Site icon Vistara News

Narendra Modi: ನಾಳೆ 3ನೇ ಬಾರಿ ಮೋದಿಗೆ ಪ್ರಧಾನಿ ಗಾದಿ; ಇಲ್ಲಿದೆ ಅವರ ರಾಜಕೀಯದ ಹಾದಿ!

Narendra Modi

Narendra Modi To Take Oath As Prime Minister For Third Time; How Was His Life And Political Journey

ನವದೆಹಲಿ: ಜವಾಹರ ಲಾಲ್‌ ನೆಹರು, ಲಾಲ್‌ ಬಹದ್ದೂರ್‌ ಶಾಸ್ತ್ರಿ, ಇಂದಿರಾ ಗಾಂಧಿ, ರಾಜೀವ್‌ ಗಾಂಧಿ, ಪಿ.ವಿ.ನರಸಿಂಹರಾವ್‌, ಅಟಲ್‌ ಬಿಹಾರಿ ವಾಜಪೇಯಿ, ಸೋನಿಯಾ ಗಾಂಧಿ… ಹೀಗೆ, ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಹಲವು ನಾಯಕರು ದೇಶವನ್ನೇ ಆವರಿಸಿಕೊಂಡಿದ್ದಾರೆ. ಹೀಗೆ, 21ನೇ ಶತಮಾನದಲ್ಲಿ ಇಡೀ ದೇಶವನ್ನೇ ಆವರಿಸಿಕೊಂಡ, ಟೀಕೆ-ವಿರೋಧದ ಮಧ್ಯೆಯೂ ದೇಶದ ಜನರನ್ನು ಮೋಡಿ ಮಾಡಿದ ನಾಯಕ ಎಂದರೆ ಅದು ನರೇಂದ್ರ ದಾಮೋದರ ದಾಸ್‌ ಮೋದಿ ಹಾಗೂ ನರೇಂದ್ರ ದಾಮೋದರ ದಾಸ್‌ ಮೋದಿ ಮಾತ್ರ. ಇಂತಹ ನರೇಂದ್ರ ಮೋದಿ (Narendra Modi) ಅವರೀಗ ಸತತ ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿ (Prime Minister) ಭಾನುವಾರ (ಜೂನ್‌ 9) ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಆಡಳಿತ ವಿರೋಧಿ ಅಲೆ, ಕಾಂಗ್ರೆಸ್‌ ಸೇರಿ ಇಂಡಿಯಾ ಒಕ್ಕೂಟದ ನಾಯಕರ ಪೈಪೋಟಿಯ ಮಧ್ಯೆಯೂ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಸ್ಪಷ್ಟ ಬಹುಮತ ಸಾಧಿಸಿದೆ ಎಂದರೆ, ಅದಕ್ಕೆ ಮೋದಿ ಅವರ ನಾಯಕತ್ವವೇ ನಿರ್ಣಾಯಕವಾಗಿದೆ. ಇದೇ ಕಾರಣಕ್ಕಾಗಿ 10 ವರ್ಷದ ಬಳಿಕ ಮೈತ್ರಿ ಸರ್ಕಾರ ರಚನೆಯಾಗುತ್ತಿದ್ದರೂ ಮೋದಿ ಅವರೇ ಅವಿರೋಧವಾಗಿ ಪ್ರಧಾನಿಯಾಗುತ್ತಿದ್ದಾರೆ. ಹಾಗಾದರೆ, ನರೇಂದ್ರ ಮೋದಿ ಅವರ ಹಿನ್ನೆಲೆ ಏನು? ಅವರು ರಾಜಕೀಯಕ್ಕೆ ಧುಮುಕಿದ್ದು ಹೇಗೆ? ದೇಶದ ನಾಯಕರಾಗಿ ಅವರು ಹೊರಹೊಮ್ಮಿದ್ದು ಹೇಗೆ? ಇಡೀ ದೇಶವನ್ನು ಆವರಿಸಿಕೊಂಡಿದ್ದು ಹೇಗೆ? ಅವರು ತೆಗೆದುಕೊಂಡ ಪ್ರಮುಖ ತೀರ್ಮಾನಗಳು ಯಾವವು ಎಂಬುದರ ಮೇಲಿನ ಇಣುಕು ನೋಟ ಇಲ್ಲಿದೆ…

ನರೇಂದ್ರ ಮೋದಿ ಬಾಲ್ಯ

ನರೇಂದ್ರ ಮೋದಿ ಅವರು ಗುಜರಾತ್‌ನ ಮೆಹ್ಸಾನ ಜಿಲ್ಲೆಯ ವಡ್ನಗರದಲ್ಲಿ 1950ರ ಸೆಪ್ಟೆಂಬರ್‌ 17ರಂದು ಜನಿಸಿದರು. ದಾಮೋದರ ದಾಸ್‌ ಹಾಗೂ ಹೀರಾಬೆನ್‌ ಅವರು ಮೋದಿ ಅವರ ತಂದೆ-ತಾಯಿ. ನರೇಂದ್ರ ಮೋದಿ ಅವರು ದಾಮೋದರ ದಾಸ್‌ ದಂಪತಿಗೆ ಮೂರನೇ ಮಗನಾಗಿ ಜನಿಸಿದರು. ಸೋಮ ಮೋದಿ ಪಂಕಜ್‌ ಮೋದಿ, ಪ್ರಹ್ಲಾದ್‌ ಮೋದಿ, ವಾಸಂತಿಬೆನ್‌ ಹಸ್ಮುಖ್‌ಲಾಲ್‌ ಮೋದಿ ಹಾಗೂ ಅರವಿಂದ್‌ ಮೋದಿ ಅವರು ಇವರ ಸಹೋದರ ಹಾಗೂ ಸಹೋದರಿ ಆಗಿದ್ದಾರೆ. ಇಡೀ ಕುಟುಂಬವು 40 ಅಡಿ ಉದ್ದ ಹಾಗೂ 12 ಅಡಿ ಅಗಲದ ಮನೆಯಲ್ಲೇ ವಾಸಿಸುತ್ತಿತ್ತು. ಇದು ಇವರ ಬಡತನವನ್ನು ತೋರಿಸುತ್ತಿತ್ತು. ಮೋದಿ ಅವರ ತಂದೆಯು ಸ್ಥಳೀಯ ರೈಲು ನಿಲ್ದಾಣದಲ್ಲಿ ಪುಟ್ಟದೊಂದು ಟೀ ಅಂಗಡಿ ಇಟ್ಟುಕೊಂಡಿದ್ದರು. ಮೋದಿ ಅವರೂ ಬಾಲ್ಯದಲ್ಲಿ ಓದಿನ ಜತೆಗೆ ತಂದೆಯ ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಓದು, ಚರ್ಚೆ, ಈಜಿನಲ್ಲಿ ನಿಪುಣರಾಗಿದ್ದ ಮೋದಿ ಅವರು ಹೆಚ್ಚು ಗೆಳೆಯರನ್ನು ಕೂಡ ಹೊಂದಿದ್ದರು.

