Site icon Vistara News

Narendra Modi: ಮೊದಲ ಕ್ಯಾಬಿನೆಟ್‌ ಸಭೆಯಲ್ಲಿ ಪ್ರಧಾನಿ ಮೋದಿ ಸಚಿವರಿಗೆ ಹೇಳಿದ ಕಿವಿ ಮಾತು ಇದು

Narendra Modi

Narendra Modi

ನವದೆಹಲಿ: ಪ್ರಧಾನಿಯಾಗಿ ಸತತ ಮೂರನೇ ಬಾರಿಗೆ ನರೇಂದ್ರ ಮೋದಿ (Narendra Modi) ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪ್ರಧಾನಿಯಾಗಿ ಅಧಿಕಾರ ಕೈಗೆತ್ತಿಕೊಂಡ ಬಳಿಕ ಅವರು ಸೋಮವಾರ (ಜೂನ್‌ 10) ಮೊದಲ ಸಚಿವ ಸಂಪುಟ ಸಭೆ ನಡೆಸಿದ್ದು, ಕ್ಯಾಬಿನೆಟ್‌ನ ಭಾಗವಾಗಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದ 71 ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಯಿತು (Cabinet 3.0). ಈ ವೇಳೆ ಸಚಿವರನ್ನು ಉದ್ದೇಶಿಸಿ ಮಾತನಾಡಿದ ಅವರು, “ಅನಗತ್ಯ ಹೇಳಿಕೆಗಳನ್ನು ನೀಡಬೇಡಿ ಮತ್ತು ನಿಮ್ಮ ಸಚಿವಾಲಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಅಗತ್ಯವಿದ್ದಾಗ ಮಾತ್ರ ಮಾತನಾಡಿ” ಎಂದು ನಲಹೆ ನೀಡಿದರು.

“ಸಮಯಕ್ಕೆ ಸರಿಯಾಗಿ ಸಚಿವಾಲಯವನ್ನು ತಲುಪಬೇಕು. ಇದು ಕಚೇರಿ ಸಿಬ್ಬಂದಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆʼʼ ಎಂದು ಪ್ರಧಾನಿ ಕೇಂದ್ರ ಸಚಿವರಿಗೆ ಕಿವಿ ಮಾತು ಹೇಳಿದರು. “ಕಡತದ ಬಗ್ಗೆ ರಾಜ್ಯ ಸಚಿವರೊಂದಿಗೆ ಚರ್ಚೆ ನಡೆಸಿ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಅವರೊಂದಿಗೆ ಚರ್ಚೆ ನಡೆಸಿ. ಅವರನ್ನೂ ಸಕ್ರಿಯವಾಗಿ ತೊಡಗಿಸಿಕೊಳ್ಳಿ” ಎಂದು ಮೋದಿ ಸಚಿವರಿಗೆ ಸಲಹೆ ನೀಡಿದರು.

ದೇಶದ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಬಡವರಿಗೆ 3 ಕೋಟಿ ಮನೆಗಳನ್ನು ನಿರ್ಮಿಸಿಕೊಡುವ ಮಹತ್ವದ ತೀರ್ಮಾನವನ್ನು ಮೊದಲ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ. ಪ್ರಧಾನಮಂತ್ರಿ ಆವಾಸ್‌ ಯೋಜನೆ ಅಡಿಯಲ್ಲಿ 3 ಕೋಟಿ ಮನೆಗಳ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ.

