Site icon Vistara News

Narendra Modi: ಭಾನುವಾರ ಸಂಜೆ 7.15ಕ್ಕೆ ಮೋದಿ ಪ್ರಮಾಣವಚನ‌; ಹಲವು ಸಂಸದರಿಗೂ ಮಂತ್ರಿ ಭಾಗ್ಯ!

Narendra Modi

President feeds 'dahi-cheeni' to Prime Minister-elect Modi at Rashtrapati Bhavan

ನವದೆಹಲಿ: ನರೇಂದ್ರ ಮೋದಿ ಅವರು ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗಿದ್ದು, ಇದಕ್ಕೆ ಎನ್‌ಡಿಎ ಮೈತ್ರಿಕೂಟದ ಎಲ್ಲ ಪಕ್ಷಗಳು ಸಮ್ಮತಿ ಸೂಚಿಸಿವೆ. ಇದಾದ ಬಳಿಕ ನರೇಂದ್ರ ಮೋದಿ (Narendra Modi) ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರನ್ನು ಭೇಟಿಯಾಗಿ, ಸರ್ಕಾರ ರಚನೆ ಕುರಿತು ಹಕ್ಕು ಮಂಡಿಸಿದ್ದಾರೆ. ಇನ್ನು, ಜೂನ್‌ 9ರಂದು (ಭಾನುವಾರ) ಸಂಜೆ 7.15ಕ್ಕೆ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿ ಪ್ರಮಾಣವಚನ (Oath) ಸ್ವೀಕರಿಸಲಿದ್ದಾರೆ.

ಹೌದು, ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕರಿಸುವ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೇ ಅಧಿಕೃತ ಮಾಹಿತಿ ನೀಡಿದ್ದಾರೆ. “ನರೇಂದ್ರ ಮೋದಿ ಅವರು ಪ್ರಧಾನಿಯಾಗಿ, ಹಲವು ಸಂಸದರು ಸಚಿವರಾಗಿ ಜೂನ್‌ 9ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಮಾಣವಚನ ಬೋಧಿಸಲಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ” ಎಂದು ರಾಷ್ಟ್ರಪತಿಯವರ ಕಚೇರಿಯು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದೆ.

ನರೇಂದ್ರ ಮೋದಿ ಅವರೊಂದಿಗೆ ಪ್ರಮಾಣವಚನ ಸ್ವೀಕರಿಸುವ ಸಂಸದರು ಯಾರು ಎಂಬುದರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಇನ್ನು, ನರೇಂದ್ರ ಮೋದಿ ಮಾತ್ರವಲ್ಲ, ಎನ್‌ಡಿಎ ಮೈತ್ರಿಕೂಟದ ಹಲವು ಸದಸ್ಯರು ಕೂಡ ರಾಷ್ಟ್ರಪತಿ ಅವರನ್ನು ಭೇಟಿಯಾದರು. ಬಿಹಾರ ಸಿಎಂ ನಿತೀಶ್‌ ಕುಮಾರ್‌, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ನೂತನ ಸಂಸದ ಡಾ.ಸಿ.ಎನ್‌.ಮಂಜುನಾಥ್‌ ಸೇರಿ ಹಲವು ನಾಯಕರು ಇದ್ದರು.

ಸರ್ಕಾರ ರಚನೆಗೆ ಹಕ್ಕು ಮಂಡಿಸುವ ಮುನ್ನ ನಡೆದ ಎನ್‌ಡಿಎ ಸಭೆಯಲ್ಲಿ ನರೇಂದ್ರ ಮೋದಿ ಅವರನ್ನು ನಿತೀಶ್‌ ಕುಮಾರ್‌ ಅವರು ಹೊಗಳಿದರು. “ಮುಂದಿನ ಸಲವೂ ನೀವೇ ಸ್ಪರ್ಧೆಗೆ ನಿಂತರೆ, ಈಗ ಅಲ್ಲಲ್ಲಿ ಗೆಲುವು ಸಾಧಿಸಿರುವ ಇಂಡಿಯಾ ಒಕ್ಕೂಟದ ಯಾವೊಬ್ಬರೂ ಗೆಲ್ಲುವುದಿಲ್ಲ. ಎಲ್ಲರೂ ನಿಮ್ಮೆದುರು ಸೋತು ಹೋಗುತ್ತಾರೆ. ಅವರು ಎಂದಿಗೂ ದೇಶಕ್ಕಾಗಿ ಕೆಲಸ ಮಾಡಿಲ್ಲ. ಅವರಿಂದ ದೇಶಕ್ಕೆ ಯಾವ ಸೇವೆಯೂ ಸಿಕ್ಕಿಲ್ಲ. ನರೇಂದ್ರ ಮೋದಿ ಅವರ ನೇತೃತ್ವದಲ್ಲಿಯೇ ದೇಶ ಏಳಿಗೆ ಹೊಂದುತ್ತಿದೆ” ಎಂಬುದಾಗಿ ನಿತೀಶ್‌ ಕುಮಾರ್‌ ಹೇಳಿದರು. ಆಗ ನರೇಂದ್ರ ಮೋದಿ ಅವರು ಗಹಗಹಿಸಿ ನಕ್ಕರು. ಸಭೆಯಲ್ಲಿದ್ದ ಎಲ್ಲರೂ ನಗೆಗಡಲಲ್ಲಿ ತೇಲಾಡಿದರು.

ಇದನ್ನೂ ಓದಿ: Nitish Kumar: ಮುಂದಿನ ಸಲ ನಿಮ್ಮೆದುರು ಪ್ರತಿಪಕ್ಷಗಳ ಎಲ್ಲರಿಗೂ ಸೋಲು; ನಿತೀಶ್‌ ಮಾತಿಗೆ ನಕ್ಕ ಮೋದಿ!

Exit mobile version