ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 25ರಂದು ಯುರೋಪಿಯನ್ ದೇಶವಾದ ಗ್ರೀಸ್‌ಗೆ (PM Modi Greece Visit) ಭೇಟಿ ನೀಡಲಿದ್ದಾರೆ. ಇದರೊಂದಿಗೆ ನರೇಂದ್ರ ಮೋದಿ (Narendra Modi) ಅವರು ಕಳೆದ 40 ವರ್ಷಗಳಲ್ಲಿಯೇ ಗ್ರೀಸ್‌ಗೆ ಭೇಟಿ ನೀಡಿದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಭಾಜನರಾಗಲಿದ್ದಾರೆ. ಮೋದಿ ಅವರ ಪ್ರವಾಸದ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ.
“ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 25ರಂದು ಗ್ರೀಸ್‌ಗೆ ಭೇಟಿ ನೀಡಲಿದ್ದಾರೆ. ಗ್ರೀಸ್ ಪ್ರಧಾನಿ ಮಿಟ್ಸೊಟಾಕಿಸ್ (Mitsotakis) ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಉಭಯ ದೇಶಗಳ ಸಂಬಂಧ ವೃದ್ಧಿ, ವ್ಯಾಪಾರ, ಸಹಕಾರ, ಒಪ್ಪಂದದ ಜತೆಗೆ ಎರಡೂ ದೇಶಗಳ ಬ್ಯುಸಿನೆಸ್ ಲೀಡರ್‌ಗಳ ಜತೆ ಉಭಯ ನಾಯಕರು ಮಾತುಕತೆ ನಡೆಸಲಿದ್ದಾರೆ. ಇನ್ನು ಗ್ರೀಸ್‌ನಲ್ಲಿ ನೆಲೆಸಿರುವ ಭಾರತೀಯರೊಂದಿಗೂ ಮೋದು ಮಾತುಕತೆ ನಡೆಸಲಿದ್ದಾರೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ.
ಆಗಸ್ಟ್ 22-24ರವರೆಗೆ ದಕ್ಷಿಣ ಆಫ್ರಿಕಾ ಪ್ರವಾಸ
ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯಲಿರುವ ಬ್ರಿಕ್ಸ್ ಸಭೆಯಲ್ಲಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳಲಿದ್ದಾರೆ. ಹಾಗಾಗಿ ಆಗಸ್ಟ್ 22ರಿಂದ 24ರವರೆಗೆ ಮೋದಿ ಅವರು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದಾರೆ. ಇದಾದ ಬಳಿಕ ಅವರು ಗ್ರೀಸ್‌ಗೆ ತೆರಳಲಿದ್ದಾರೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಕೂಡ ಸಭೆಯಲ್ಲಿ ಭಾಗವಹಿಸಲಿದ್ದು, ನರೇಂದ್ರ ಮೋದಿ ಅವರ ಜತೆ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಬ್ರಿಕ್ಸ್ ರಾಷ್ಟ್ರಗಳಲ್ಲಿ ತೆಗೆದುಕೊಳ್ಳುವ ನಿರ್ಣಯಗಳಿಗೆ ಅಭಿಪ್ರಾಯ ವ್ಯಕ್ತಪಡಿಸುವ ಜತೆಗೆ ಹಲವು ವಿಷಯಗಳಿಂದ ಮೋದಿ ಭೇಟಿಯು ಪ್ರಾಮುಖ್ಯತೆ ಪಡೆದಿದೆ. ಸದಸ್ಯ ರಾಷ್ಟ್ರಗಳ ಜತೆಗಿನ ದ್ವಿಪಕ್ಷೀಯ ಮಾತುಕತೆ ಜತೆಗೆ ಮೋದಿ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನೂ ಭೇಟಿಯಾಗಲಿದ್ದಾರೆ. ಲಡಾಕ್ ಗಡಿ ತಂಟೆ, ಶಾಂತಿ ಸ್ಥಾಪನೆ ಸೇರಿ ಹಲವು ವಿಷಯಗಳ ಕುರಿತು ಜಿನ್‌ಪಿಂಗ್ ಜತೆ ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ.
ಬ್ರೆಜಿಲ್, ರಷ್ಯಾ, ಭಾರತ, ಚೀನಾ ಹಾಗೂ ದಕ್ಷಿಣ ಆಫ್ರಿಕಾ ರಾಷ್ಟ್ರಗಳು ಸೇರಿ 2010ರಲ್ಲಿ ಬ್ರಿಕ್ಸ್ ಒಕ್ಕೂಟ ರಚಿಸಿವೆ. ಜೊಹಾನ್ಸ್‌ಬರ್ಗ್‌ನಲ್ಲಿ ನಡೆಯುವ ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಆಗಮಿಸದೆ, ವರ್ಚ್ಯುವಲ್ ವೇದಿಕೆ ಮೂಲಕವೇ ಭಾಗವಹಿಸುವುದಾಗಿ ತಿಳಿಸಿದ್ದಾರೆ. ಹಾಗಾಗಿ, ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಜೊಹಾನ್ಸ್‌ಬರ್ಗ್‌ಗೆ ತೆರಳದೆ, ವಿಡಿಯೊ ಕಾನ್ಫರೆನ್ಸ್ ಮೂಲಕ ಭಾಗವಹಿಸಲಿದ್ದಾರೆ ಎನ್ನಲಾಗಿತ್ತು. ಆದರೀಗ, ಮೋದಿ ಅವರು ದಕ್ಷಿಣ ಆಫ್ರಿಕಾಗೆ ತೆರಳುವುದು ನಿಶ್ಚಿತವಾಗಿದೆ.