ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜಗತ್ತಿನ ಯಾವುದೇ ರಾಷ್ಟ್ರಕ್ಕೆ ತೆರಳಲಿ, ಆ ರಾಷ್ಟ್ರದಲ್ಲಿ ನೆಲೆಸಿರುವ ಭರತೀಯರು ಅವರನ್ನು ಅದ್ಧೂರಿಯಾಗಿ ಸ್ವಾಗತಿಸುತ್ತಾರೆ. ಅದರಲ್ಲೂ, ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾಗೆ ಹೋದರಂತೂ ಸಾಕು, ಸಾವಿರಾರು ಅನಿವಾಸಿ ಭಾರತೀಯರು ನರೇಂದ್ರ ಮೋದಿ (Narendra Modi) ಅವರನ್ನು ಮುತ್ತಿಕೊಳ್ಳುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ, ಜೂನ್ 23ರಂದು ನರೇಂದ್ರ ಮೋದಿ ಅವರು ವಾಷಿಂಗ್ಟನ್ ಡಿಸಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದು, ಈ ಕಾರ್ಯಕ್ರಮದ ಟಿಕೆಟ್‌ಗಳೆಲ್ಲ ಸೋಲ್ಡ್ ಔಟ್ ಆಗಿವೆ.
ಹೌದು, ನರೇಂದ್ರ ಮೋದಿ ಅವರು ಜೂನ್ 23ರಂದು ವಾಷಿಂಗ್ಟನ್ ಡಿಸಿಯಲ್ಲಿರುವ ರೊನಾಲ್ಡ್ ರೇಗನ್ ಕಟ್ಟಡದಲ್ಲಿ ಅನಿವಾಸಿ ಭಾರತೀಯರನ್ನುದ್ದೇಶಿ ಮಾತನಾಡಲಿದ್ದಾರೆ. ಕಾರ್ಯಕ್ರಮಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು, ಕಟ್ಟಡದಲ್ಲಿರುವ ಎಲ್ಲ 838 ಆಸನಗಳು ಕೂಡ ನೋಂದಣಿಯಾಗಿದೆ. ಈಗಲೂ ಜನರಿಂದ ಆಸನಗಳನ್ನು ರಿಸರ್ವ್ ಮಾಡಿಕೊಳ್ಳಲು ಬೇಡಿಕೆ ಇದೆ ಎಂದು ಅನಿವಾಸಿ ಭಾರತೀಯರಾದ ಡಾ.ಭರತ್ ಬರಾಯಿ ಮಾಹಿತಿ ನೀಡಿದ್ದಾರೆ. ಜಗತ್ತಿನ ಅನಿವಾಸಿ ಭಾರತೀಯ ಮುಖಂಡರನ್ನು ಕೂಡ ಮೋದಿ ಅವರು ಇದೇ ವೇಳೆ ಭೇಟಿ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಜೂನ್ 21ರಿಂದ 24ರವರೆಗೆ ಅಮೆರಿಕ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 22ರಂದು ಅಮೆರಿಕ ಸಂಸತ್ ಉದ್ದೇಶಿಸಿ ಮಾತನಾಡಲಿದ್ದಾರೆ. ಇದಕ್ಕಾಗಿ ಶ್ವೇತಭವನದ ಸೌತ್‌ಲಾನ್‌ನಲ್ಲಿ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಅಲ್ಲದೆ, ಮೋದಿ ಅವರನ್ನು ಸ್ವಾಗತಿಸಲು ಅನಿವಾಸಿ ಭಾರತೀಯರು ತುದಿಗಾಲ ಮೇಲೆ ನಿಂತಿದ್ದಾರೆ. ಇನ್ನು, ಅಮೆರಿಕದ ನ್ಯೂಜೆರ್ಸಿಯಲ್ಲಿರುವ ಭಾರತ ಮೂಲಕದ ವ್ಯಕ್ತಿಯೊಬ್ಬರು ಭಾರತದ ಥಾಲಿಗೆ ‘ಮೋದಿಜಿ ಥಾಲಿ’ ಎಂದು ಹೆಸರಿಟ್ಟು ಅಭಿಮಾನ ಮೆರೆದಿದ್ದಾರೆ.
ಇದನ್ನೂ ಓದಿ: Narendra Modi: ಪ್ರಧಾನಿ ಅಮೆರಿಕ ಭೇಟಿ; ಈ ಊಟಕ್ಕೆ ಮೋದಿ ಹೆಸರಿಟ್ಟು ಅಭಿಮಾನ ಮೆರೆದ ಭಾರತೀಯ
ಕಿಚಡಿ, ರಸಗುಲ್ಲ, ಇಡ್ಲಿ, ಡೋಕ್ಲಾ, ಪಾಪಡ್, ಚಾಚ್ ಸೇರಿ ಹಲವು ತಿಂಡಿಗಳುಳ್ಳ ‘ಮೋದಿಜಿ ಥಾಲಿ’ ಎಂದು ನ್ಯೂಜೆರ್ಸಿಯಲ್ಲಿರುವ ಶೆಫ್ (ಬಾಣಸಿಗ) ಶ್ರೀಪಾದ್ ಕುಲಕರ್ಣಿ ಹೆಸರಿಟ್ಟಿದ್ದಾರೆ. ಇವರು ಈ ಕುರಿತು ವಿಡಿಯೊ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. “ಮೋದಿಜಿಯವರೇ ನಮಸ್ಕಾರ. ನ್ಯೂಜೆರ್ಸಿಯಲ್ಲಿರುವ ಎಲ್ಲ ಭಾರತೀಯರ ಬೇಡಿಕೆ ಮೇರೆಗೆ ನಿಮ್ಮ ಹೆಸರಿನಲ್ಲಿ ವಿಶೇಷ ಥಾಲಿ ಮಾಡಿದ್ದೇವೆ. ಥಾಲಿಯಲ್ಲಿ ಇಷ್ಟೆಲ್ಲ ತಿನಿಸುಗಳು ಇರಲಿವೆ” ಎಂದು ಕುಲಕರ್ಣಿ ವಿವರಿಸಿದ್ದಾರೆ.
ನರೇಂದ್ರ ಮೋದಿ ಅವರು ಜೂನ್ 22ರಂದು ಅಮೆರಿಕ ಸಂಸತ್ ಉದ್ದೇಶಿಸಿ ಭಾಷಣ ಮಾಡಿದ ಬಳಿಕ ವಿಶೇಷ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಅಮೆರಿಕ ಸಂಸತ್‌ನಲ್ಲಿ ಮೋದಿ ಮಾಡುತ್ತಿರುವ ಎರಡನೇ ಭಾಷಣ ಇದಾಗಿದೆ. ಆ ಮೂಲಕ ಮೋದಿ ಅವರು ಅಮೆರಿಕ ಸಂಸತ್‌ನಲ್ಲಿ ಭಾಷಣ ಮಾಡಿದ ಭಾರತದ ಎರಡನೇ ಪ್ರಧಾನಿ ಎನಿಸಲಿದ್ದಾರೆ. ಮೋದಿ ಭಾಷಣದ ಬಳಿಕ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರ ಜತೆ ಭೋಜನಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.