ನರೇಂದ್ರ ಮೋದಿ ಅವರಿಗೆ 8ನೇ ವಯಸ್ಸಿನಲ್ಲಿಯೇ ಆರ್‌ಎಸ್‌ಎಸ್‌ನ ಪರಿಚಯವಾಯಿತು. ಸ್ವಾಮಿ ವಿವೇಕಾನಂದರ ವಿಚಾರಧಾರೆಗಳು ಅವರನ್ನು ಆಕರ್ಷಿಸಿದವು. 17ನೇ ವಯಸ್ಸಿನಲ್ಲೇ ಮನೆ ತೊರೆದ ಮೋದಿ, ಹಿಮಾಲಯ, ರಿಷಿಕೇಶ ಸೇರಿ ದೇಶದ ಹಲವು ಯಾತ್ರಾ ಸ್ಥಳಗಳಿಗೆ ಭೇಟಿ ನೀಡಿದರು. ಇದಾದ ಬಳಿಕ, 1972ರಲ್ಲಿ ಅವರು ಆರ್‌ಎಸ್‌ಎಸ್‌ ಸೇರ್ಪಡೆಯಾಗಿ, ಇಡೀ ಜೀವನವನ್ನು ಅವರು ಸೇವೆಗೆ ಮುಡಿಪಾಗಿಡುವ ತೀರ್ಮಾನ ಮಾಡಿದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹೋರಾಟ, 1982ರಲ್ಲಿ ಆರ್‌ಎಸ್‌ಎಸ್‌ ಪ್ರಚಾರಕರಾಗಿ ನೇಮಕ, 1987ರಲ್ಲಿ ಗುಜರಾತ್‌ ಬಿಜೆಪಿ ಸಂಘಟನಾ ಕಾರ್ಯದರ್ಶಿ, ಅಯೊಧ್ಯೆ ರಥಯಾತ್ರೆಯಲ್ಲಿ ಭಾಗಿಯಾಗಿ, 1995ರಲ್ಲಿ ಅವರು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ದೆಹಲಿಗೆ ತೆರಳಿದರು. 1998ರಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿಯೂ ಆಯ್ಕೆಯಾದರು. ಅಷ್ಟೊತ್ತಿಗಾಗಲೇ ಅವರಿಗೆ ಅಟಲ್‌ ಬಿಹಾರಿ ವಾಜಪೇಯಿ ಹಾಗೂ ಎಲ್‌.ಕೆ.ಅಡ್ವಾಣಿಯವರ ಸಖ್ಯ ಬೆಳೆದಿತ್ತು.

ಮೋದಿ ರಾಜಕೀಯಕ್ಕೆ ಧುಮುಕಿದ್ದು ಹೇಗೆ?

ಗುಜರಾತ್‌ ರಾಜಕಾರಣವನ್ನು ಅವಲೋಕಿಸಿದರೆ, 1995ರಲ್ಲಿ ಬಿಜೆಪಿಯ ಜನಪ್ರಿಯ ಮತ್ತು ಹಿರಿಯ ನಾಯಕ ಕೇಶುಭಾಯ್‌ ಪಟೇಲ್‌ ಮುಖ್ಯಮಂತ್ರಿಯಾಗಿದ್ದರು. 1998-2001ರ ತನಕ ಮತ್ತೊಮ್ಮೆ ಅವರೇ ಸಿಎಂ ಆಗಿದ್ದರು. ಅವರ ಉತ್ತರಾಧಿಕಾರಿಯಾಗಿ ರಾಜ್ಯದ ಮುಖ್ಯಮಂತ್ರಿಯಾದವರೇ ನರೇಂದ್ರ ಮೋದಿ. ಕೇಶುಭಾಯಿ ಪಟೇಲ್‌ ಅವರಿಗೆ ರಾಜಕೀಯ ಅಸ್ಥಿರತೆ, ಶಂಕರ್‌ ಸಿಂಘ್‌ ವಘೇಲರ ಬಂಡಾಯದ ಪರಿಣಾಮ ಒಂದು ಕಡೆ ಸವಾಲುಗಳು ಎದುರಾಗಿದ್ದವು. ಮತ್ತೊಂದು ಕಡೆ 2001ರಲ್ಲಿ ಗುಜರಾತ್‌ನ ಭುಜ್‌ನಲ್ಲಿ ಸಂಭವಿಸಿದ ಭೀಕರ ಭೂಕಂಪ ರಾಜಕೀಯದ ಚಿತ್ರಣವನ್ನೇ ಬದಲಿಸಿತು. ದುರ್ಬಲ ಆಡಳಿತ ಕೇಶುಭಾಯಿ ಪಟೇಲರ ರಾಜಕೀಯ ಜೀವನವನ್ನೂ ಕ್ಷೀಣಿಸಿತು. ಆಗ ಪ್ರಧಾನಿಯಾಗಿದ್ದ ವಾಜಪೇಯಿ ಅವರು ಗುಜರಾತ್‌ನಲ್ಲಿ ಪಕ್ಷದ ವರ್ಚಸ್ಸು ವೃದ್ಧಿಸಲು ಹೊಸ ನಾಯಕತ್ವದ ಹುಡುಕಾಟ ನಡೆಸಿದರು. ಈ ಅನ್ವೇಷಣೆಯಲ್ಲಿ ಸಿಕ್ಕಿದ ಉತ್ತರ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ನರೇಂದ್ರ ಮೋದಿ! ಪ್ರಧಾನಿ ವಾಜಪೇಯಿ ಅವರ ಬುಲಾವ್‌ ಮೇರೆಗೆ ಅವರ ನಿವಾಸಕ್ಕೆ ತೆರಳಿದ ಮೋದಿಯವರಿಗೆ ಅಚ್ಚರಿ ಕಾದಿತ್ತು. ದೆಹಲಿಯಿಂದ ಗುಜರಾತ್‌ಗೆ ತೆರಳಿ ಮುಖ್ಯಮಂತ್ರಿಯಾಗುವಂತೆ ವಾಜಪೇಯಿ ಸೂಚಿಸಿದ್ದರು. ಆದರೆ ಆಗಲೇ ಪಕ್ಷದ ಸಂಘಟನಾ ಕೌಶಲದಲ್ಲಿ ತಮ್ಮ ಛಾಪು ಮೂಡಿಸಿದ್ದ ಮೋದಿಯವರು ಸರ್ಕಾರವನ್ನೂ ನಡೆಸಬಲ್ಲರು ಎಂಬ ನಂಬಿಕೆ ವಾಜಪೇಯಿ ಅವರಲ್ಲಿತ್ತು. ಅದರಂತೆ ಮೋದಿ ಅವರು 2001ರಲ್ಲಿ ಗುಜರಾತ್‌ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.2002ರ ಬಳಿಕ ಪಟೇಲ್‌ ಬಿಜೆಪಿಯಿಂದ ನಿರ್ಗಮಿಸಿದರು. ಅಲ್ಲಿಂದ ಗುಜರಾತ್‌ನಲ್ಲಿ ಮೋದಿ ಅವರ ಯುಗಾರಂಭವಾಯಿತು.

