು, ಯುದ್ಧದಿಂದಲ್ಲ.

ಬೇರೆ ದೇಶಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವುದು, ಕಾನೂನಿನ ನಿಯಮವನ್ನು ಸಮ್ಮನಿಸುವುದು, ಭಿನ್ನಾಭಿಪ್ರಾಯಗಳು ಮತ್ತು ವಿವಾದಗಳನ್ನು ಶಾಂತಿಯುತವಾಗಿ ಪರಿಹರಿಸುವುದರಲ್ಲಿ ನಾವು ನಂಬಿಕೆಯನ್ನು ಹೊಂದಿದ್ದೇವೆ. ಅದೇ ವೇಳೆಗೆ, ತನ್ನ ಸಾರ್ವಭೌಮತ್ವ ಮತ್ತು ಘನತೆಯನ್ನು ರಕ್ಷಿಸಲು ಭಾರತ ಸಂಪೂರ್ಣವಾಗಿ ಸಿದ್ಧವಾಗಿದೆ ಮತ್ತು ಬದ್ಧವಾಗಿದೆ.

ಉಕ್ರೇನ್-‌ ರಷ್ಯಾ ಯುದ್ಧದ ಬಗ್ಗೆ…

ನಾವು ತಟಸ್ಥರು ಎಂದು ಕೆಲವರು ಹೇಳುತ್ತಾರೆ. ಆದರೆ ನಾವು ತಟಸ್ಥರಲ್ಲ. ನಾವು ಶಾಂತಿಯ ಕಡೆ ಇದ್ದೇವೆ. ಭಾರತದ ಪ್ರಮುಖ ಆದ್ಯತೆ ಶಾಂತಿ ಎಂದು ಜಗತ್ತಿಗೆ ಸಂಪೂರ್ಣ ವಿಶ್ವಾಸವಿದೆ. ಸಂಘರ್ಷಗಳನ್ನು ಕೊನೆಗೊಳಿಸಲು, ನಿರಂತರ ಶಾಂತಿ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ನಡೆಯುವ ಎಲ್ಲಾ ಪ್ರಯತ್ನಗಳನ್ನು ಭಾರತ ಬೆಂಬಲಿಸುತ್ತದೆ ಹಾಗೂ ತಾನು ಏನು ಮಾಡಬಹುದೋ ಅದನ್ನು ಮಾಡುತ್ತದೆ.

ಭದ್ರತಾ ಮಂಡಳಿ ಸದಸ್ಯತ್ವ

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಪ್ರಸ್ತುತ ಸದಸ್ಯತ್ವದ ಬಗ್ಗೆ ಮೌಲ್ಯಮಾಪನ ಮಾಡಬೇಕಿದೆ. ಮತ್ತು ಭಾರತ ಅಲ್ಲಿ ಇರಬೇಕಲ್ಲವೇ ಎಂದು ಜಗತ್ತು ಕೇಳಬೇಕಿದೆ. ಹಲವು ಪ್ರಮುಖ ಜಾಗತಿಕ ಮಂಡಳಿಗಳ ಸದಸ್ಯತ್ವದ ಮರುಮೌಲ್ಯಮಾಪನವೂ ಆಗಬೇಕಿದೆ. ಅದು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಹೊಂದಿದೆಯೇ? ಆಫ್ರಿಕದಂಥ ದೇಶಗಳಿಗೆ ಇಲ್ಲಿ ಸದಸ್ಯತ್ವ ಇದೆಯೇ? ಭಾರತ ಜಾಗತಿಕ ಆರ್ಥಿಕತೆಯಲ್ಲಿ ಪ್ರಮುಖ ಸ್ಥಾನ ಪಡೆದಿದೆ, ಅತಿ ಹೆಚ್ಚು ಜನಸಂಖ್ಯೆ ಹೊಂದಿದೆ. ಆದರೆ ಸದಸ್ಯತ್ವ ದೊರೆತಿದೆಯೇ ಎಂದು ಮೋದಿ ಪ್ರಶ್ನಿಸಿದರು.

ಇದನ್ನೂ ಓದಿ: Yoga Day 2023: ಯೋಗಕ್ಕೆ ಮೋದಿ ಹೊಸ ಮೆರುಗು, ಭಾರತದ ವ್ಯಾಯಾಮ ಪದ್ಧತಿಗೆ ಜಗತ್ತೇ ಬೆರಗು

Exit mobile version