ನವದೆಹಲಿ: ಇನ್ಫಿ ನಾರಾಯಣಮೂರ್ತಿ ಅವರ ಅಳಿಯ, ಭಾರತ ಮೂಲದ ರಿಷಿ ಸುನಕ್ ಅವರು ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ಭಾರತದ ಜತೆಗಿನ ಬ್ರಿಟನ್ ಸಂಬಂಧವು ಮತ್ತಷ್ಟು ವೃದ್ಧಿಯಾಗುತ್ತಿದೆ. ಮೋದಿ ಅವರ ಕುರಿತ ಬಿಬಿಸಿ ಡಾಕ್ಯುಮೆಂಟರಿ ವಿಚಾರದಲ್ಲಿ ರಿಷಿ ಸುನಕ್ ಅವರು ಭಾರತದ ಪರ ಮಾತನಾಡುವಷ್ಟರ ಮಟ್ಟಿಗೆ ಸಂಬಂಧ ವೃದ್ಧಿಯಾಗಿದೆ. ಇದರ ಮಧ್ಯೆಯೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ದೂರವಾಣಿ ಮೂಲಕ ರಿಷಿ ಸುನಕ್ ಅವರ ಜತೆ ಮಾತನಾಡಿದ್ದು, ಬ್ರಿಟನ್‌ನಲ್ಲಿ ಭಾರತ ವಿರೋಧಿ ಕೃತ್ಯದಲ್ಲಿ ತೊಡಗಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ ಎಂಬುದಾಗಿ ಮನವಿ ಮಾಡಿದ್ದಾರೆ.
ಖಲಿಸ್ತಾನಿಗಳ ನಾಯಕ, ಪಂಜಾಬ್‌ನಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿರುವ ಅಮೃತ್‌ಪಾಲ್ ಸಿಂಗ್ ಬಂಧನಕ್ಕೆ ಪಂಜಾಬ್‌ನಲ್ಲಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ ಕಾರಣ ಲಂಡನ್‌ನಲ್ಲಿರುವ ಭಾರತದ ಹೈಕಮಿಷನ್ ಮೇಲೆ ಖಲಿಸ್ತಾನಿಗಳು ದಾಳಿ ನಡೆಸಿದ್ದನ್ನು ಮೋದಿ ಪ್ರಸ್ತಾಪಿಸಿದ್ದಾರೆ. ಹೈಕಮಿಷನ್ ಮೇಲೆ ದಾಳಿ ನಡೆಸಿ, ಭಾರತದ ಧ್ವಜವನ್ನು ಕೆಳಗಿಳಿಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮೋದಿ, ಇಂತಹ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ ಎಂಬುದಾಗಿ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ದಾಳಿ ಖಂಡಿಸಿದ ಸುನಕ್
ಲಂಡನ್‌ನಲ್ಲಿರುವ ಭಾರತದ ಹೈಕಮಿಷನ್ ಕಚೇರಿ ಮೇಲೆ ಖಲಿಸ್ತಾನಿಗಳು ದಾಳಿ ನಡೆಸಿರುವುದನ್ನು ರಿಷಿ ಸುನಕ್ ಅವರು ಕೂಡ ಖಂಡಿಸಿದ್ದಾರೆ. “ಹೈಕಮಿಷನ್ ಕಚೇರಿ ಮೇಲೆ ನಡೆದ ದಾಳಿಯನ್ನು ಸಹಿಸುವುದಿಲ್ಲ” ಎಂದು ಹೇಳಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಹಾಗೆಯೇ, ಬ್ರಿಟನ್‌ನಲ್ಲಿರುವ ಭಾರತದ ರಾಯಭಾರ ಕಚೇರಿಗಳಿಗೆ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗುವುದು ಎಂದು ಕೂಡ ರಿಷಿ ಸುನಕ್ ಅವರು ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನೀರವ್ ಮೋದಿ, ಮಲ್ಯ ಗಡಿಪಾರಿಗೆ ಮೋದಿ ಮನವಿ
ಭಾರತದ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ, ಬ್ರಿಟನ್‌ನಲ್ಲಿ ನೆಲೆಸಿರುವ ದೇಶಭ್ರಷ್ಟ ಆರ್ಥಿಕ ಅಪರಾಧಿಗಳಾದ ನೀರವ್ ಮೋದಿ ಹಾಗೂ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರ ಮಾಡುವ ಪ್ರಕ್ರಿಯೆಗೆ ವೇಗ ನೀಡಬೇಕು ಎಂಬುದಾಗಿಯೂ ಮೋದಿ ಸುನಕ್ ಅವರಿಗೆ ಮನವಿ ಮಾಡಿದ್ದಾರೆ. ಇಬ್ಬರೂ ಮಾತುಕತೆ ನಡೆಸುವ ವೇಳೆ ಎರಡೂ ರಾಷ್ಟ್ರಗಳ ವ್ಯಾಪಾರ ಒಪ್ಪಂದಗಳು, ದ್ವಿಪಕ್ಷೀಯ ಸಂಬಂಧ, ಆರ್ಥಿಕ ಏಳಿಗೆಗೆ ಕ್ರಮಗಳು ಸೇರಿ ಹಲವು ವಿಷಯಗಳ ಕುರಿತು ಚರ್ಚಿಸಲಾಗಿದೆ ಎಂದು ತಿಳಿದುಬಂದಿದೆ. ಹಾಗೆಯೇ, ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಗೆ ಸಂಪೂರ್ಣ ಸಹಕಾರ, ಬೆಂಬಲ ನೀಡುವುದಾಗಿಯೂ ಸುನಕ್ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Rishi Sunak: ಸುಧಾಮೂರ್ತಿಗೆ ಪದ್ಮಭೂಷಣ ಪ್ರದಾನ, ಹೆಮ್ಮೆಯ ದಿನ ಎಂದ ಅಳಿಯ ರಿಷಿ ಸುನಕ್