ಮೊದಲ ಪ್ರಯತ್ನದಲ್ಲೇ ಶಾಸಕ, ಆಗಲೂ ಇತ್ತು ಜನಪ್ರಿಯತೆ

2002ರ ಫೆಬ್ರವರಿ 24ರಂದು ನರೇಂದ್ರ ಮೋದಿ ಅವರು ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದರು. ರಾಜ್‌ಕೋಟ್‌-2 ಕ್ಷೇತ್ರದ ಉಪಚುನಾವಣೆಯಲ್ಲಿ ಅವರು ಗೆಲುವು ಸಾಧಿಸಿದ್ದರು. ರಾಜ್‌ಕೋಟ್‌-2 ವಿಧಾನಸಭೆ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾದಾಗ ಮೋದಿ ಅವರು ಮೊದಲ ಬಾರಿ ಸ್ಪರ್ಧಿಸಿದ್ದರು. ಅವರು 14,728 ಮತಗಳಿಂದ ಮೊದಲ ಚುನಾವಣೆಯಲ್ಲಿಯೇ ಗೆಲುವು ಸಾಧಿಸಿದ್ದರು. ಚುನಾವಣೆ ಗೆಲುವಿನ ಬಳಿಕ ಅವರು ಕ್ಷೇತ್ರದಲ್ಲಿ ರೋಡ್‌ ಶೋ ನಡೆಸಿದ್ದರು. ಆಗಲೂ, ಜನ ಮೋದಿ ಅವರೆಂದರೆ ಮುಗಿಬೀಳುತ್ತಿದ್ದರು. ಹಿರಿಯ ಮಹಿಳೆಯರು ಕೂಡ ಬಂದು ಅವರಿಗೆ ಹಾರ ಹಾಕಿ ಹೋಗುತ್ತಿದ್ದರು. “ಗುಜರಾತ್‌ನ ಸಿಂಹ ಬಂತು” ಎಂಬುದಾಗಿ ಘೋಷಣೆ ಮಾಡಿದ್ದರು. ಇದಕ್ಕೂ ಮೊದಲು ಅಂದರೆ, 2001ರಲ್ಲಿಯೇ ಮೋದಿ ಗುಜರಾತ್‌ ಸಿಎಂ ಆಗಿದ್ದರು. ಸಿಎಂ ಗಾದಿಗೇರಿದ ಬಳಿಕ ಅವರು ಶಾಸಕರಾಗಿ ಆಯ್ಕೆಯಾಗಿದ್ದರು.

ಗುಜರಾತ್‌ನಲ್ಲಿ 2001ರ ಜನವರಿ 26ರ ಗಣರಾಜ್ಯೋತ್ಸವದಂದು ಸಂಭವಿಸಿದ ಭೀಕರ ಭೂಕಂಪದಲ್ಲಿ 13 ಸಾವಿರಕ್ಕೂ ಹೆಚ್ಚು ಮಂದಿ ಅಸುನೀಗಿದ್ದರು. ಲಕ್ಷಾಂತರ ಮಂದಿ ಗಾಯಗೊಂಡಿದ್ದರು. ಗುಜರಾತ್‌ನ ಕಛ್‌ ಜಿಲ್ಲೆಯಲ್ಲಿ ಸಂಭವಿಸಿದ ಭೂಕಂಪದ ಬಳಿಕ ಪರಿಹಾರ, ಪುನರ್ವಸತಿ ಕಾರ್ಯಾಚರಣೆಯ ಜವಾಬ್ದಾರಿ ನರೇಂದ್ರ ಮೋದಿಯವರಿಗಿತ್ತು. ನಂತರದ ವರ್ಷಗಳಲ್ಲಿ ಕಛ್‌ ವಲಯವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಯಿತು. ಭೂಕಂಪದ ಸಂದರ್ಭದಲ್ಲಿ ಮೋದಿ ಅವರು ಮುಂದೆ ನಿಂತು ಅಧಿಕಾರಿಗಳು, ಶಾಸಕರನ್ನು ಪರಿಹಾರ ಕಾರ್ಯಕ್ಕೆ ನಿಯೋಜಿಸಿದ್ದು, ಆಡಳಿತ, ಕಾರ್ಯವೈಖರಿಯಲ್ಲಿ ಬದಲಾವಣೆ ತಂದಿದ್ದು ಪ್ರಮುಖವಾಗಿತ್ತು.