ನರೇಂದ್ರ ಮೋದಿ ಅವರ ನಿವಾಸದಲ್ಲಿಯೇ ಸಂಪುಟ ಸಭೆ ನಡೆದಿದ್ದು, 30 ಸಂಪುಟ ದರ್ಜೆ ಸಚಿವರು, ಐವರು ಸ್ವತಂತ್ರ ಖಾತೆ ನಿರ್ವಹಣೆ ಹಾಗೂ 31 ರಾಜ್ಯ ಖಾತೆ ಸಚಿವರು ಪಾಲ್ಗೊಂಡಿದ್ದರು. ಮೊದಲ ಸಂಪುಟ ಸಭೆಯಲ್ಲಿಯೇ ಬಡವರಿಗೆ ಅನುಕೂಲವಾಗುವ ದಿಸೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಇದಕ್ಕೆ ಎಲ್ಲ ಸಚಿವರು ಸಹಮತ ಸೂಚಿಸಿದರು. ಇನ್ನು ಆರಂಭದಲ್ಲಿ ಅವರು ‘ಪಿಎಂ ಕಿಸಾನ್ ನಿಧಿ’ ಬಿಡುಗಡೆಯ ಕಡತಕ್ಕೆ ಮೋದಿ ಸಹಿ ಹಾಕಿದ್ದರು. ಇದು ಅವರು ಮೂರನೇ ಅವಧಿಯಲ್ಲಿ ಸಹಿ ಹಾಕಿದ ಮೊದಲ ಫೈಲ್​. ಪಿಎಂ ಕಿಸಾನ್ ನಿಧಿಯ 17ನೇ ಕಂತಿನ ಬಿಡುಗಡೆಗೆ ಅಧಿಕಾರ ನೀಡುವ ಕಡತಕ್ಕೆ ಅವರು ಸಹಿ ಹಾಕಿದ್ದರು. ಈ ಯೋಜನೆ ಮೂಲಕ 9.3 ಕೋಟಿ ರೈತರಿಗೆ ಪ್ರಯೋಜನ ನೀಡುವ ಸುಮಾರು 20,000 ಕೋಟಿ ರೂ. ಬಿಡುಗಡೆಯಾಗಲಿದೆ.

ಪ್ರತಿಭಾ ಪಾಟೀಲ್‌, ಮನಮೋಹನ ಸಿಂಗ್‌, ದೇವೇಗೌಡ ಅವರ ಆಶೀರ್ವಾದ ಪಡೆದ ಮೋದಿ

ಸೋಮವಾರ ಅಧಿಕಾರ ವಹಿಸಿಕೊಂಡ ಕೂಡಲೇ ಮೋದಿ ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್‌ (Pratibha Patil) ಮತ್ತು ಮಾಜಿ ಪ್ರಧಾನ ಮಂತ್ರಿಗಳಾದ ಮನಮೋಹನ್‌ ಸಿಂಗ್‌ (Manmohan Singh) ಮತ್ತು ಎಚ್‌.ಡಿ.ದೇವೇಗೌಡ (HD Devegowda) ಅವರಿಗೆ ಕರೆ ಮಾಡಿ ಆಶೀರ್ವಾದ ಪಡೆದುಕೊಂಡರು.

ಇದನ್ನೂ ಓದಿ: Rashtrapati Bhavan: ಮೋದಿ ಪ್ರಮಾಣ ವಚನ ಸಮಾರಂಭದ ವೇಳೆ ಕಾಣಿಸಿಕೊಂಡಿದ್ದು ಚಿರತೆಯಲ್ಲ; ಪೊಲೀಸರ ಸ್ಪಷ್ಟನೆ

ಪ್ರತಿಭಾ ಪಾಟೀಲ್‌ ಮತ್ತು ಮನಮೋಹನ್‌ ಸಿಂಗ್ ಇಬ್ಬರೂ ಯುಪಿಎ ಸರ್ಕಾರದ ಅವಧಿಯಲ್ಲಿ ರಾಷ್ಟ್ರಪತಿ ಮತ್ತು ಪ್ರಧಾನಿಯಾಗಿದ್ದರು. ಕಾಂಗ್ರೆಸ್ ಬೆಂಬಲಿತ ಯುನೈಟೆಡ್ ಫ್ರಂಟ್ ಸರ್ಕಾರದ ಅವಧಿಯಲ್ಲಿ ದೇವೇಗೌಡ ಅವರು ಪ್ರಧಾನಿಯಾಗಿದ್ದರು. ದೇವೇಗೌಡ ಅವರ ಪುತ್ರ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಮೋದಿ ಕ್ಯಾಬಿನೆಟ್‌ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆ (ಸಂಪುಟ ದರ್ಜೆ)ಯ ಸಚಿವರಾಗಿ ಅವರು ನಿಯುಕ್ತಿಗೊಂಡಿದ್ದಾರೆ.

Exit mobile version