ಗೋಧ್ರಾ ಹಿಂಸಾಚಾರ

ಗುಜರಾತ್‌ ಸಿಎಂ ಆಗಿ ನರೇಂದ್ರ ಮೋದಿಯವರು ಅಧಿಕಾರ ಸ್ವೀಕರಿಸಿದ ಆರಂಭಿಕ ವರ್ಷಗಳು ಕಲ್ಲು ಮುಳ್ಳಿನ ದುರ್ಗಮ ಹಾದಿಯಾಗಿತ್ತು. ಭೀಕರ ಭೂಕಂಪನದಿಂದ ರಾಜ್ಯ ತತ್ತರಿಸಿತ್ತು. ಲಕ್ಷಾಂತರ ನಿರಾಶ್ರಿತರ ಪುನರ್ವಸತಿಯ ಬೃಹತ್‌ ಸವಾಲು ಎದುರಿತ್ತು. ದುರದೃಷ್ಟವಶಾತ್‌ 2002ರ ಫೆಬ್ರವರಿ-ಮಾರ್ಚ್‌ ಅವಧಿಯಲ್ಲಿ ಗೋಧ್ರಾದಲ್ಲಿ ನಡೆದ ಘೋರ ನರಮೇಧ, ನಂತರ ಇಡೀ ರಾಜ್ಯವನ್ನು ಪ್ರಕ್ಷುಬ್ಧವಾಗಿಸಿದ ಕೋಮು ಗಲಭೆ, ನರೇಂದ್ರ ಮೋದಿಯವರಿಗೆ ಅಗ್ನಿ ಪರೀಕ್ಷೆಯಾಗಿತ್ತು. ಇದೇ ಸಂದರ್ಭ ಮೋದಿ ವಿರೋಧಿಗಳ ಗ್ಯಾಂಗ್‌ ಅವರ ವಿರುದ್ಧ ನಿರಂತರ ಷಡ್ಯಂತ್ರಗಳನ್ನು ನಡೆಸಿತು. ಮೋದಿಯವರೇ ಈ ಎಲ್ಲ ಗಲಭೆಗಳ ಸೂತ್ರಧಾರ ಎಂದು ಬಿಂಬಿಸಿತು. ಇಪ್ಪತ್ತು ವರ್ಷಗಳ ಕಾಲ ಈ ಗ್ಯಾಂಗ್‌ ಮೋದಿ ವಿರುದ್ಧ ಮಸಲತ್ತು ನಡೆಸಿದರೂ, ಅಂತಿಮವಾಗಿ ಸುಪ್ರೀಂಕೋರ್ಟ್‌, ಮೋದಿಯವರಿಗೆ ಕ್ಲೀನ್‌ ಚಿಟ್‌ ನೀಡಿತು. ಗೋಧ್ರಾ ಗಲಭೆಯಲ್ಲಿ ಮೋದಿಯವರದ್ದು ಯಾವುದೇ ತಪ್ಪಿಲ್ಲ ಎಂದ ಸುಪ್ರೀಂಕೋರ್ಟ್‌, ಮೋದಿ ವಿರುದ್ಧ ನಡೆದ 16 ವರ್ಷಗಳ ಷಡ್ಯಂತ್ರದ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಹಾಗೂ ತಪ್ಪಿತಸ್ಥರನ್ನು ಕಟಕಟೆಗೆ ತಂದು ನಿಲ್ಲಿಸಬೇಕು ಎಂದೂ ಆದೇಶಿಸಿತು. ಹೀಗಾಗಿ ಇದು ಐತಿಹಾಸಿಕ ಮಹತ್ವದ ತೀರ್ಪುಗಳಲ್ಲೊಂದು.

ಗುಜರಾತ್‌ ಅಭಿವೃದ್ಧಿಗೆ ಆದ್ಯತೆ

ಗುಜರಾತ್‌ನ ಅಭಿವೃದ್ಧಿಗೆ ಸಂಬಂಧಿಸಿ ಮೋದಿಯವರ ಯೋಜನೆಗಳು ಹಲವು. ಅವುಗಳ ಪೈಕಿ ನರ್ಮದಾ ಅಣೆಕಟ್ಟೆ ಯೋಜನೆಯನ್ನು ಪೂರ್ಣಗೊಳಿಸಿರುವುದೂ ಒಂದು. ದಕ್ಷಿಣ ಗುಜರಾತ್‌ನಿಂದ ಸೌರಾಷ್ಟ್ರಕ್ಕೆ ನರ್ಮದೆಯ ನೀರನ್ನು ತಂದು ನೀರಾವರಿ ಕಲ್ಪಿಸುವ ಯೋಜನೆಯ ವಿರುದ್ಧ ಮೇಧಾ ಪಾಟ್ಕರ್‌ ಮತ್ತಿತರ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು. ಆದರೆ ಸರ್ದಾರ್‌ ಸರೋವರ್‌ ಯೋಜನೆ ಇವತ್ತು 18.45 ಲಕ್ಷ ಹೆಕ್ಟೇರ್‌ ಭೂಮಿಗೆ ನೀರಾವರಿ ವ್ಯವಸ್ಥೆ ನೀಡಿದೆ. 9,490 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಿದೆ. ಪ್ರವಾಹದಿಂದ ರಕ್ಷಣೆ ಕೊಟ್ಟಿದೆ. ಕೃಷಿ ಉತ್ಪಾದನೆಯ ಹೆಚ್ಚಳಕ್ಕೆ ಪುಷ್ಟಿ ನೀಡಿದೆ. ಮೋದಿಯವರು ಗುಜರಾತ್‌ ಸಿಎಂ ಆಗಿದ್ದ ಅವಧಿಯಲ್ಲಿ ಎಂಟು ವರ್ಷಗಳ ಕಾಲ ರಾಜ್ಯ ಎರಡಂಕಿಯ ಆರ್ಥಿಕ ಬೆಳವಣಿಗೆ ದಾಖಲಿಸಿ ದೇಶದ ಗಮನ ಸೆಳೆದಿತ್ತು. ತ್ವರಿತ ಅಭಿವೃದ್ಧಿಗೆ ಗುಜರಾತ್‌ ಮಾದರಿಯಾಗಿತ್ತು. ಟಾಟಾ ನ್ಯಾನೋ ಕಾರು ಉತ್ಪಾದನೆ ಘಟಕವನ್ನು ಮೋದಿ ಗುಜರಾತ್‌ಗೆ ತೆಗೆದುಕೊಂಡು ಹೋದರು. ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಿ ರಾಜ್ಯಕ್ಕೆ ಹೂಡಿಕೆ ಹರಿದಬರುವಂತೆ ಮಾಡಿದರು. ಇದೇ ಕಾರಣಕ್ಕಾಗಿ ಅವರು, 2002, 2007 ಹಾಗೂ 2012ರಲ್ಲಿ ನಡೆದ ಗುಜರಾತ್‌ ವಿಧಾನಸಭೆ ಚುನಾವಣೆಗಳಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದರು. ದೇಶಾದ್ಯಂತ ಗುಜರಾತ್‌ ಮಾಡೆಲ್‌ ಅಭಿವೃದ್ಧಿ ಹೆಸರಾಯಿತು.

2014ರಲ್ಲಿ ಬಿಜೆಪಿಗೆ ಬಹುಮತ, ಮೋದಿಗೆ ಬಹುಪರಾಕ್

ಪ್ರಧಾನಿ ನರೇಂದ್ರ ಮೋದಿಯವರ ಅಭೂತಪೂರ್ವ ಯಶಸ್ಸು, ಜನಪ್ರಿಯತೆಗೆ ಅವರೇ ವಿವರಿಸಬೇಕಿಲ್ಲ. 2014 ಮತ್ತು 2019ರ ಲೋಕಸಭೆ ಚುನಾವಣೆಯ ಫಲಿತಾಂಶದ ಅಂಕಿ ಅಂಶಗಳೇ ಸಾಕು. 2014ರಲ್ಲಿ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿಯವರು‌ ಚುನಾವಣೆಯಲ್ಲಿ ಮೂರು ದಶಕಗಳ ಸಮ್ಮಿಶ್ರ ಸರ್ಕಾರಗಳ ಜಂಜಾಟಕ್ಕೆ ತೆರೆ ಎಳೆದರು. 284 ಲೋಕಸಭಾ ಕ್ಷೇತ್ರಗಳಲ್ಲಿ ಗೆದ್ದು ಬಿಜೆಪಿ ನೇತೃತ್ವದ ಎನ್‌ಡಿಎ ಹೊಸ ಇತಿಹಾಸ ಸೃಷ್ಟಿಸಿತು. 31% ಮತಗಳು ಲಭಿಸಿದವು. 2019ರಲ್ಲಿ ಮೋದಿ ಸರ್ಕಾರ ಮತ್ತಷ್ಟು ಪ್ರಬಲವಾಗಿತ್ತು. ಶೇ.37.3ರಷ್ಟು ಮತಗಳು ಮತ್ತು 303 ಕ್ಷೇತ್ರಗಳಲ್ಲಿ ಗೆಲುವಿನ ಫಲಿತಾಂಶ ಬಂದಿತು. ಇದರೊಂದಿಗೆ ಅತಿ ಹೆಚ್ಚು ಕಾಲ ಪ್ರಧಾನಿ ಹುದ್ದೆಯಲ್ಲಿ ಸೇವೆ ಸಲ್ಲಿಸಿದ ಕಾಂಗ್ರೆಸ್ಸೇತರ ರಾಜಕಾರಣಿಯೂ ಆದರು.

ಕಳೆದ 2014ರಿಂದೀಚೆಗೆ ಬಿಜೆಪಿ ಕೇಂದ್ರ ಮತ್ತು ರಾಜ್ಯಗಳ ಮಟ್ಟದಲ್ಲಿನ ಚುನಾವಣೆಗಳಲ್ಲಿ ಸೋತಿದ್ದು ಕಡಿಮೆ, ಗೆಲುವು ಸಾಧಿಸಿದ್ದೇ ಹೆಚ್ಚು. ಬಿಜೆಪಿಯ ಹಿಂದುತ್ವ ಮತ್ತು ಅಭಿವೃದ್ಧಿ ರಾಜಕಾರಣದ ಹಿಂದೆ ನರೇಂದ್ರ ಮೋದಿಯವರ ವರ್ಚಸ್ಸು ಕೆಲಸ ಮಾಡಿದೆ. ಸದಸ್ಯತ್ವದ ದೃಷ್ಟಿಯಿಂದ ಬಿಜೆಪಿ ವಿಶ್ವದ ದೊಡ್ಡ ಪಕ್ಷವೆಂದು ಹೇಳಿಕೊಂಡಿದೆ. ದೇಶದಲ್ಲಿ ಕಾಂಗ್ರೆಸ್‌ಗೆ ಪರ್ಯಾಯವೇ ಇಲ್ಲ ಎಂಬ ಮಾತು ಹಿಂದೊಮ್ಮೆ ಇತ್ತು ಎಂದರೆ ಮುಂದಿನ ಪೀಳಿಗೆಗೆ ನಂಬಲೂ ಕಷ್ಟವಾಗಬಹುದು ಎಂಬ ಸ್ಥಿತಿಗೆ ಕಾಂಗ್ರೆಸ್‌ ಈಗ ತಲುಪಿದೆ. ಪ್ರತಿಪಕ್ಷ ಮಾನ್ಯತೆ ಪಡೆಯಲೂ ಪರದಾಡುವ ಸ್ಥಿತಿ. ಬಿಜೆಪಿ ಈ ಪರಿಯಲ್ಲಿ ಕಾಂಗ್ರೆಸ್‌ ರಾಜಕಾರಣಕ್ಕೆ ಪರ್ಯಾಯವಾಗಿ ಬೆಳೆಯಲಿದೆ ಎಂದು 10 ವರ್ಷಗಳ ಹಿಂದೆ ಯಾವೊಬ್ಬ ರಾಜಕೀಯ ಪಂಡಿತರೂ ಭವಿಷ್ಯ ನುಡಿದಿರಲಿಲ್ಲ.

10 ವರ್ಷದಲ್ಲಿ ಮೋದಿ ಸಾಧನೆಗಳು

ಮೂಲ ಸೌಕರ್ಯ ಅಭಿವೃದ್ಧಿ

ಗ್ರಾಮಗಳಲ್ಲಿ ಮನೆ ಮನೆಗಳಲ್ಲಿ ಶೌಚಾಲಯ ನಿರ್ಮಾಣದಿಂದ ಹಿಡಿದು ಸಾಮಾನ್ಯ ಜನರೂ ವಿಮಾನದಲ್ಲಿ ಪ್ರಯಾಣಿಸುವ ಉಡಾನ್‌ ಯೋಜನೆತನಕ ಮೋದಿ ಆಡಳಿತದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಯಾಗಿದೆ. ದೇಶಾದ್ಯಂತ 11.72 ಕೋಟಿ ಶೌಚಾಲಯ ನಿರ್ಮಿಸಲಾಗಿದೆ. 3.5 ಕೋಟಿ ಮನೆ ನಿರ್ಮಾಣ, ಉಜ್ವಲ ಯೋಜನೆ ಅಡಿಯಲ್ಲಿ 9.6 ಕೋಟಿ ಎಲ್‌ಪಿಜಿ ಸಂಪರ್ಕ ಕಲ್ಪಿಸಲಾಗಿದೆ. ಇನ್ನು ಉಡಾನ್‌ ಯೋಜನೆ ಅಡಿಯಲ್ಲಿ ದೇಶಾದ್ಯಂತ ಇದ್ದ 74 ವಿಮಾನ ನಿಲ್ದಾಣಗಳ ಸಂಖ್ಯೆಯನ್ನು 141ಕ್ಕೆ ಏರಿಸಲಾಗಿದೆ. ಜನಧನ್‌ ಯೋಜನೆ ಮೂಲಕ 50 ಕೋಟಿ ಬ್ಯಾಂಕ್‌ ಖಾತೆಗಳನ್ನು ತೆರೆಯಲಾಗಿದೆ. ರೈಲು ನಿಲ್ದಾಣಗಳನ್ನು ಅತ್ಯಾಧುನೀಕರಣ ಮಾಡಲಾಗಿದೆ. ರೈಲುಗಳಲ್ಲಿ ಜೈವಿಕ ಶೌಚಾಲಯಗಳ ಅಳವಡಿಕೆ, ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿಗಳು, ಎಕ್ಸ್‌ಪ್ರೆಸ್‌ವೇಗಳು ದೇಶದ ನರನಾಡಿಗಳಂತೆ ಕಾಣುತ್ತಿವೆ.

ಡಿಜಿಟಲ್‌ ಇಂಡಿಯಾ ಮೇನಿಯಾ

ನರೇಂದ್ರ ಮೋದಿ ಅವರು ಕಂಡ ಡಿಜಿಟಲ್‌ ಇಂಡಿಯಾ ಕನಸು ಬಹುತೇಕ ನನಸಾಗಿದೆ. ಮೊದಲೆಲ್ಲ ಯಾರಿಗಾದರೂ ಹಣ ಕಳುಹಿಸಬೇಕು ಎಂದರೆ ನೆಟ್‌ ಬ್ಯಾಂಕಿಂಗ್‌ ಮೊರೆ ಹೋಗಬೇಕಿತ್ತು. ಇಲ್ಲವೇ, ಬ್ಯಾಂಕ್‌ನಲ್ಲಿ ಕ್ಯೂ ನಿಂತು ಎನ್‌ಇಎಫ್‌ಟಿ (NEFT) ಮಾಡಬೇಕಿತ್ತು. ಆದರೆ, ಡಿಜಿಟಲ್‌ ಇಂಡಿಯಾ ಅಭಿಯಾನವು ಯಶಸ್ವಿಯಾಗಿದ್ದು, ಈಗ ಯುಪಿಐ ಮೂಲಕ ಕ್ಷಣಮಾತ್ರದಲ್ಲಿ ಹಣ ಕಳುಹಿಸಬಹುದಾಗಿದೆ. ಡಿಜಿಟಲ್‌ ಆರ್ಥಿಕತೆ ಸೃಷ್ಟಿಯಾಗಿದೆ. ಗ್ರಾಮದ ಗೂಡಂಗಡಿಗಳಿಂದ ಹಿಡಿದು ನಗರಗಳಲ್ಲಿ ತರಕಾರಿ ಮಾರುವವರೂ ಈಗ ಕ್ಯೂಆರ್‌ ಕೋಡ್‌ ಸ್ಕ್ಯಾನರ್‌ ಇಟ್ಟುಕೊಂಡಿದ್ದಾರೆ. ಸದ್ಯ, ಶೇ. 75ರಷ್ಟು ಚಿಲ್ಲರೆ ವ್ಯಾಪಾರವು ಯುಪಿಐ ಮೂಲಕವೇ ಆಗುತ್ತಿದೆ. ಕೋಟ್ಯಂತರ ಜನ, ಲಕ್ಷಾಂತರ ಕೋಟಿ ರೂಪಾಯಿಯನ್ನು ಯುಪಿಐ ಮೂಲಕವೇ ವರ್ಗಾವಣೆ ಮಾಡುತ್ತಿದ್ದಾರೆ. ಯುಪಿಐ ವ್ಯವಸ್ಥೆಯನ್ನು ಬೇರೆ ದೇಶಗಳೂ ಅಳವಡಿಸಿಕೊಂಡಿವೆ.

370ನೇ ವಿಧಿ ರದ್ದು

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370ನೇ ವಿಧಿ ರದ್ದುಗೊಳಿಸಿರುವುದು ನರೇಂದ್ರ ಮೋದಿ ಸರ್ಕಾರದ ದಿಟ್ಟ ತೀರ್ಮಾನಗಳಲ್ಲಿ ಒಂದಾಗಿದೆ. ಉಗ್ರರ ತಾಣವಾಗಿದ್ದ, ಪ್ರತ್ಯೇಕವಾದಿಗಳ ಗೂಡಾಗಿದ್ದ, ಕಲ್ಲು ತೂರಾಟಗಾರರ ಪ್ರಯೋಗ ತಾಣವಾಗಿದ್ದ ಕಾಶ್ಮೀರದಲ್ಲಿ ಈಗ ಜಿ-20 ಸಭೆ ನಡೆಯುವಂತಾಗಿದ್ದರೆ ಅದಕ್ಕೆ 370ನೇ ವಿಧಿ ರದ್ದುಗೊಳಿಸಿದ್ದೇ ಕಾರಣವಾಗಿದೆ. 2019ರ ಆಗಸ್ಟ್‌ 5ರಂದು 370ನೇ ವಿಧಿ ರದ್ದು ಬಳಿಕ ಉಗ್ರರ ಉಪಟಳ ನಿಲ್ಲದಿದ್ದರೂ ಪ್ರತ್ಯೇಕವಾದಿಗಳನ್ನು ಹೆಡೆಮುರಿ ಕಟ್ಟಲಾಗಿದೆ. ಕಾಶ್ಮೀರದಲ್ಲಿ ವಿದೇಶಿ ಗಣ್ಯರು ಬಂದು ಶಾಪಿಂಗ್‌ ಮಾಡುವಂತಾಗಿದೆ. ಆದರೂ, ಕೇಂದ್ರ ಸರ್ಕಾರವು ಕಾಶ್ಮೀರ ಪಂಡಿತರಿಗೆ ಭದ್ರತೆ ಒದಗಿಸುವಲ್ಲಿ ಹಿನ್ನಡೆ ಅನುಭವಿಸಿದ್ದು, ಅದರ ಕುರಿತು ಹೆಚ್ಚಿನ ಗಮನ ಹರಿಸಬೇಕಿದೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕೊನೆಯ ಹಂತಕ್ಕೆ ಬಂದಿದ್ದು, ಇದನ್ನು ಸುಗಮವಾಗಿ ಕೈಗೊಂಡ ಕೀರ್ತಿ, ಬಿಜೆಪಿ ನೀಡಿದ ಭರವಸೆಯನ್ನು ಈಡೇರಿಸಿದ ಕೀರ್ತಿ ಕೇಂದ್ರ ಸರ್ಕಾರಕ್ಕೆ ಸಲ್ಲಬೇಕು. ಅಯೋಧ್ಯೆಯಲ್ಲಿ ರಾಮಮಂದಿರ ಪರ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ಬಳಿಕ ದೇಶಾದ್ಯಂತ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರದಂತೆ ನೋಡಿಕೊಂಡಿದ್ದು, ಸುಗಮವಾಗಿ ರಾಮಮಂದಿರ ನಿರ್ಮಾಣಕ್ಕೆ ವ್ಯವಸ್ಥೆ ಮಾಡಿದ್ದು ಕೇಂದ್ರ ಸರ್ಕಾರದ ಸಾಧನೆಯಾಗಿದೆ. ಅಷ್ಟೇ ಅಲ್ಲ, 2024ರ ಜನವರಿಯಲ್ಲಿ ರಾಮಮಂದಿರದಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆಗೆ ಸರ್ಕಾರ ಸಿದ್ಧವಾಗಿದೆ. ಹಾಗೆಯೇ, ಸುಪ್ರೀಂ ಕೋರ್ಟ್‌ ಆದೇಶದಂತೆ ಮಸೀದಿ ನಿರ್ಮಾಣಕ್ಕೂ ಕೇಂದ್ರ ಸರ್ಕಾರ ಅನುವು ಮಾಡಿಕೊಟ್ಟಿದೆ.

ಕೊರೊನಾ ಸಂದರ್ಭದಲ್ಲಿ ಉಚಿತವಾಗಿ ಆಹಾರ ಧಾನ್ಯ ವಿತರಣೆ

ಕೊರೊನಾ ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ದೇಶದ ಕೋಟ್ಯಂತರ ಜನ ಸಂಕಷ್ಟಕ್ಕೆ ಸಿಲುಕಿದ್ದಾಗ ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಅನ್ನ ಯೋಜನೆ ಮೂಲಕ (PMGKAY) ಬಡವರಿಗೆ ಉಚಿತವಾಗಿ ಆಹಾರ ಧಾನ್ಯ ವಿತರಿಸಿದ್ದು ಕೂಡ ಕೇಂದ್ರದ ಸಾಧನೆಯಾಗಿದೆ. ದೇಶದ 80 ಕೋಟಿ ಜನರಿಗೆ ಉಚಿತವಾಗಿ ಆಹಾರ ಧಾನ್ಯ ವಿತರಣೆ ಮಾಡುವ ಮೂಲಕ ಜನರ ನೆರವಿಗೆ ಕೇಂದ್ರ ಸರ್ಕಾರ ನಿಂತಿದ್ದು ಸ್ಮರಣೀಯ.

ದೇಶದ ಗಡಿ ಭದ್ರ, ಉಗ್ರರಿಗೆ ತಿರುಗೇಟು

ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ದೇಶದ ಗಡಿಗಳು ಮತ್ತಷ್ಟು ಭದ್ರವಾಗಿವೆ. ಉಗ್ರರ ದಾಳಿಗಳು ಬಹುತೇಕವಾಗಿ ನಿಂತುಹೋಗಿವೆ. 2016ರಲ್ಲಿ ಪಾಕಿಸ್ತಾನದ ಉಗ್ರರು ಜಮ್ಮು-ಕಾಶ್ಮೀರದ ಉರಿ ಮೇಲೆ ನಡೆಸಿದ ದಾಳಿಗೆ ಪ್ರತಿಯಾಗಿ ಸರ್ಜಿಕಲ್‌ ಸ್ಟ್ರೈಕ್‌, 2019ರಲ್ಲಿ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಗೆ ಬಾಲಾಕೋಟ್‌ ವಾಯುದಾಳಿ ಮೂಲಕ ಪಾಕಿಸ್ತಾನದ ಉಗ್ರ ಚಟುವಟಿಕೆಗಳಿಗೆ ಪ್ರತ್ಯುತ್ತರ ನೀಡಲಾಗಿದೆ. ಜಮ್ಮು-ಕಾಶ್ಮೀರದಲ್ಲಿ ಉಗ್ರರ ಉಪಟಳ, ಕಲ್ಲು ತೂರಾಟ, ಪ್ರತ್ಯೇಕವಾದಿಗಳನ್ನು ಹೆಡೆಮುರಿಕಟ್ಟಿದ್ದು ಮೋದಿ ಸರ್ಕಾರದ ದಿಟ್ಟ ನಿರ್ಧಾರವಾಗಿದೆ.

ಎಲ್ಲರಿಗೂ ಲಸಿಕೆ ವಿತರಣೆ

ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ದೇಶೀಯವಾಗಿ ಕೊರೊನಾ ನಿರೋಧಕ ಲಸಿಕೆ ಉತ್ಪಾದನೆ ಜತೆಗೆ ದೇಶಾದ್ಯಂತ ಕೋಟ್ಯಂತರ ಜನರಿಗೆ ವಿತರಣೆ ಮಾಡಿದ್ದು, ಎರಡು ಲಾಕ್‌ಡೌನ್‌ ಮಾಡಿಯೂ ಆರ್ಥಿಕತೆ ದಿವಾಳಿಯಾಗದಂತೆ ನೋಡಿಕೊಂಡಿದ್ದು, ಆಮ್ಲಜನಕ ಕೊರತೆ, ವೈದ್ಯಕೀಯ ಮೂಲ ಸೌಕರ್ಯಗಳ ಕೊರತೆ ಮಧ್ಯೆಯೂ ಕೊರೊನಾ ನಿರ್ವಹಣೆ ಮಾಡಿದ್ದು ಮೋದಿ ಸರ್ಕಾರದ ಸಾಧನೆ ಎಂಬುದರಲ್ಲಿ ಎರಡು ಮಾತಿಲ್ಲ. ಕೊರೊನಾ ನಿರೋಧಕ ಲಸಿಕೆಯ 200 ಕೋಟಿಗೂ ಅಧಿಕ ಡೋಸ್‌ ವಿತರಣೆ ಮಾಡಿದ್ದು, ಬೇರೆ ರಾಷ್ಟ್ರಗಳಿಗೂ ಲಸಿಕೆ ರವಾನೆ ಮಾಡಿದ್ದು ಸಾಧನೆಯಾಗಿದೆ.

ರೈತರ ಖಾತೆಯಲ್ಲಿ ಕಾಂಚಾಣ ಝಣಝಣ

ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆ ಅಡಿಯಲ್ಲಿ ರೈತರಿಗೆ ವರ್ಷದಲ್ಲಿ ತಲಾ 2 ಸಾವಿರ ರೂ. ನಂತೆ ಮೂರು ಬಾರಿ 6 ಸಾವಿರ ರೂ. ನೀಡುವ ಮೂಲಕ ಕೇಂದ್ರ ಸರ್ಕಾರ ನೀಡಿದ ಭರವಸೆಯನ್ನು ಉಳಿಸಿಕೊಂಡಿದೆ. ಇದರಿಂದ ದೇಶದ ಕೋಟ್ಯಂತರ ರೈತರ ಖಾತೆಗೆ ಹಣ ಜಮೆಯಾಗುತ್ತಿದ್ದು, ಯೋಜನೆ ಜಾರಿಯಲ್ಲಿ ಎಲ್ಲೂ ಲೋಪವಾಗದಂತೆ ಕೇಂದ್ರ ಸರ್ಕಾರ ನೋಡಿಕೊಂಡಿದೆ.

ವಿದೇಶಗಳಿಂದ ಭಾರತೀಯರ ರಕ್ಷಣೆ

ಮೋದಿ ಸರ್ಕಾರವು ಎರಡನೇ ಅವಧಿಯ ವೇಳೆ, ಬೇರೆ ದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ ಭಾರತೀಯರನ್ನು ರಕ್ಷಿಸುವಲ್ಲಿ ಬೇರೆ ರಾಷ್ಟ್ರಗಳಿಗೂ ಮಾದರಿ ಎನಿಸಿದೆ. ಅಫಘಾನಿಸ್ತಾನದಲ್ಲಿ ತಾಲಿಬಾನ್‌ ಉಗ್ರರ ಉಪಟಳ ಆರಂಭವಾದಾಗ ಕೇಂದ್ರ ಸರ್ಕಾರವು 700 ಭಾರತೀಯರನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದಿದೆ. ಉಕ್ರೇನ್‌ನಲ್ಲಿ ರಷ್ಯಾ ಆಕ್ರಮಣ ಆರಂಭಿಸಿದಾಗ 23 ಸಾವಿರ ಭಾರತೀಯರನ್ನು ತಾಯ್ನಾಡಿಗೆ ಕರೆದುಕೊಂಡು ಬಂದಿದೆ. ಅಷ್ಟೇ ಏಕೆ, ಕೆಲ ದಿನಗಳ ಹಿಂದೆಯೇ ಸುಡಾನ್‌ನಲ್ಲಿ ಆಂತರಿಕ ಸಂಘರ್ಷ ಉಂಟಾದಾಗ, ‘ಆಪರೇಷನ್‌ ಕಾವೇರಿ’ ಮೂಲಕ ಕನ್ನಡಿಗರೂ ಸೇರಿ ನೂರಾರು ಭಾರತೀಯರನ್ನು ಸರ್ಕಾರ ಸುರಕ್ಷಿತವಾಗಿ ಕರೆದುಕೊಂಡು ಬಂದಿದೆ.

ದೇಶದಲ್ಲಿ ಇಷ್ಟೆಲ್ಲ ಬದಲಾವಣೆಗೆ ಕಾರಣವಾಗಿರುವ ನರೇಂದ್ರ ಮೋದಿ ಅವರು ಭಾನುವಾರ ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆ ಮೂಲಕ ಅವರು ನೆಹರು ಅವರ ದಾಖಲೆಯನ್ನು ಮುರಿಯಲು ಮತ್ತೊಂದು ಹೆಜ್ಜೆ ಮುಂದಿಡಲು ಸಜ್ಜಾಗಿದ್ದಾರೆ.

ಇದನ್ನೂ ಓದಿ: Modi 3.0 Cabinet: ನರೇಂದ್ರ ಮೋದಿ ಕ್ಯಾಬಿನೆಟ್‌ನಲ್ಲಿ ಯಾರಿಗೆಲ್ಲ ಸಚಿವ ಸ್ಥಾನ? ಇವರೇ ನೋಡಿ ಸಂಭಾವ್ಯ ಮಿನಿಸ್ಟರ್‌ಗಳು

Exit mobile version